ಶುಕ್ರವಾರ, ನವೆಂಬರ್ 15, 2019
22 °C
ಸಿರಿವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ‘ಗ್ರೀನ್ ಡೇ’

ಸಮಾಜ ನಿರ್ಮಾಣ; ಶಿಕ್ಷಕರ ಪಾತ್ರ ಹಿರಿದು

Published:
Updated:
Prajavani

ತುಮಕೂರು: ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ಸಿರಿವರ ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್ ರಂಗಸ್ವಾಮಯ್ಯ ತಿಳಿಸಿದರು.

ತಾಲ್ಲೂಕಿನ ಸಿರಿವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ‘ಗ್ರೀನ್ ಡೇ’ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

ಶಿಕ್ಷಕರು ಬಾಲ್ಯದಲ್ಲಿ ಮಕ್ಕಳ ಅಂಕು ಡೊಂಕುಗಳನ್ನು ತಿದ್ದಿ ತೀಡುವರು. ಮಕ್ಕಳು ಕೂಡ ಶಿಕ್ಷಕರ ಮಾರ್ಗದರ್ಶನದಂತೆ ನಡೆದು ಉತ್ತಮ ಸಮಾಜ ರೂಪಿಸಿ ದೇಶದ ಅಭಿವೃದ್ಧಿಗೆ ಸಹಕಾರಿಸಬೇಕು ಎಂದು ಹೇಳಿದರು.

ಗ್ರಾಮಸ್ಥ ಶಿವಮೂರ್ತಿ ಮಾತನಾಡಿ, ‘ಇಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಮೌಲ್ಯಯುತ ಶಿಕ್ಷಣ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಶಿಕ್ಷಣ ನೀಡಲು ಕಾರ್ಯಕ್ರಮ ಹಾಗೂ ತರಬೇತಿ ನೀಡಿ ಉತ್ತಮ ವಾತಾವರಣ ಕಲ್ಪಿಸುತ್ತಿದೆ’ ಎಂದು ಹೇಳಿದರು.

ಗ್ರಾಮೀಣ ಪ್ರತಿಭೆಗಳು ಸಮಾಜದ ಉತ್ತುಂಗಕ್ಕೆ ಬೆಳೆದಿರುವುದು ಪ್ರೇರಣೆ ಆಗಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಗ್ರಾಮೀಣ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಿಗೆ ಆಯ್ಕೆ ಆಗುತ್ತಿರುವುದು ಹೆಮ್ಮೆಯ ವಿಷಯ. ಅದರಂತೆ ಉನ್ನತ ಹುದ್ದೆಯಲ್ಲಿರುವವರು ಸೇವಾ ಮನೋಭಾವ ರೂಢಿಸಿಕೊಂಡು ಗ್ರಾಮೀಣ ಭಾಗದ ಶಾಲಾ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮುಖ್ಯ ಶಿಕ್ಷಕ ಡಿ.ಬೀರಪ್ಪ, ‘39 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. 5 ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇವೆ. ನನಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ’ ಎಂದು ಹೇಳಿದರು. 

ಮುಖ್ಯಶಿಕ್ಷಕ ಡಿ ಬೀರಪ್ಪ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಸದಸ್ಯರಾದ ಜಯರಾಮಯ್ಯ, ಕುಮಾರ್, ನಾಗೇಶ್, ದೊಡ್ಡಯ್ಯ, ರಮೇಶ್, ಶಿಕ್ಷಕಿ ಲಕ್ಷ್ಮೀನರಸಮ್ಮ, ವೇದಾವತಿ ಇದ್ದರು.

ಪ್ರತಿಕ್ರಿಯಿಸಿ (+)