ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ: ದೇವೇಗೌಡ

ಜೆಡಿಎಸ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ
Last Updated 13 ಏಪ್ರಿಲ್ 2019, 14:28 IST
ಅಕ್ಷರ ಗಾತ್ರ

ತುಮಕೂರು: ‘ನನ್ನ ರಾಜಕೀಯ ಜೀವನದಲ್ಲಿ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ಎಲ್ಲ ಜಾತಿ, ಸಮುದಾಯಕ್ಕೂ ಸಾಮಾಜಿಕ ನ್ಯಾಯದಡಿ ಸ್ಪಂದಿಸಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ಹಾಗೂ ತುಮಕೂರು ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಹೇಳಿದರು.

ನಗರದ ಗ್ರಂಥಾಲಯ ಆವರಣದಲ್ಲಿ ನಡೆದ ಜೆಡಿಎಸ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದರು.

‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಲಭಿಸಬೇಕು, ರಾಜಕೀಯ ಅಧಿಕಾರ ಲಭಿಸಬೇಕು ಎಂದು ಹೋರಾಟ ನಡೆಸಿದೆ. ಅದರ ಫಲವೇ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಕಾರಣವಾಯಿತು. ಚುನಾವಣೆ ಸಂದರ್ಭದಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದ್ದು, ಇದಕ್ಕೆ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

’ತುಮಕೂರು ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸುವುದು ನನಗೆ ಬಿಟ್ಟು ಬಿಡಿ. ಎಲ್ಲ ಹಳ್ಳಿಗಳಿಗೂ ಕುಡಿಯಲು ಸಮರ್ಪಕ ನೀರು ಕೊಡುವ ವ್ಯವಸ್ಥೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್. ವಿಶ್ವನಾಥ್ ಮಾತನಾಡಿ, ‘ದೇವರಾಜ್ ಅರಸ್, ಎಲ್.ಜಿ.ಹಾವನೂರು ಅವರಿಗೆ ಹಿಂದುಳಿದ ವರ್ಗ ಎಂದರೆ ಜೀವಾಳ. ಈ ಮಹನೀಯರು ಹಿಂದುಳಿದ ವರ್ಗದ ಏಳಿಗೆಗೆ ಶ್ರಮಿಸಿದ ಹಾದಿಯಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರು ಸಾಗಿದ್ದಾರೆ. ಅವರು ತುಮಕೂರು ಕ್ಷೇತ್ರದಲ್ಲಿ ಗೆದ್ದು ಲೋಕಸಭೆಗೆ ಹೋದರೆ ಪ್ರಧಾನಿ ಆಗುವ ಅವಕಾಶವಿದೆ. ಆ ಅವಕಾಶ ಕೊಟ್ಟ ಹೆಗ್ಗಳಿಕೆ ಈ ಕ್ಷೇತ್ರಕ್ಕೆ ಸಲ್ಲುತ್ತದೆ. ಹೀಗಾಗಿ, ಈ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಸಿದ್ಧರಾಮಯ್ಯ ಈ ಎತ್ತರಕ್ಕೆ ಬೆಳೆಯಲು ದೇವೇಗೌಡರೇ ಕಾರಣ. ಅದನ್ನು ಯಾರೂ ಅಲ್ಲಗಳೆಯಲಾರರು. ರಾಜಕೀಯ ಸಾಕು ಎಂದು ನಾನು ನಿರ್ಲಿಪ್ತನಾದಾಗ ಪಕ್ಷಕ್ಕೆ ಕರೆತಂದು ಶಾಸಕನ್ನಾಗಿಸಿ ರಾಜ್ಯ ಅಧ್ಯಕ್ಷ ಸ್ಥಾನವನ್ನು ದೇವೇಗೌಡರು ಕೊಟ್ಟಿದ್ದಾರೆ. ಹೀಗೆ ಹಿಂದುಳಿದ ವರ್ಗದ ಅನೇಕ ನಾಯಕರನ್ನು ಅವರು ಬೆಳೆಸಿದ್ದಾರೆ. ನಾಯಕ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲು ಸಿಗಲು ದೇವೇಗೌಡರೇ ಕಾರಣ. ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಪಟ್ಟು ಹಿಡಿದು ಮೀಸಲಾತಿ ಕೊಡಿಸಿದ್ದು ಗೌಡರೇ’ ಎಂದು ವಿವರಿಸಿದರು.

ಪ್ರೊ.ರವಿವರ್ಮಕುಮಾರ್ ಮಾತನಾಡಿ, ‘ದೇಶದಲ್ಲಿನ ಸಂವಿಧಾನ ಸಂಸ್ಥೆಗಳನ್ನು ನಾಶ ಮಾಡಿ ಮೋದಿ ಹೆಸರಿನ ಒಂದು ಪ್ರಯೋಗ ಶಾಲೆ ಆರಂಭಿಸಲಾಗುತ್ತಿದೆ. ಇದು ದೇಶಕ್ಕೆ ಗಂಡಾಂತರವಾದುದು’ ಎಂದು ಹೇಳಿದರು.

’ಮೀಸಲಾತಿ ಉಲ್ಟಾ ಮಾಡುವ ಹುನ್ನಾರ ನಡೆಯುತ್ತಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಲಭಿಸಿದ ಮೀಸಲಾತಿಗೆ ಮೋದಿ ಸರ್ಕಾರದಲ್ಲಿ ಕಂಟಕ ಎದುರಾಗಿದೆ. ಅದರ ರಕ್ಷಣೆಗೆ ಎಲ್ಲ ಹಿಂದುಳಿದ ವರ್ಗ, ಪರಿಶಿಷ್ಟ, ಪರಿಶಿಷ್ಟ ಪಂಗಡ, ಶೋಷಿತರು ಏಕತೆಯ ಹೋರಾಟ ನಡೆಸಬೇಕಾಗಿದೆ. ಅದಕ್ಕೆ ಸೂಕ್ತ ವೇದಿಕೆ ಈ ಚುನಾವಣೆ’ ಎಂದು ಹೇಳಿದರು.

ಹೋರಾಟಗಾರರಾದ ಕೆ.ದೊರೈರಾಜ್ ಮಾತನಾಡಿ, ‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ನೆಮ್ಮದಿ, ಸಾಮರಸ್ಯ ಹಾಳಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ದುರ್ಬಲರ ಮೇಲೆ ದೌರ್ಜನ್ಯ ಹೆಚ್ಚಾಗಿದೆ’ ಎಂದು ದೂರಿದರು.

ಕುರುಬ ಸಮುದಾಯದ ಯುವ ಮುಖಂಡ ನಿಕೇತ್ ರಾಜ್ ಮಾತನಾಡಿ, ‘ದೇಶದ ಚೌಕೀದಾರ್ ಎಂದು ನರೇಂದ್ರ ಹೇಳಿಕೊಳ್ಳುತ್ತಾರೆ. ನೀರವ್ ಮೋದಿ, ಮಲ್ಯ ಸೇರಿ ಅನೇಕರು ಸಾವಿರಾರು ಕೋಟಿ ಕೊಳ್ಳೆ ಹೊಡೆದುಕೊಂಡು ಹೋಗಿದ್ದಾರೆ. ಈ ಚೌಕೀದಾರ್ ಏನು ಮಾಡುತ್ತಿದ್ದರು. ಇಂತಹ ದುರ್ಬಲ ಚೌಕೀದಾರ್ ದೇಶಕ್ಕೆ ಬೇಕೆ ಎಂದು ಪ್ರಶ್ನಿಸಿದರು. ನಿಜವಾದ ಚೌಕೀದಾರರ ಮಾನವನ್ನೂ ಪ್ರಧಾನಿ ಹರಾಜು ಹಾಕಿದ್ದಾರೆ’ ಎಂದು ಟೀಕಿಸಿದರು.

ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಮಾತನಾಡಿ, ‘ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಮಾಡಿಕೊಂಡಿದ್ದು, ಎಲ್ಲ ಸಮುದಾಯಗಳು ಈ ಪ್ರಯತ್ನಕ್ಕೆ ಕೈ ಜೋಡಿಸಬೇಕು. ದೇವೇಗೌಡರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಮೇಯರ್ ಲಲಿತಾ ರವೀಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಮಾಜಿ ಶಾಸಕ ಸಿ.ಬಿ.ಸುರೇಶ್‌ ಬಾಬು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಗೋವಿಂದರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಮುಖಂಡರಾದ ಗಂಗಣ್ಣ, ಆರ್.ಸಿ.ಅಂಜನಪ್ಪ, ಮೈಲಾರಪ್ಪ, ಶಿವಮೂರ್ತಿ, ತೂ.ಭೀ.ಮಲ್ಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT