ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಥುಷ್ಪತ ಹೆದ್ದಾರಿ: ಮುಗಿಯದ ಗೊಂದಲ

ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು-ಶಿವಮೊಗ್ಗ ನಡುವಿನ ರಸ್ತೆ ಕಾಮಗಾರಿ
Last Updated 5 ಜುಲೈ 2021, 3:30 IST
ಅಕ್ಷರ ಗಾತ್ರ

ತಿಪಟೂರು: ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು-ಶಿವಮೊಗ್ಗದ ನಡುವೆ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದೆ. ಮೊದಲ ಹಾಗೂ ಎರಡನೇ ಹಂತದ ಕಾಮಗಾರಿಯನ್ನು ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಡೆಸುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ ಎಂಬ ದೂರುಗಳು ದಟ್ಟವಾಗಿವೆ.

ಈ ಯೋಜನೆಗೆ ಕೇಂದ್ರ ಸರ್ಕಾರ ₹6,397 ಕೋಟಿ ಅನುದಾನ ನೀಡಿದೆ. ತುಮಕೂರು- ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರನ್ನು ನಾಲ್ಕು ಪಥ ರಸ್ತೆಯಾಗಿ ಪರಿವರ್ತಿಸುವ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ.

ತುಮಕೂರಿನಿಂದ ಶಿವಮೊಗ್ಗದವರೆಗೆ 205 ಕಿ.ಮೀ ರಸ್ತೆಯನ್ನು 140 ಅಡಿ ಅಗಲದ ರಸ್ತೆಯನ್ನಾಗಿ ಅಭಿವೃದ್ಧಿ
ಪಡಿಸಲು ನಾಲ್ಕು ಪ್ಯಾಕೇಜ್‍ಗಳಲ್ಲಿ ಗುತ್ತಿಗೆ ಕರೆಯಲಾಗಿದೆ. ಈಗಾಗಲೇ ಎರಡು ಪ್ಯಾಕೇಜ್‍ಗಳ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ.

ಮೊದಲ ಹಂತದ ಕಾಮಗಾರಿ ತುಮಕೂರು ತಾಲ್ಲೂಕಿನ ಮಲ್ಲಸಂದ್ರದಿಂದ ಪ್ರಾರಂಭವಾಗಿ ತಿಪಟೂರು ತಾಲ್ಲೂಕಿನ ಕರಡಿವರೆಗೆ ನಡೆಯಲಿದೆ. ಒಟ್ಟು 52.89 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹೆದ್ದಾರಿಯ ಎರಡೂ ಬದಿ ಸೇವಾ ರಸ್ತೆ, ಗುಬ್ಬಿಯಲ್ಲಿ 7.742 ಕಿ.ಮೀ ಬೈಪಾಸ್ ರಸ್ತೆ, 21 ಸಣ್ಣ ಸೇತುವೆ, 12 ಬಸ್ ನಿಲುಗಡೆ ತಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹತ್ಯಾಳು- ಕೆ.ಬಿ.ಕ್ರಾಸ್ ನಡುವೆ ಟೋಲ್‍ಗೇಟ್ ನಿರ್ಮಣವಾಗಲಿದ್ದು, ಒಟ್ಟು ₹824.93 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. ಮೊದಲ ಹಂತದಲ್ಲಿ 160 ಹೆಕ್ಟೇರ್ ಭೂಮಿ ರೈತರಿಂದ ಪಡೆಯಲಾಗುತ್ತಿದೆ.

ಎರಡನೇ ಹಂತದಲ್ಲಿ ಕರಡಿ ಗ್ರಾಮದಿಂದ ಬಾಣಾವರದವರೆಗೆ 56.705 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ತಿಪಟೂರು- ಅರಸೀಕರೆ-ಬಾಣಾವರ ಸೇರಿ ಮೂರು ಕಡೆ ಒಟ್ಟು 25.995 ಕಿ.ಮೀ. ಬೈಪಾಸ್ ರಸ್ತೆ, 21 ಕಿರು ಸೇತುವೆ, 1 ಟ್ರಕ್ ನಿಲುಗಡೆ, 28 ಬಸ್ ನಿಲ್ದಾಣ, 10 ಭಾರಿ ವಾಹನಗಳ ಕೆಳಸೇತುವೆ, 7 ಲಘು ವಾಹನಗಳ ಕೆಳಸೇತುವೆ, 2 ಮೇಲ್ಸೇತುವೆ ನಿರ್ಮಾಣವಾಗಲಿವೆ. ತಿಪಟೂರಿನಲ್ಲಿ ಎರಡು ಕಡೆ ಮತ್ತು ಅರಸೀಕೆರೆ ಪಟ್ಟಣದ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 246 ಹೆಕ್ಟೇರ್ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ. ₹1,020.85 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ. ಕೆಲ ಕಡೆಗಳಲ್ಲಿ ತಕರಾರು ಇವೆ. ಕೆಲ ಸಂತ್ರಸ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಅವೈಜ್ಞಾನಿಕ ಕಾಮಗಾರಿ: ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರರು ಹಳೆಯ ರಸ್ತೆ ಪಕ್ಕದಲ್ಲಿಯೇ ಹೊಸ ರಸ್ತೆ ನಿರ್ಮಾಣಕ್ಕೆ ಸರ್ವೆ ಮಾಡಿ ಯೋಜನೆ ರೂಪಿಸಿದ್ದಾರೆ. ರಸ್ತೆ ಯೋಜನೆ ಪ್ರಾರಂಭಕ್ಕೂ ಮುಂಚಿತವಾಗಿಯೇ ರಸ್ತೆ ಕಾಮಗಾರಿಯಿಂದ ವಾಹನ ಸವಾರರು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಬೇಕು ಎಂಬ ಉಲ್ಲೇಖವಿದೆ. ಆದರೆ ಹಳೆಯ ರಸ್ತೆಯ ಪಕ್ಕದಲ್ಲಿಯೇ ಪರ್ಯಾಯ ರಸ್ತೆಗಳನ್ನು ಮಾಡಲು ಮುಂದಾಗಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ವಾಹನ ಸವಾರರು ಓಡಾಡಲು ತೊಂದರೆಯಾಗಿದೆ. ಕೆಲವೆಡೆ ಭಾರಿ ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿದೆ.

ರಸ್ತೆ ಕಾಮಗಾರಿ ಸಂದರ್ಭದಲ್ಲಿ ರಸ್ತೆ ಸೂಚಕ ಹಾಕಬೇಕು. ಆದರೆ ಇಲ್ಲಿ ಕೆಲವೆಡೆ ಮಾತ್ರವೇ ಸೂಚಕ ಬಳಸಿದ್ದು ಅವುಗಳು ಸಹ ಸಮರ್ಪಕ ನಿರ್ವಹಣೆ ಇಲ್ಲದೇ ಬಿದ್ದಿವೆ.

85ಕ್ಕೂ ಹೆಚ್ಚು ಗ್ರಾಮಗಳು ಸ್ವಾಧೀನ!: ಹೆದ್ದಾರಿ ಯೋಜನೆ ಮೊದಲ 2 ಹಂತದ ಕಾಮಗಾರಿಗೆ 85ಕ್ಕೂ ಹೆಚ್ಚು ಗ್ರಾಮಗಳಿಗೆ ನೋಟಿಸ್ ನೀಡಲಾಗಿದೆ. ತುಮಕೂರಿನ ಮಲ್ಲಸಂದ್ರದ 4 ಗ್ರಾಮಗಳು, ಗುಬ್ಬಿ ತಾಲ್ಲೂಕಿನ 24 ಗ್ರಾಮ, ತಿಪಟೂರು ತಾಲ್ಲೂಕಿನ 29 ಗ್ರಾಮಗಳು, ಅರಸೀಕೆರೆ ತಾಲ್ಲೂಕಿನ 28 ಗ್ರಾಮಗಳ ಸಾವಿರಾರು ರೈತರು ಸಂತ್ರಸ್ತರಾಗುತ್ತಿದ್ದಾರೆ.

ಪರಿಹಾರ ಸಿಗದೆ ಕಂಗಾಲು: ತಿಪಟೂರು ತಾಲ್ಲೂಕಿನ ಕರಡಿ ಗ್ರಾಮದ 45ಕ್ಕೂ ಹೆಚ್ಚು ಮನೆಗಳು ಈ ರಸ್ತೆಗೆ ಸ್ವಾಧೀನವಾಗುತ್ತಿವೆ. ಇಲ್ಲಿ ವಾಸವಾಗಿರುವ ಬಹುತೇಕರು ಕಾರ್ಮಿಕರು. ಇವರು ಕಷ್ಟಪಟ್ಟು ನಿರ್ಮಿಸಿಕೊಂಡಿರುವ ಮನೆಗಳು ಈಗ ನೆಲಸಮವಾಗುತ್ತಿವೆ. ಮನೆ ಕಳೆದುಕೊಂಡು ಬೀದಿಗೆ ಬರಲಿರುವ ಅವರಿಗೆ, ಪ್ರಾಧಿಕಾರ ಮನೆ ಅಥವಾ ನಿವೇಶನ ನೀಡುತ್ತದೆಯೇ? ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎನ್ನುವ ಕುತೂಹಲವಿದೆ.

ಭೂಮಿ ಕಳೆದುಕೊಳ್ಳುವ ರೈತರಿಗೆ ಸಿಗುವುದು ಬಿಡಿಗಾಸು ಎನ್ನಲಾಗುತ್ತಿದೆ. ಸಂತ್ರಸ್ತ ರೈತರಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಮೂದಾಗಿರುವ ಬೆಲೆ ಕೊಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಂದರೆ ನೋಟಿಸ್ ನೀಡಿದ ದಿನದ ಹಿಂದಿನ ದಿನದಿಂದ ಮೂರು ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ಮಾರಾಟ ಅಥವಾ ಪರಭಾರೆಯಾದ ಸಮಯದಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಗಿರುವ ಬೆಲೆಗಳಲ್ಲಿ ಆಯ್ದುಕೊಂಡು, ಅದನ್ನು ಸರಾಸರಿ ಮಾಡಿ ಭೂಮಿಗೆ ಬೆಲೆ ನಿಗದಿ ಮಾಡಲಾಗುತ್ತದೆ ಎನ್ನಲಾಗಿದೆ. ಈ ಸಬ್‍ರಿಜಿಸ್ಟ್ರೇಷನ್ ಬೆಲೆ ಎನ್ನುವುದು ರೈತರ ಪಾಲಿಗೆ ವಂಚನೆಯ ಬಲೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT