ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಗದ್ದಲದಲ್ಲಿ ಮರೆಯಾದ ಗಜ್ಜುಗ!

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ನಾವು ಚಿಕ್ಕವರಿದ್ದಾಗ ಗಜ್ಜುಗದ ಬೀಜಗಳನ್ನು ಕಲ್ಲಿಗೆ ಉಜ್ಜಿ ಗೆಳೆಯರ ಕೈಗೋ, ತೊಡೆಗೋ ಇಟ್ಟು ಬಿಸಿ ಮುಟ್ಟಿಸುತ್ತಿದ್ದೆವು. ಗಜ್ಜುಗದ ಬೀಜಗಳನ್ನು ನಾವು ಗೋಲಿಯಂತೆ ಆಟಕ್ಕೆ ಬಳಸುತ್ತಿದ್ದೆವು. ಆಟವಾಡುವಾಗ ಗಾಯ ಮಾಡಿಕೊಂಡು ಅಳುತ್ತ ಮನೆಗೆ ಹೋದಾಗ ಅವ್ವ ಗಜ್ಜುಗದ ಬೀಜವನ್ನು ಸಾಣೇಕಲ್ಲಿನ ಮೇಲೆ ತಿಕ್ಕಿ ಗಾಯದ ಮೇಲೆ ಲೇಪನ ಮಾಡುತ್ತಿದ್ದರು. ಇಂಥ ಗಜ್ಜುಗವನ್ನು ಬಹಳ ವರ್ಷಗಳಿಂದ ನಾನು ನೋಡಿರಲಿಲ್ಲ. ಮೊನ್ನೆ ಅಳಲಗೇರಿ ಸಂರಕ್ಷಿತ ಕೃಷ್ಣಮೃಗ ಅಭಯಾರಣ್ಯಕ್ಕೆ ಹೋದಾಗ ಈ ಪೊದರು ಕಣ್ಣಿಗೆ ಬಿತ್ತು.

ಈ ಮುಳ್ಳು ಪೊದರು ಗಿಡ, ತನ್ನ ಮುಳ್ಳುಗಳ ನೆರವಿನಿಂದ ಬೇರೆ ಸಸ್ಯಗಳಿಗೆ ಅಂಟಿಕೊಂಡು ಬೆಳೆಯುತ್ತದೆ. ಉಷ್ಣವಲಯ ಪ್ರದೇಶದ ಬೇಲಿಗಳಲ್ಲಿ ಹೆಚ್ಚು ಕಂಡುಬರುತ್ತದೆ.

ಲೆಗ್ಯೂಮಿನೇಸಿ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಸಿಸಾಲ್ವಿನಿಯಾ ಬೊಂಡುಸೆಲ್ಲ ಎಂದಿದೆ. ಬೀಜಗಳು ಕಣ್ಣುಗುಡ್ಡೆಯಂತೆ ಕಾಣುವುದರಿಂದ ಸಂಸ್ಕೃತದಲ್ಲಿ ಕುಬೇರಾಕ್ಷಿ ಎನ್ನುವರು.

ಬೂದುಬಣ್ಣದ ರೆಂಬೆಗಳಲ್ಲಿ ಒಂದರಿಂದ ಎರಡು ಅಡಿ ಉದ್ದದ ಸಂಯುಕ್ತ ಎಲೆಗಳಿರುತ್ತವೆ. ಕಾಂಡದ ಮೇಲೆ ಗಡುಸಾದ, ಚೂಪಾದ ಮುಳ್ಳುಗಳುಂಟು. ಗಜ್ಜುಗದ ಮುಖ್ಯ ಲಕ್ಷಣ ಮುಳ್ಳುಗಳು. ಹಳದಿ ಬಣ್ಣದ ಹೂಗಳು ರೆಸೀಮ್ ಮಾದರಿಯವು. ಹೂಗಳು ಗೊಂಚಲಲ್ಲಿ ಇಳಿಬಿದ್ದಿರುತ್ತವೆ. ಪ್ರತಿ ಹೂವಿನಲ್ಲಿ ಐದು ಪುಷ್ಪಪತ್ರಗಳು ಮತ್ತು ಐದು ಪುಷ್ಪದಳಗಳಿರುತ್ತವೆ. ಕಾಯಿ ಪಾಡ್ ಮಾದರಿಯದು. ಕಾಯಿಯ ಮೇಲೂ ಮುಳ್ಳುಗಳಿರುತ್ತವೆ. ಒಳಗೆ 1-3 ಬೀಜಗಳು ಇರುತ್ತವೆ. ಬೀಜದ ಹೊರಮೈ ನುಣುಪಾಗಿದೆ. ಇದಕ್ಕೆ ಬೂದುಬಣ್ಣವಿದ್ದು, ಹೊಳಪಾಗಿದೆ.

ಆಯುರ್ವೇದ ಮತ್ತು ನಾಟಿ ಔಷಧದಲ್ಲಿ ಗಜ್ಜುಗಕ್ಕೆ ವಿಶೇಷ ಸ್ಥಾನ. ಎಲೆಯಿಂದ ತಯಾರಿಸಿದ ಲೇಪನವನ್ನು ಹಲ್ಲು ನೋವಿನ ಚಿಕಿತ್ಸೆಗೆ ಬಳಸುವರು. ಎಳೆಯ ಎಲೆಗಳನ್ನು ಯಕೃತ್ತಿನ ವ್ಯಾಧಿಯ ಪರಿಹಾರಕ್ಕೆ ಉಪಯೋಗಿಸುವರು. ಬೀಜಗಳನ್ನು ಕಲ್ಲಿನ ಮೇಲೆ ನೀರು ಹಾಕಿ ಉಜ್ಜಿ ಊತ ಬಂದಾಗ ಹಚ್ಚಿದರೆ ಊತ ಕಡಿಮೆಯಾಗುತ್ತದೆ. ಎಲೆ ಮತ್ತು ತೊಗಟೆಗೆ ಜ್ವರ ನಿವಾರಕ, ವಾಂತಿ ನಿವಾರಕ ಗುಣವಿದೆ. ಬೀಜದಿಂದ ತೆಗೆದ ಎಣ್ಣೆ ಮುಖದ ಮೇಲೆ ಮೂಡುವ ಬಣ್ಣದ ಮಚ್ಚೆಗಳ ನಿವಾರಣೆಗೆ ಪರಿಹಾರ ನೀಡಬಲ್ಲದು. ಅಲ್ಲದೇ ಬೀಜದಿಂದ ಕಾಂತಿವರ್ಧಕ , ಬಲವರ್ಧಕ ಔಷಧಿಯನ್ನು ತಯಾರಿಸುವರು.

ಗಜ್ಜುಗ ಈಗ ನಮ್ಮ ನಿಷ್ಕಾಳಜಿಯಿಂದ ಕಣ್ಮರೆಯಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಆಟಕ್ಕೆ, ಹಿರಿಯರ ಔಷಧಿಗೆ ಇದು ದೊರಕದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT