ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ| ಸಿದ್ಧಗಂಗಾ ಮಠದಲ್ಲಿ ಹಬ್ಬದ ಸಂಭ್ರಮ

ಇಂದು ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ l ಶೃಂಗಾರಗೊಂಡ ತುಮಕೂರು
Last Updated 31 ಮಾರ್ಚ್ 2022, 18:17 IST
ಅಕ್ಷರ ಗಾತ್ರ

ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 115ನೇ ಜಯಂತ್ಯುತ್ಸವಕ್ಕೆ ತುಮಕೂರು ಶೃಂಗಾರಗೊಂಡಿದ್ದು, ಸಿದ್ಧಗಂಗಾ ಮಠದಲ್ಲಿಸಂಭ್ರಮ ಮನೆ ಮಾಡಿದೆ.

ಶುಕ್ರವಾರ ಬೆಳಿಗ್ಗೆ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಸ್ವಾಮೀಜಿ ಸ್ಮರಿಸುವ ಫ್ಲೆಕ್ಸ್, ಕಟೌಟ್, ಬ್ಯಾನರ್‌ ನಗರದಲ್ಲಿ ರಾರಾಜಿಸುತ್ತಿವೆ. ಪ್ರಮುಖ ರಸ್ತೆ, ವೃತ್ತ, ಬಡಾವಣೆಗಳಲ್ಲಿ ಫ್ಲೆಕ್ಸ್‌ ಮೂಲಕ ಜನರು ಸ್ವಾಮೀಜಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಶಿವಕುಮಾರ ಸ್ವಾಮೀಜಿ ಸಾಧನೆ, ಅವರ ಕುರಿತು ಬರೆದಿರುವ ಹಾಡುಗಳನ್ನು ಪ್ರದರ್ಶಿಸಲಾಗುತ್ತಿದೆ. ಅಕ್ಷರ, ದಾಸೋಹ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ನಡೆದಿದೆ.

ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಜಯಂತಿ ಆಚರಣೆ ಮಾಡಿರಲಿಲ್ಲ. ಈಗ ಕೋವಿಡ್ ಆತಂಕ ಕಡಿಮೆಯಾಗಿದ್ದು,ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಬಿಜೆಪಿ ಮುಖಂಡರು ಸಹ ಸಜ್ಜಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಮಠಕ್ಕೆ ಭೇಟಿ ನೀಡಿ ಖುದ್ದಾಗಿ ಪೂರ್ವ ಸಿದ್ಧತೆ ಪರಿಶೀಲಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ರಣದೀಪ್‌ ಸಿಂಗ್‌ ಸುರ್ಜೇವಾಲ ಕೂಡ ಈಗಾಗಲೇ ಮಠಕ್ಕೆ ಭೇಟಿ ನೀಡಿದ್ದಾರೆ.

ಉತ್ತರ ಕರ್ನಾಟಕದಿಂದ ಭಕ್ತರ ದಂಡು:ಶುಕ್ರವಾರ ಬೆಳಗಿನ ಜಾವ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿದ ನಂತರ ಧಾರ್ಮಿಕ ಕಾರ್ಯ ಚಾಲನೆ ಪಡೆದುಕೊಳ್ಳಲಿವೆ. ಉತ್ತರ ಕರ್ನಾಟಕ ಸೇರಿದಂತೆ ದೂರದ ಊರಿನ ಭಕ್ತರ ದಂಡು ಈಗಾಗಲೇ ಮಠದತ್ತ ಬರುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಎಲ್ಲರಿಗೂ ಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಮಂದಿ ಅಡುಗೆ ತಯಾರಿಯಲ್ಲಿ ತೊಡಗಿದ್ದು, ಸ್ವಯಂ ಸೇವಕರು ಸಹಕಾರ ನೀಡುತ್ತಿದ್ದಾರೆ.

ಬೃಹತ್‌ ವೇದಿಕೆ

ಮಠದ ಆವರಣದಲ್ಲಿ ಸಾರ್ವಜನಿಕ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಕರೆತಂದು ಅಮಿತ್ ಶಾ ಎದುರು ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT