ಶಿವಕುಮಾರ ಸ್ವಾಮೀಜಿ ಆರೋಗ್ಯ ಏರುಪೇರು: ಉಸಿರಾಟ ತೊಂದರೆ

7

ಶಿವಕುಮಾರ ಸ್ವಾಮೀಜಿ ಆರೋಗ್ಯ ಏರುಪೇರು: ಉಸಿರಾಟ ತೊಂದರೆ

Published:
Updated:

ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಸಹಜವಾಗಿ ಉಸಿರಾಟ ನಡೆಸುತ್ತಿದ್ದ ಸ್ವಾಮೀಜಿ ಅವರಿಗೆ ಸೋಮವಾರ ನಸುಕಿನಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್ ನೇತೃತ್ವದ ತಂಡ ಸ್ವಾಮೀಜಿಗೆ ಚಿಕಿತ್ಸೆ ನೀಡುತ್ತಿದೆ.

ಭಾನುವಾರ ಸ್ವಾಮೀಜಿ ಅವರ ಆರೋಗ್ಯ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ.ರವೀಂದ್ರ ಹಾಗೂ ಡಾ.ವೆಂಕಟರಮಣ, ‘ಶಿವಕುಮಾರ ಸ್ವಾಮೀಜಿ ಸ್ವಲ್ಪ ಸಮಯ ಮಾತ್ರ ಸಹಜವಾಗಿ ಉಸಿರಾಡುತ್ತಿದ್ದಾರೆ. ಉಳಿದಂತೆ ಕೃತಕ ಉಸಿರಾಟ ಅನಿವಾರ್ಯವಾಗಿದ್ದು ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಾಣಿಸುತ್ತಿಲ್ಲ’ ಎಂದು ಹೇಳಿದ್ದರು.

‘ಅಲ್ಬುಮಿನ್ ಪೋಷಕಾಂಶವನ್ನು ಬಾಹ್ಯವಾಗಿ ನೀಡುತ್ತಿದ್ದರೂ ದೇಹದಲ್ಲಿ ಪೋಷಕಾಂಶದ ಪ್ರಮಾಣ ಹೆಚ್ಚುತ್ತಿಲ್ಲ. ಕೆಲವು ಪರೀಕ್ಷೆಗಳ ನಂತರ ಔಷಧಿ ಬದಲಾವಣೆ ಮಾಡಲಾಗಿದೆ. ಈಗ ಕೆಲವು ಜೀವಸತ್ವ ನೀಡುತ್ತಿದ್ದೇವೆ’ ಎಂದರು.

‘ಸ್ವಾಮೀಜಿ ಅವರ ನಾಡಿಮಿಡಿತ ಪರೀಕ್ಷಿಸಿದ್ದೇವೆ. ಹೆಚ್ಚಿನ ಸ್ಪಂದನೆ ಕಾಣಿಸುತ್ತಿಲ್ಲ. ಕೈ, ಕಾಲನ್ನು ಕೆಲವು ವೇಳೆ ಅಲುಗಾಡಿಸುತ್ತಾರೆ. ಉಳಿದ ಸಮಯ ಯಥಾಸ್ಥಿತಿಯಲ್ಲಿಯೇ ಇರುತ್ತಾರೆ’ ಎಂದು ತಿಳಿಸಿದರು.

ಭಾನುವಾರ ರಜಾ ದಿನವಾದ ಕಾರಣ ನಾಡಿನ ವಿವಿಧ ಕಡೆಯಿಂದ ಹೆಚ್ಚಿನ ಭಕ್ತರು ದರ್ಶನಕ್ಕೆ ಬಂದಿದ್ದರು. ಮಠದ ಸಿಬ್ಬಂದಿ ಮತ್ತು ಪೊಲೀಸರು ಕಿಟಕಿ ಮೂಲಕ ಸ್ವಾಮೀಜಿ ಅವರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಸ್ವಾಮೀಜಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಭಕ್ತರು ಅವರತ್ತ ಕೈ ಮುಗಿಯುತ್ತಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !