ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಲ್ಲಿ ಬಂಧಿಯಾದ ಕಾರ್ಯಕರ್ತೆಯರು

ಪ್ರತಿಭಟನೆಗೆ ಬೆಂಗಳೂರಿಗೆ ಹೊರಟಿದ್ದ ಬಿಸಿಯೂಟ ಕಾರ್ಯಕರ್ತೆಯರ ತಡೆದ ಪೊಲೀಸರು
Last Updated 4 ಫೆಬ್ರುವರಿ 2020, 9:21 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರಿನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಬಿಸಿಯೂಟ ತಯಾರಿಸುವ ಕಾರ್ಯಕರ್ತೆಯರನ್ನು ಜಿಲ್ಲಾ ಪೊಲೀಸರು ಸಿದ್ಧಗಂಗಾ ಮಠದಲ್ಲಿ ಬೆಳಿಗ್ಗೆ ತಡೆದರು.

ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾರ್ಯಕರ್ತೆಯರು ಮಠದಲ್ಲಿ ಬೆಳಗಿನ ತಿಂಡಿ ಮುಗಿಸಿಕೊಂಡು ಬೆಂಗಳೂರಿನ ಕಡೆ ಹೊರಡಲು ಅಣಿಯಾದಾಗ, ಜಿಲ್ಲಾ ಪೊಲೀಸ್‌ ತಂಡ ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆಯಿತು.

ತಿಪಟೂರಿನಲ್ಲಿ ರೈಲು ಮೂಲಕ ಬೆಂಗಳೂರಿಗೆ ಹೋಗಲು ಬಂದಿದ್ದ ಕಾರ್ಯಕರ್ತೆಯರನ್ನು ಸಹ ಪೊಲೀಸರು ವಶಕ್ಕೆ ಪಡೆದರು. ಕುಣಿಗಲ್‌ನಿಂದ ಹೋಗಿದ್ದ ಕಾರ್ಯಕರ್ತೆಯರನ್ನು ಸಹ ನೆಲಮಂಗಲ ಟೋಲ್‌ನಲ್ಲಿ ಪೊಲೀಸರು ತಡೆದರು.

ಸಿಐಟಿಯು ಖಂಡನೆ

ಬಿಸಿಯೂಟ ಸಿಬ್ಬಂದಿಯ ಚಳವಳಿಯನ್ನ ದಮನಿಸುವ ಯತ್ನವನ್ನು ಸರ್ಕಾರ ಮಾಡಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿದೆ.

ಅತ್ಯಲ್ಪ ವೇತನದಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಬಿಸಿಯೂಟ ಕೆಲಸಗಾರರು ಬದುಕಿನ ಭದ್ರತೆಗಾಗಿ ಹಾಗೂ ಕನಿಷ್ಠ ವೇತನ, ಯೋಜನೆ ಖಾಸಗೀಕರಣ ವಿರೋಧಿಸಿ ಕಾರ್ಯಕರ್ತೆಯರು ಸಾಂವಿಧಾನಿಕ ಚೌಕಟ್ಟಿನಲ್ಲಿ ಹೋರಾಟ ಮಾಡಲು ಅಣಿಯಾಗಿದ್ದರು. ಅವರನ್ನು ಬಂಧಿಸುವ ಅಗತ್ಯವೆನಿತ್ತು ಎಂದು ಸಂಘಟನೆ ಪ್ರಶ್ನಿಸಿದೆ.

ಪ್ರತಿಭಟನೆಯ ಹಕ್ಕಿನ ಮೇಲೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾದ ದಾಳಿ ನಡೆಸುತ್ತಿದೆ. ಪ್ರಜಾಸತ್ತೆಯಲ್ಲಿ ಜನ ಸಂಕಟಗಳಿಗೆ ಪರಿಹಾರ ಬಯಸಿ, ಸರ್ಕಾರಗಳ ಗಮನ ಸೆಳೆಯಲು ನಡೆಸುವ ಪ್ರತಿಭಟನೆಯನ್ನು ದಮನ ಮಾಡುವುದು ತಪ್ಪು. ಈ ರೀತಿ ಪ್ರತಿಭಟನಕಾರರನ್ನು ವಶಕ್ಕೆ ಪಡೆಯುವ ಮೂಲಕ ಭಯದ ವಾತಾವರಣ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಸಿಐಟಿಯು ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೃಹಬಂಧನ

ಕುಣಿಗಲ್: ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಬಿಸಿಯೂಟ ತಯಾರಿಕೆ ಕಾರ್ಯಕರ್ತೆಯರನ್ನು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ತಡೆದು ಇಲ್ಲಿ ಗೃಹಬಂಧನಲ್ಲಿ ಇರಿಸಿದರು.

ತಾಲ್ಲೂಕಿನಿಂದ ಹೊರಟ ಕಾರ್ಯಕರ್ತೆಯರನ್ನು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ತಡೆಯಲು ಪೊಲೀಸರು ಬೆಳಗಿನ ಜಾವದಿಂದಲೇ ಕಾರ್ಯಪ್ರವೃತ್ತರಾದರು.

ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಗಜವತಿ ಮನೆಗೆ ಬೆಳಗಿನ ಜಾವ ತೆರಳಿದ ಮಹಿಳಾ ಪೊಲೀಸರು ಮನೆಯಿಂದ ಹೊರಹೋಗದಂತೆ ತಡೆದರು. ಗ್ರಾಮೀಣ ಪ್ರದೇಶದಿಂದ ಬಂದಿದ್ದ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದು ಪ್ರವಾಸಿ ಮಂದಿರದ ಕೊಠಡಿಯಲ್ಲಿ ಇರಿಸಿದರು. ಊಟೋಪಚಾರದ ವ್ಯವಸ್ಥೆ ಮಾಡಿದರು. ನಂತರ ಸ್ವಗ್ರಾಮಗಳಿಗೆ ವಾಪಸ್ ಕಳುಹಿಸಿದರು.

ಅಧ್ಯಕ್ಷೆ ಗಜವತಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವವರಿಗೆ ಅವಕಾಶ ನೀಡದೆ, ಹೋರಾಟ ಹತ್ತಿಕ್ಕುವ ಕಾರ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಾಂತಕುಮಾರಿ ಅವರನ್ನು ಸಹ ಬೆಳಗಿನ ಜಾವ ಮನೆಯ ಬಳಿ ತಡೆದರು. ಅವರು ಸಂಬಂಧಿಯ ಸಾವಿಗೂ ಹೋಗಲಾರದ ಸ್ಥಿತಿ ಉಂಟಾಯಿತು. ನಂತರ ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದು ಹೋಗಬೇಕಾಯಿತು.

ಬಿಜೆಪಿ ಸರ್ಕಾರ ಬಂದ ಮೇಲೆ ಹೋರಾಟಗಾರರನ್ನು ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. ಸಂಸದರ ವೇತನ ಸೌಲಭ್ಯಗಳನ್ನು ಹೆಚ್ಚಿಸಿದರು. ಆದರೆ ಬಿಸಿಯೂಟದ ನೌಕರರ ವೇತನ ಹೆಚ್ಚಿಸಲು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರಕ್ಕೆ ಸಿಐಟಿಯು ಬೆಂಬಲ

ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಎಲ್‍ಐಸಿ ಷೇರುಗಳನ್ನು ಖಾಸಗಿ ಅವರಿಗೆ ಮಾರಾಟ ಮಾಡುವ ಪ್ರಸ್ತಾಪವನ್ನು ತಂದಿರುವ ಕ್ರಮವನ್ನು ಸಿಐಟಿಯು ಸಹ ಖಂಡಿಸಿದೆ.

ಈ ನಿರ್ಧಾರವನ್ನು ವಿರೋಧಿಸಿ ದೇಶದ ಆದ್ಯಂತ ಎಲ್‌ಐಸಿ ಏಜೆಂಟರು ಮತ್ತು ಅಧಿಕಾರಿಗಳ ಸಂಘಟನೆ ಜಂಟಿ ಸಮಿತಿ ಸೋಮವಾರ ಮಧ್ಯಾಹ್ನ ನಡೆಸಿದ 1 ಗಂಟೆಯ ಸಾಂಕೇತಿಕ ಮುಷ್ಕರವನ್ನು ಸಿಐಟಿಯು ಬೆಂಬಲಿಸಿತು. ಎಲ್‍ಐಸಿ ಸೇರಿದಂತೆ ರೈಲ್ವೆ ಹಾಗೂ ಸಾರ್ವಜನಿಕ ವಲಯದ ಖಾಸಗೀಕರಣ ನೀತಿಯನ್ನು ಕೈಬಿಡುವಂತೆ ಸಿಐಟಿಯು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT