ಶನಿವಾರ, ಸೆಪ್ಟೆಂಬರ್ 18, 2021
23 °C

ಸ್ವಾತಂತ್ರ್ಯ ಉದ್ಯಾನವಾಗಿ ಶೆಟ್ಟಿಹಳ್ಳಿ ಪಾರ್ಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ದೇಶ ಸ್ವಾತಂತ್ರ್ಯ ಪಡೆದು 75ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಮೃತಮಹೋತ್ಸವ ಪ್ರಯುಕ್ತ ಶೆಟ್ಟಿಹಳ್ಳಿ ಸರ್ವೆ ನಂ 62ರಲ್ಲಿ ಇರುವ ಉದ್ಯಾನವನವನ್ನು ‘ಸ್ವಾತಂತ್ರ್ಯ ಉದ್ಯಾನ’ವೆಂದು ನಾಮಕರಣ ಮಾಡಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ತಿಳಿಸಿದರು.

ಆ. 15ರಂದು ಗಿಡ ನೆಡುವ ಮೂಲಕ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಾರ್ಕ್‌ಗಳ ಒತ್ತುವರಿ ಪತ್ತೆಮಾಡಲು ಸರ್ವೆಯರ್‌ಗಳನ್ನು ನೇಮಕ ಮಾಡಲಾಗಿದೆ. ಸರ್ವೇ ಮುಗಿದು ಒತ್ತುವರಿಯಾಗಿರುವ ಕಡೆಗಳಲ್ಲಿ ತೆರವು ಮಾಡಲಾಗುವುದು ಎಂದು ಹೇಳಿದರು.

ಗುಬ್ಬಿ ಗೇಟ್ ಸರ್ಕಲ್‌ನಿಂದ ಐಡಿಎಸ್‌ಎಂಟಿ ಲೇಔಟ್‌ವರೆಗೆ 2.1 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 18 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ದಿಬ್ಬೂರು ವೃತ್ತದಿಂದ ಐಡಿಎಸ್‌ಎಂಟಿ ಲೇಔಟ್‌ವರೆಗಿನ 1.6 ಕಿ.ಮೀ ಅಭಿವೃದ್ಧಿಪಡಿಸಲು ₹9.6 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಗಾರ್ಡನ್‌ ರಸ್ತೆಯಲ್ಲಿರುವ ವಸತಿ ಬಡಾವಣೆಯಲ್ಲಿನ ಸಿ.ಎ ನಿವೇಶನದಲ್ಲಿ ₹1 ಕೋಟಿ ವೆಚ್ಚದಲ್ಲಿ ಮೂರು ಶಟಲ್ ಕೋರ್ಟ್‌ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು. ಟೂಡಾ ವ್ಯಾಪ್ತಿಯಲ್ಲಿ ಸುಮಾರು 800ಕ್ಕೂ ಹೆಚ್ಚು ಉದ್ಯಾನವನಗಳಿದ್ದು, ಮಂಜುನಾಥ ನಗರ, ಮಹಾಲಕ್ಷ್ಮಿ ನಗರ, ಶೆಟ್ಟಿಹಳ್ಳಿ, ಮಾರುತಿನಗರ, ಅರಳಿಮರದ ಪಾಳ್ಯ, ಮರಳೂರು (ಸದಾಶಿವ ನಗರ), ಸರಸ್ವತಿಪುರ, ಕಸಬಾ ಹೋಬಳಿಯಲ್ಲಿ 10 ಪಾರ್ಕ್‌ಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ ಎಂದು
ತಿಳಿಸಿದರು.

ಗಂಗಸಂದ್ರ ಕೆರೆಯನ್ನು ₹6.30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಗಾರೆ ನರಸಯ್ಯ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ₹90 ಲಕ್ಷ ಕಾಯ್ದಿರಿಸಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಕೆಸರುಮಡು ಜೋಗಿಕಟ್ಟೆ ಅಭಿವೃದ್ಧಿಗೆ ₹2 ಕೋಟಿ, ಮೈದಾಳ ಕೆರೆಯನ್ನು ₹1.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಪ್ರಾಧಿಕಾರದ ದಾಖಲಾತಿಗಳ ಡಿಜಟಲೀಕರಣ ಕಾರ್ಯ ಪ್ರಗತಿ ಹಂತದಲ್ಲಿದೆ. ಇನ್ನು ಮುಂದೆ ಎಲ್ಲಾ ದಾಖಲೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗಲಿವೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ‘ನಗರದಲ್ಲಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಯಗಾಲುವೆ ಸುಸ್ಥಿತಿಯಲ್ಲಿಡಲು, ಒತ್ತುವರಿ ತೆರವುಗೊಳಿಸಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ಅನುದಾನ ಲಭ್ಯವಾಗಲಿದೆ’ ಎಂದು ತಿಳಿಸಿದರು.

ಟೂಡಾ ಆಯುಕ್ತ ಯೋಗಾನಂದ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಿ.ಜಗದೀಶ್, ವೀಣಾ ಶಿವಕುಮಾರ್, ಹನುಮಂತಪ್ಪ,‌ ಶಿವಕುಮಾರ್, ಪ್ರತಾಪ್ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು