ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುದ್ಧಿ’ಗಳ ಮಾತಿನಲ್ಲಿಯೇ ಅನ್ನದ ಮಹತ್ವ ತಿಳಿಸಿದ ಶಿವು ಈಗ ರಾಜ್ಯದ ಕಣ್ಮಣಿ

ಅನ್ನ ವ್ಯರ್ಥಕ್ಕೆ ತಡೆ; ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳಿಸಿದ ಬಾಲಕನ ನಡೆ
Last Updated 24 ಜನವರಿ 2019, 3:11 IST
ಅಕ್ಷರ ಗಾತ್ರ

ತುಮಕೂರು: ತಟ್ಟೆಯಲ್ಲಿದ್ದ ಅನ್ನವನ್ನು ಸ್ವಲ್ಪ ತಿಂದು ಉಳಿದಿದ್ದನ್ನು ಎಸೆಯಲು ಮುಂದಾದ ವ್ಯಕ್ತಿಯೊಬ್ಬರನ್ನು ಸಿದ್ಧಗಂಗಾ ಮಠದ ವಿದ್ಯಾರ್ಥಿ ತಡೆದು ಪೂರ್ಣ ಊಟ ಮಾಡುವಂತೆ ಆಗ್ರಹಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಪ್ರಶಂಸೆಗೆ ಪಾತ್ರವಾಗಿದೆ.

ಹೀಗೆ ಜನರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಮಠದ ವಿದ್ಯಾರ್ಥಿ ಶಿವುನನ್ನು ಮಠದಿಂದ ಅಭಿನಂದಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಕರಿನಕಟ್ಟೆ ಗ್ರಾಮದ ಶಿವು ಎಂಟನೇ ತರಗತಿಯ ‘ಇ’ ವಿಭಾಗದ ವಿದ್ಯಾರ್ಥಿ. ತಂದೆಯನ್ನು ಕಳೆದುಕೊಂಡಿರುವ ಶಿವುನನ್ನು ಮಠಕ್ಕೆ ಸೇರಿಸಿದ್ದು ಅವರ ದೊಡ್ಡಪ್ಪನ ಮಗ.

ಈ ವಿಡಿಯೊ ನೋಡಿದ ಎಲ್ಲರೂ ವಿದ್ಯಾರ್ಥಿಯನ್ನು ಮನಸಾರೆ ಹೊಗಳುತ್ತಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಬಂದಿದ್ದ ಅಂಬಿಕಾ ಎಚ್‌.ಬಿ ಎಂಬುವವರು ಈ ವಿಡಿಯೊ ಚಿತ್ರಿಸಿದ್ದು ಅದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದರು. 960ಕ್ಕೂ ಹೆಚ್ಚು ಜನರು ಈ ವಿಡಿಯೊ ಹಂಚಿಕೊಂಡಿದ್ದಾರೆ.

‘7ನೇ ತರಗತಿಯವರೆಗೂ ನಾನು ನಮ್ಮ ಊರಿನಲ್ಲಿಯೇ ಓದಿದೆ. 8ಕ್ಕೆ ಇಲ್ಲಿಗೆ ಬಂದೆ. 7ನೇ ತರಗತಿಯಲ್ಲಿ ಶಿಕ್ಷಕರಾಗಿದ್ದ ನಾಗರಾಜು ಸರ್ ಹಾಗೂ ಶಿವಕುಮಾರ ಸ್ವಾಮೀಜಿ ಅವರಿಂದ ಅನ್ನದ ಮೌಲ್ಯ ಅರಿತೆ. ನಾಗರಾಜ್ ಸರ್ ಒಮ್ಮೆ ಶ್ರವಣಬೆಳಗೊಳಕ್ಕೆ ಹೋಗಿದ್ದಾಗ ಅಲ್ಲಿಯೂ ಕೆಲವರು ಅನ್ನ ವ್ಯರ್ಥ ಮಾಡುತ್ತಿದ್ದರಂತೆ. ಅವರೂ ಇದೇ ರೀತಿ ಮಾಡಿದರಂತೆ. ಅದನ್ನು ನನಗೆ ಹೇಳಿದ್ದರು’ ಎಂದು ಶಿವು ‘ಪ್ರಜಾವಾಣಿ’ಗೆ ತಿಳಿಸಿದ.

‘ಪ್ರಾರ್ಥನೆಯ ಹಾಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಊಟಕ್ಕೆ ಬಂದ ಬಹಳ ಮಂದಿ ಅರ್ಧಂಬರ್ಧ ಊಟ ಮಾಡಿ ಅನ್ನವನ್ನು ಚೆಲ್ಲುತ್ತಿದ್ದರು. ನನಗೆ ಇದು ಬೇಸರ ತರಿಸಿತು. ನಾನು ಊರಿನಲ್ಲಿ ಇದ್ದ ದಿನದಿಂದಲೂ ಅನ್ನದ ಬೆಲೆ ತಿಳಿದಿದೆ. ದಿನವೂ ಬುದ್ಧಿಯವರ (ಶಿವಕುಮಾರ ಸ್ವಾಮೀಜಿ) ಆಶೀರ್ವಾದ ಪಡೆಯಲು ಹಳೇ ಮಠಕ್ಕೆ ಹೋಗುತ್ತಿದ್ದೆ. ಒಮ್ಮೆ ನನ್ನ ಹೆಸರು ಮತ್ತು ಊರನ್ನು ಸ್ವಾಮೀಜಿ ಕೇಳಿದ್ದರು’ ಎಂದು ನೆನಪಿಸಿಕೊಳ್ಳುತ್ತಾನೆಶಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT