ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗಳಿಗೂ ‘ಸಕಾಲ’ ಅನ್ವಯ

ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಲಿನಿ ರಜನೀಶ್‌
Last Updated 11 ಜುಲೈ 2019, 12:09 IST
ಅಕ್ಷರ ಗಾತ್ರ

ತುಮಕೂರು: ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಎಷ್ಟು ದಿನಗಳ ಕಾಲಾವಕಾಶ ಬೇಕು ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಕೇಳಿದ ಪ್ರಶ್ನೆಗೆ ‘ಎರಡು ತಿಂಗಳು ಬೇಕು’ ಎಂಬ ಉತ್ತರ ಅಧಿಕಾರಿಗಳಿಂದ ಬಂತು.

ಈ ಮಾತಿಗೆ ಕೆಂಡಾಮಂಡಲರಾದ ಶಾಲಿನಿ ಅವರು, ನೀವು ಮೆದುಳು ಮತ್ತು ಹೃದಯವನ್ನು ಅನ್ವಯಿಸಿ ಕೆಲಸ ಮಾಡಿ. ಒಂದು ಸಣ್ಣ ಘಟಕ ನಿರ್ಮಾಣಕ್ಕೆ ಎರಡು ತಿಂಗಳ ಸಮಯ ಬೇಕಾ?, ಈ ರೀತಿ ಕೆಲಸ ಮಾಡಿದರೆ, ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಅಸಮಾಧಾನ ಹೊರಹಾಕಿದರು.

ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರದೇಶಾಭಿವೃದ್ಧಿ ಯೋಜನೆಯಡಿ 2008–09ರಿಂದ 2018–19ನೇ ಸಾಲಿನವರೆಗೂ ಮಂಜೂರಾತಿ ನೀಡಿದ ಕಾಮಗಾರಿಗಳು, ಪೂರ್ಣಗೊಂಡ ಕಾಮಗಾರಿಗಳು, ಪ್ರಗತಿಯಲ್ಲಿ ಇರುವ ಕಾಮಗಾರಿಗಳು, ಪ್ರಾರಂಭಿಸ ಬೇಕಾಗಿರುವ ಕಾಮಗಾರಿಗಳು ಮತ್ತು ಒಟ್ಟು ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮೂಲಸೌಕರ್ಯ ಒದಗಿಸುವ ಕಾಮಗಾರಿಗಳ ವಿಳಂಬ ತಡೆಯಲು ‘ಸಕಾಲ’ ಮಾದರಿಯನ್ನು ಅಭಿವೃದ್ಧಿ ಕೆಲಸಗಳಿಗೂ ಅನ್ವಯಿಸಲಾಗುವುದು. ನಿರ್ದಿಷ್ಟ ಕಾಮಗಾರಿಯನ್ನು ಇಂತಿಷ್ಟೆ ದಿನಗಳಲ್ಲಿ ಪೂರ್ಣಗೊಳಿಸಲು ಗಡುವು ಹಾಕಲಾಗುವುದು ಎಂದರು.

ಅಧಿಕಾರಿಗಳು ಕಾಮಗಾರಿಗಳ ಅಂಕಿ–ಅಂಶಗಳನ್ನು ಹೇಳುವಾಗ ಕಡತದಲ್ಲಿನ ಮಾಹಿತಿಗೆ ತಾಳೆ ಆಗಲಿಲ್ಲ. ಆಗ ಪ್ರಧಾನ ಕಾರ್ಯದರ್ಶಿ, ವಾಸ್ತವ ಬೇರೆ ಇರುತ್ತೆ, ನಿಮ್ಮ ವರದಿಯೇ ಬೇರೆ ಇರುತ್ತಲ್ಲ. ನೀವೊಂದು ಹೇಳುತ್ತಿರಾ, ವರದಿಯಲ್ಲಿ ಬೇರೆಯೇ ಇದೆ. ಸಣ್ಣ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಎಲ್ಲ ಕಂತುಗಳ ಅನುದಾನ ಬಿಡುಗಡೆ ಆಗುವುದಿಲ್ಲ. ಉಳಿದ ಕಂತುಗಳನ್ನು ನಿಮ್ಮ ಸಂಬಳದಿಂದ ಭರಿಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದೇ ಅಂತಿಮ ಪರಿಹಾರವಲ್ಲ. ಆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದರು.

ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌, ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಕೊಳವೆಬಾವಿಗಳನ್ನು ರೀ ಡ್ರಿಲ್ಲಿಂಗ್ ಮಾಡಲಾಗುತ್ತಿದೆ. ಮಳೆನೀರು ಸಂಗ್ರಹವನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಶುಭಾ ಕಲ್ಯಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.*

‘ಚೆಕ್‌ಗಳ ಸಹಿಗೆ ಪುರುಸೊತ್ತು ಇಲ್ಲ’

ಹಲವಾರು ಕೆಲಸಗಳ ಒತ್ತಡದಲ್ಲಿ ವಿವಿಧ ಕಾಮಗಾರಿಗಳ ಬಿಲ್‌ಗಳ ಚೆಕ್‌ಗಳಿಗೆ ಸಹಿ ಮಾಡಲು ಪುರುಸೊತ್ತು ಸಿಗುತ್ತಿಲ್ಲ. ಈ ಸಹಿ ಮಾಡುವ ಅಧಿಕಾರವನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೂ ನೀಡಿ ಎಂದು ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಅವರು ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದರು.

ಈ ಕುರಿತು ಆದಷ್ಟು ಬೇಗ ಆದೇಶ ಹೊರಡಿಸುತ್ತೇನೆ. ಹಾಗೆಯೇ ₹ 5 ಲಕ್ಷಗಳ ಒಳಗಿನ ಕಾಮಗಾರಿಗಳಿಗೆ ಟೆಂಡರ್‌ ಕರೆಯದೆಯೇ ಗುತ್ತಿಗೆದಾರರಿಗೆ ಕೆಲಸ ಹಂಚಿಕೆ ಮಾಡುವ ಆದೇಶವನ್ನೂ ಸಹ ನವೀಕರಿಸುವುದಾಗಿ ಪ್ರಧಾನ ಕಾರ್ಯದರ್ಶಿ ಭರವಸೆ ನೀಡಿದರು.

*

‘ಏಳು ದಿನಗಳ ಒಳಗೆ ಕಾರಣ ನೀಡಿ’

ಅನುಮೋದನೆ ಸಿಕ್ಕ ಬಳಿಕ ಕಾಮಗಾರಿಗಳು ಆರಂಭವಾಗದಿದ್ದರೇ, ಅದಕ್ಕೆ ನಿರ್ದಿಷ್ಟ ಕಾರಣಗಳನ್ನು ಜಿಲ್ಲಾಧಿಕಾರಿ ಕಚೇರಿಗೆಏಳು ದಿನಗಳ ಒಳಗೆ ಕಳುಹಿಸಬೇಕು ಎಂದು ಶಾಲಿನಿ ರಜನೀಶ್‌ ಸೂಚಿಸಿದರು.

ಎಲ್ಲರೂ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು. ಇಲ್ಲದಿದ್ದರೆ ಅಭಿವೃದ್ಧಿ ಕುಂಟಿತವಾಗುತ್ತದೆ. ಬಹುತೇಕ ಇಲಾಖೆಗಳ ಕಾರ್ಯಾನಿರ್ವಾಹಕ ಎಂಜಿನಿಯರ್‌ಗಳು ನೆಪ ಹೇಳಿಕೊಂಡುಪ್ರತಿ ಸಭೆಗೂ ಗೈರು ಹಾಜರಾಗುತ್ತಾರೆ. ಇದು ಉತ್ತಮ ನಡೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ಸಿ.ಸಿ.ರಸ್ತೆ, ಕುಡಿಯುವ ನೀರಿನ ಘಟಕ ನಿರ್ಮಾಣ, ಅಂಗವಿಕಲರಿಗೆ ಮೂರು ಗಾಲಿಯ ಸೈಕಲ್‌ ವಿತರಣೆ, ಸಮುದಾಯ ಭವನ ನಿರ್ಮಾಣದ ಕಾಮಗಾರಿಗಳ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

*

ಸಣ್ಣ ಕಾಮಗಾರಿಗಳ ವಿಳಂಬ ಸ್ಥಳೀಯರಿಗೆ ದೊಡ್ಡ ಅನಾನುಕೂಲತೆ ಉಂಟು ಮಾಡುತ್ತವೆ. ಅವುಗಳನ್ನು ಸಕಾಲಕ್ಕೆ ಪೂರ್ಣಗೊಳಿಸಿ.

ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT