ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ಶಂಕರೇಶ್ವರಸ್ವಾಮಿ ರಥೋತ್ಸವ

ಕೆರೆಗೋಡಿ-–ರಂಗಾಪುರದಲ್ಲಿ ಭಕ್ತರ ಸಡಗರ
Last Updated 7 ಮಾರ್ಚ್ 2023, 10:04 IST
ಅಕ್ಷರ ಗಾತ್ರ

ತಿಪಟೂರು: ಕಲ್ಪತರು ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾ ಕ್ಷೇತ್ರವಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶಂಕರೇಶ್ವರ ಸ್ವಾಮಿ ರಥೋತ್ಸವವು ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ವೈಭವಯುತವಾಗಿ ನಡೆಯಿತು.

ವಿವಿಧ ಮಾದರಿಯ ಹೂವಿನ ಹಾರ, ಬಣ್ಣ ಬಣ್ಣದ ವಸ್ತ್ರಗಳಿಂದ ರಥವನ್ನು ಶೃಂಗರಿಸಲಾಗಿತ್ತು. ರಥಕ್ಕೆ ವಿಶೇಷವಾಗಿ ಬಾಳೆ ಹಣ್ಣಿನ ಗೊನೆ, ಎಳನೀರು ಕಟ್ಟಲಾಗಿತ್ತು. ವಿಶೇಷ ಪೂಜಾ ವಿಧಾನಗಳೊಂದಿಗೆ ನೆರೆದಿದ್ದ ಭಕ್ತರ ಸಮೂಹ ರಥವನ್ನು ಎಳೆದರು. ರಥೋತ್ಸವದ ಮೇಲೆ ಹೂವು, ಬಾಳೆಹಣ್ಣು ಎಸೆಯುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ದೇವರಿಗೆ ಹರಕೆ ತೀರಿಸಿದರು.

ರಥದ ಇತಿಹಾಸ: 109 ವರ್ಷಗಳ ಹಿಂದೆ ನಾಲ್ಕನೇ ಗುರುಪರದೇಶಿಕೆಂದ್ರ ಸ್ವಾಮೀಜಿ ಕೆರೆಗೋಡಿ ಶಂಕರೇಶ್ವರ ಸ್ವಾಮಿಗೆ ಮಹಾರಥ ನಿರ್ಮಿಸಿ ಅರ್ಪಿಸಿದ್ದರು. ರಥದ ಮೇಲೆ ವಿಭಿನ್ನ ಬಗೆಯ ಕೆತ್ತನೆಗಳು ನೋಡುಗರನ್ನು ಆಕರ್ಷಿಸುತ್ತವೆ. ಆ ರಥಕ್ಕೆ ಈಗಿನ ಸ್ವಾಮೀಜಿ ಹೊಸ ಮೆರುಗು ನೀಡಿ ವಿಜೃಂಭಣೆಯಿಂದ ಪ್ರತಿವರ್ಷ ರಥೋತ್ಸವವನ್ನು ನಡೆಸುತ್ತಾ ಬರುತ್ತಿದ್ದಾರೆ.

ಹರಕೆ ತೀರಿಸಿದ ಭಕ್ತರು: ತಮಗೆ ಒಳಿತಾಗಲೆಂದು ಭಕ್ತರು ಶಂಕರೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಅದರಂತೆ ರಥೋತ್ಸವದ ವೇಳೆ ಹರಕೆ ತೀರಿಸಲು ಬಾಳೆ ಹಣ್ಣು, ದವನ, ಇನ್ನೂ ಕೆಲವರು ತೆಂಗಿನಕಾಯಿ, ಎಳನೀರು, ಮೆಣಸು, ನಿಂಬೆಹಣ್ಣುಗಳನ್ನು ಅರ್ಪಿಸುವುದು ವಾಡಿಕೆಯಾಗಿದೆ.

ರಥೋತ್ಸವದ ವೇಳೆ ಸುಡು ಬಿಸಿಲಿದ್ದರೂ ಭಕ್ತರು ತಲೆ ಕೆಡಿಸಿಕೊಳ್ಳದೆ ಭಕ್ತಿಯ ಪರಾಕಾಷ್ಠೆ ಮೆರೆದರು. ಸಾವಿರಾರು ಭಕ್ತರಿಗೆ ತಾಲ್ಲೂಕಿನ ಅನಗೊಂಡನಹಳ್ಳಿ, ಕೆರೆಗೋಡಿ, ರಂಗಾಪುರ, ತಡಸೂರು, ಹೊಸಹಳ್ಳಿ ಗ್ರಾಮಸ್ಥರು ಪಾನಕ-ಫಲಹಾರ ನೀಡಿ ಬಿಸಿಲಿನ ತಾಪವನ್ನು ತಣಿಸಿದರು.

ಶಾಂತಿ ನೆಲೆಸಲಿ: ‘ಮನುಷ್ಯನ ದುರಾಸೆ, ಸ್ವಾರ್ಥದಿಂದ ವಿಶ್ವದಲ್ಲಿ ಶಾಂತಿಗೆ ಭಂಗ ಉಂಟಾಗಿದೆ. ಸಮಾಜದಲ್ಲಿ ಅಧರ್ಮ ತಾಂಡವವಾಡುತ್ತಿದೆ. ಭಗವಂತ ಬಂದಲ್ಲ ಒಂದು ರೀತಿಯಲ್ಲಿ ಬಂದು ತಡೆಯುತ್ತಾನೆ’ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕಳೆದ ವರ್ಷ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರ ಬದುಕು ಸ್ವಲ್ಪ ಚೇತರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಂಕಷ್ಟದ ದಿನಗಳು ದೂರವಾಗಲಿ ಎಂದು ಆಶಿಸಿದರು.

ರಥೋತ್ಸವದಲ್ಲಿ ಮಠದ ಕಿರಿಯ ಸ್ವಾಮೀಜಿಗಳಾದ ಷಣ್ಮುಖ ಸ್ವಾಮೀಜಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT