ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ ಗಡಿಭಾಗದ ಶಾಲೆ ಮತ್ತೆ ಆರಂಭ

ಗ್ರಾಮಸ್ಥರ ಸಹಕಾರದಿಂದ ತೆರೆಯಿತು ತಾಲ್ಲೂಕಿನ ರಾಗಿಹಳ್ಳಿ ಸರ್ಕಾರಿ ಶಾಲೆ
Last Updated 4 ಜೂನ್ 2019, 10:36 IST
ಅಕ್ಷರ ಗಾತ್ರ

ಕುಣಿಗಲ್: ಶಿಕ್ಷಕರ ಅಸಮರ್ಪಕ ಕಾರ್ಯವೈಖರಿಯಿಂದ ಕಳೆದ ಎರಡು ವರ್ಷಗಳ ಹಿಂದೆ ಮುಚ್ಚಿಹೋಗಿದ್ದ ತಾಲ್ಲೂಕಿನ ಗಡಿಭಾಗ ರಾಗಿಹಳ್ಳಿ ಸರ್ಕಾರಿ ಶಾಲೆ ಗ್ರಾಮಸ್ಥರ ಸಹಕಾರದಿಂದ ಮತ್ತೆ ಆರಂಭವಾಗಿದೆ.

ತಾಲ್ಲೂಕಿನ ಎಡೆಯೂರು ಹೋಬಳಿಯ ಗಡಿಭಾಗದ ರಾಗಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ 40 ವರ್ಷದ ಇತಿಹಾಸವಿದೆ. ಶಾಲೆ ಆರಂಭವಾದ ದಿನಗಳಲ್ಲಿ ರಾಗಿಹಳ್ಳಿ ಸೇರಿದಂತೆ ಶೆಟ್ಟಿಹಳ್ಳಿ, ಕಿತ್ತಾಘಟ್ಟಾ, ಹಂಪಪುರ, ಕಾಚೋನಹಳ್ಳಿ, ಶಿವನಹಳ್ಳಿ ಮತ್ತು ಹೊಸೂರು ಗ್ರಾಮಗಳಿಂದ ಸುಮಾರು 70ರಿಂದ 90 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.

ಕಾಲ ಕಳೆದಂತೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಪೋಷಕರು ಮಕ್ಕಳನ್ನು ಸಮೀಪದ ಶಾಲೆಗಳಿಗೆ ಸೇರಿಸಲು ಪ್ರಾರಂಭಿಸಿದರು. ಹಾಗಾಗಿ ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಸೇರದ ಕಾರಣ ಶಾಲೆ ಮುಚ್ಚಲಾಗಿತ್ತು.

ಗ್ರಾಮದಲ್ಲಿ ಮಕ್ಕಳು ಇದ್ದರೂ ಗಡಿಭಾಗದ ಶಾಲೆಗೆ ಬರಲು ಶಿಕ್ಷಕರು ಮನಸ್ಸು ಮಾಡದೆ ಕುಂಟುನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಕಾರಣ ಮಕ್ಕಳನ್ನು 5 ಕಿ.ಮೀ.ದೂರದ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಕಾಲಿಂಗನಹಳ್ಳಿ ಶಾಲೆಗೆ ದಾಖಲಿಸಿದ್ದರು.

ಶಾಲೆಗೆ ಸುಸಜ್ಜಿತ ಕಟ್ಟಡ ಇದ್ದು, ಶಿಕ್ಷಕರ ಸಮಸ್ಯೆಯಿಂದಾಗಿ ದೂರದೂರಿಗೆ ಹೋಗಬೇಕಾಗಿ ಬಂದಿರುವುದನ್ನು, ಬಳಕೆಯಾಗದ ಕಾರಣ ಕಟ್ಟಡ ಶಿಥಿಲವಾಗುತಿದ್ದುದನ್ನು ಮತ್ತು ಶಾಲೆಯನ್ನು ಕೇವಲ ಮತಗಟ್ಟೆಯಾಗಿ ಮಾತ್ರ ಬಳಕೆ ಮಾಡಿಕೊಳ್ಳಲಾಗಿದ್ದನ್ನು ಗಮನಿಸಿದ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ತಿಮ್ಮಣ್ಣ, ನರಸಿಂಹಮೂರ್ತಿ ಮತ್ತು ಗ್ರಾಮಸ್ಥರು ಶಾಲೆ ಮತ್ತೆ ಆರಂಭಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿ ದುಂಬಾಲು ಬಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸಿಬ್ಬಂದಿಯೊಂದಿಗೆ ತೆರಳಿ ಚರ್ಚೆ ನಡೆಸಿದ ಪರಿಣಾಮ 15 ವಿದ್ಯಾರ್ಥಿಗಳು 2019-20 ಸಾಲಿಗೆ ದಾಖಲಾಗಿದ್ದಾರೆ.

ಬುಧವಾರ ಶಾಲೆ ಪ್ರಾರಂಭವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರಶೇಖರ್ ಸಮ್ಮುಖದಲ್ಲಿ ಪೋಷಕರು ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಬಂದರು. ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ ಮತ್ತು ಲೇಖನ ಸಾಮಾಗ್ರಿ ವಿತರಿಸಿ, ಶಾಲೆಗೆ ಉತ್ತಮ ಶಿಕ್ಷಕರನ್ನು ನಿಯೋಜಿಸಿ ಸಕಾಲದಲ್ಲಿ ಬಂದು ಪಾಠಪ್ರವಚನಗಳನ್ನು ಮಾಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT