ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ನೆಪದಲ್ಲಿ ಅಕ್ರಮ ಮರಳುಗಾರಿಕೆ

ಕಂದಾಯ ಇಲಾಖಾಧಿಕಾರಿಗಳ ಮೌನ ಭಾರತೀಯ ಕೃಷಿಕ ಸಮಾಜದ ಆರೋಪ
Last Updated 7 ಮೇ 2019, 13:38 IST
ಅಕ್ಷರ ಗಾತ್ರ

ಕುಣಿಗಲ್: ಎಡೆಯೂರು ಹೋಬಳಿ ಕಗ್ಗರೆ ಗ್ರಾಮದಲ್ಲಿ ಹರಿಯುತ್ತಿರುವ ಶಿಂಷಾ ನದಿಯ ಉಪನದಿ ಸೇರಿದಂತೆ ನಾಗಿಣಿ ನದಿ ಪಾತ್ರದಲ್ಲಿ ಮರಳುಗಾರಿಕೆಯನ್ನು ಸರ್ಕಾರ ನಿಷೇಧಿಸಿದ್ದರೂ, ಕಾಮಗಾರಿ ನೆಪದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಹೀಗಿದ್ದರೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಭಾರತೀಯ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬೀಚನಹಳ್ಳಿ ಶ್ರೀನಿವಾಸ್ ಆರೋಪಿಸಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿ, ಹಿಂದಿನ ಶಾಸಕ ಡಿ.ನಾಗರಾಜಯ್ಯ ಅವರ ಅವಧಿಯಲ್ಲಿ ಕಗ್ಗೆರೆ ಬಳಿ ನಾಗಿಣಿ ನದಿಗೆ ₹ 6 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿ ಪ್ರಾರಂಭಿಸಲಾಗಿದೆ.

ಕಾಮಗಾರಿ ನಿರ್ವಹಣೆಯ ಸಮಯದಲ್ಲಿ ಯಥೇಚ್ಚವಾಗಿ ಮರಳು ದೊರೆತಿದ್ದು, ನಿಷೇಧಿತ ವಲಯವಾದ್ದರಿಂದ ಆ ಮರಳುನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕಾಗಿದೆ. ಆದರೆ ಕಾಮಗಾರಿ ನಿರ್ವಹಣೆ ಮಾಡುವವರು ಮರಳನ್ನು ಕಾಮಗಾರಿ ಸ್ಥಳದಲ್ಲಿ ಮತ್ತು ದೇವಾಲಯದ ಸಮೀಪ ಸಂಗ್ರಹಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಖಾಸಗಿಯವರು ಸಹ ಮರಳನ್ನು ಸಾಗಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಿಯಮಾನುಸಾರ ಮರಳು ದೊರೆತಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಹಿರಿಯ ಅಧಿಕಾರಗಳಿಗೆ ವರದಿ ನೀಡಿ ಮರಳನ್ನು ವಶಕ್ಕೆ ಪಡೆದು ಗಣಿ ಮತ್ತು ಭೂವಿಜ್ಞಾನ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹರಾಜು ಮಾಡಿ ಸರ್ಕಾರಕ್ಕೆ ರಾಯಧನ ಪಾವತಿ ಮಾಡಬೇಕಿತ್ತು.

ನೆಪ ಮಾತ್ರಕ್ಕೆ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರಕ್ಕೆ ದ್ರೋಹ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT