ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಪೂರ್‌ಹೌಸ್‌ ಕಾಲೊನಿ ಸೀಲ್‌ಡೌನ್

ಮಾರ್ಚ್ 12ರಂದು ಜಿಲ್ಲೆಗೆ ಧರ್ಮ ಪ್ರಸಾರಕ್ಕೆ ಬಂದಿದ್ದ ತಂಡ; ಸೋಂಕಿತನಲ್ಲಿ ರೋಗದ ಲಕ್ಷಣಗಳೇ ಇಲ್ಲ!
Last Updated 24 ಏಪ್ರಿಲ್ 2020, 13:22 IST
ಅಕ್ಷರ ಗಾತ್ರ

ತುಮಕೂರು: ನಗರದ ಪೂರ್‌ಹೌಸ್‌ ಕಾಲೊನಿ 12ನೇ ಮುಖ್ಯ ರಸ್ತೆ ಮಸೀದಿಯಲ್ಲಿದ್ದ ಗುಜರಾತ್‌ನ 32 ವರ್ಷದ ಮೌಲ್ವಿಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಕಾಲೊನಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಮತ್ತೆ ಸೋಂಕು ಪತ್ತೆಯಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.

ಗುಜರಾತ್‌ನ ಸೂರತ್‌ನಿಂದ ಧರ್ಮ ಪ್ರಸಾರಕ್ಕಾಗಿ ಮಾರ್ಚ್ 12ರಂದು ಜಿಲ್ಲೆಗೆ 14 ಮಂದಿಯ ತಂಡ ಬಂದಿತ್ತು. ಈಗ ಸೋಂಕು ತಗುಲಿರುವ ಮೌಲ್ವಿಯೂ ಆ ತಂಡದಲ್ಲಿ ಇದ್ದರು. ಲಾಕ್‌ಡೌನ್ ಪರಿಣಾಮ ಈ ತಂಡ ಪೂರ್‌ಹೌಸ್‌ ಕಾಲೊನಿ ಮಸೀದಿಯಲ್ಲೇ ಉಳಿದಿತ್ತು. ಹೊರರಾಜ್ಯದಿಂದ ಬಂದ ಕಾರಣ ಇವರನ್ನು ಮಸೀದಿಯಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು.

ಹೊರಗಿನಿಂದ ಬಂದ ಎಲ್ಲರನ್ನೂ ತಪಾಸಣೆಗೆ ಒಳಪಡಿಸಬೇಕು ಎನ್ನುವ ಸೂಚನೆ ಹಿನ್ನೆಲೆಯಲ್ಲಿ ಇವರ ಗಂಟಲು ಸ್ರಾವ, ರಕ್ತ ಮತ್ತು ಕಫದ ಮಾದರಿಯನ್ನು ಎರಡು ದಿನಗಳ ಹಿಂದೆ ಪರೀಕ್ಷೆಗೆ ಕಳುಹಿಸಲಾಗಿತ್ತು.

ರೋಗದ ಲಕ್ಷಣವೇ ಇಲ್ಲ: ಸೋಂಕಿತನಲ್ಲಿ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಜತೆಯಲ್ಲಿ ಬಂದ 13 ಮಂದಿಯ ಮಾದರಿಗಳು ನೆಗೆಟಿವ್ ಬಂದಿವೆ. ಹೀಗಿದ್ದ ಮೇಲೆ ಸೋಂಕು ತಗುಲಿದ್ದಾದರೂ ಹೇಗೆ ಎನ್ನುವುದು ವೈದ್ಯರಿಗೆ ಸವಾಲಾಗಿದೆ. ಸೋಂಕಿನ ಮೂಲ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಹಂತದ ಸಂಪರ್ಕದಲ್ಲಿ ಇದ್ದವರ ಗಂಟಲುಸ್ರಾವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

‘ಮಸೀದಿಗೆ ಬಂದು ಹೋದವರಲ್ಲಿ ಕೊರೊನಾ ಸೋಂಕು ಇದೆ. ಅವರು ಈ ಮೌಲ್ವಿಯನ್ನು ಭೇಟಿ ಮಾಡಿದ್ದಾರೆ. ಅವರಿಂದ ಸೋಂಕು ತಗುಲಿರಬಹುದು’ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸೀಲ್‌ಡೌನ್‌: ಕಾಲೊನಿಯನ್ನು ಈಗ ಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ. ಸುತ್ತಲಿನ 150 ಮೀಟರ್ ಪ್ರದೇಶದಲ್ಲಿ ನಾಗರಿಕರಚಲನವಲನಗಳನ್ನು ನಿರ್ಬಂಧಿಸಲಾಗಿದೆ. ಕಾಲೊನಿಗೆ ಪ್ರವೇಶಿಸುವ ರಸ್ತೆಗಳನ್ನು ತಗಡಿನ ಶೀಟ್‌ಗಳು, ಬ್ಯಾರಿಕೇಟ್‌ಗಳನ್ನು ಅಳವಡಿಸಿ ಬಂದ್ ಮಾಡಲಾಗಿದೆ. ಒಂದು ಕಡೆ ಮಾತ್ರಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕಾಲೊನಿಯನ್ನು ಕಂಟೋನ್ಮೆಟ್ ವಲಯ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಈ ಪ್ರದೇಶದ ನಿಯಂತ್ರಣಕ್ಕೆ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಬಡಾವಣೆ ಪರಿಶೀಲಿಸಿದರು.

ಬೆಳಿಗ್ಗೆಯೇ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ಡಿವೈಎಸ್‌ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪೊಲೀಸರು ಸೀಲ್‌ಡೌನ್ ಮಾಡಿದರು. 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT