ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಶೇಂಗಾ ಬಿತ್ತನೆ ಬೀಜವೇ ಸಿಗುತ್ತಿಲ್ಲ

Published 23 ಮೇ 2023, 14:32 IST
Last Updated 23 ಮೇ 2023, 14:32 IST
ಅಕ್ಷರ ಗಾತ್ರ

ತುಮಕೂರು: ಶೇಂಗಾ ನಾಡು ಪಾವಗಡ ಭಾಗದ ಸುತ್ತಮುತ್ತ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರೂ ಬಿತ್ತನೆ ಬೀಜ ಸಿಗದೆ ಪರದಾಡುತ್ತಿದ್ದಾರೆ. ಬಿತ್ತನೆ ಬೀಜ ಪೂರೈಕೆ ಮಾಡಬೇಕಿದ್ದ ಕೃಷಿ ಇಲಾಖೆ ಇನ್ನೂ ಭರವಸೆಗೆ ಸೀಮತಗೊಂಡಿದೆ.

ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ಭಾಗದಲ್ಲಿ ಅತಿ ಹೆಚ್ಚಿನ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಅಲ್ಪಸ್ವಲ್ಪ ಬಿದ್ದ ಮಳೆಗೆ ಭೂಮಿಯನ್ನು ಉಳುಮೆ ಮಾಡಿ ಸಿದ್ಧತೆ ಮಾಡಿಕೊಂಡಿದ್ದು, ಬಿತ್ತನೆ ಬೀಜ ಸಿಗದೆ ಪರದಾಡುತ್ತಿದ್ದಾರೆ. ಪಕ್ಕದ ಆಂಧ್ರಪ್ರದೇಶದಲ್ಲಿ ಅಲ್ಲಿನ ಕೃಷಿ ಇಲಾಖೆ ಈಗಾಗಲೇ ರೈತರಿಗೆ ಬೀಜ ವಿತರಣೆ ಮಾಡಿದೆ. ನಮ್ಮಲ್ಲಿ ಅಂತಹ ಪ್ರಯತ್ನವೇ ನಡೆದಿಲ್ಲ.

ಗಡಿ ಭಾಗದ ಕೆಲವು ರೈತರು ಆಂಧ್ರದಿಂದ ಬೀಜ ತರಿಸಿಕೊಂಡಿದ್ದಾರೆ. ಇನ್ನೂ ಕೆಲವರು ಖಾಸಗಿ ಮಿಲ್‌ಗಳಿಗೆ ಎಡತಾಕಿದ್ದು, ದುಬಾರಿ ಹಣತೆತ್ತು ಖರೀದಿಸುತ್ತಿದ್ದಾರೆ. ಇದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮಂದಿ ಕೃಷಿ ಇಲಾಖೆ ನೀಡುವ ಬೀಜಕ್ಕಾಗಿ ಕಾದು ಕುಳಿತಿದ್ದಾರೆ. ಸದ್ಯಕ್ಕೆ 16,475 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ ಎಂದು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಹೇಳಿದ್ದಾರೆ. ಆದರೆ ರೈತರಿಗೆ ಬೀಜ ವಿತರಿಸುವ ವ್ಯವಸ್ಥೆ ಮಾಡಿಲ್ಲ.

ಸಾಮಾನ್ಯವಾಗಿ ಭರಣಿ ಮಳೆ ಬಿದ್ದಾಗ ಬಿತ್ತನೆ ಮಾಡುತ್ತಾರೆ. ಈ ಸಮಯದಲ್ಲಿ ಬಿತ್ತನೆ ಮಾಡಿದರೆ ಇಳುವರಿ ಚೆನ್ನಾಗಿ ಬರುತ್ತದೆ ಎಂಬುದು ರೈತರ ನಂಬಿಕೆ. ಈಗ ಭರಣಿ ಮುಗಿದು, ಕೃತಿಕಾ ಮಳೆ ಆರಂಭವಾಗಿದೆ. ಕೃಷಿ ಇಲಾಖೆ ಕಡಲೆ ಕಾಯಿ ಕೊಟ್ಟ ತಕ್ಷಣವೇ ಬಿತ್ತನೆ ಸಾಧ್ಯವಾಗುವುದಿಲ್ಲ. ಸಿಪ್ಪೆ ಸುಲಿದು, ಒಟ್ಟು ಬೇರ್ಪಡಿಸಿ, ಚೊಕ್ಕಮಾಡಿ ನಂತರ ಬೀಜ ಬಿತ್ತನೆ ಮಾಡಬೇಕಾಗುತ್ತದೆ. ಕಡಿಮೆ ಪ್ರದೇಶಕ್ಕಾದರೆ ಒಂದೆರಡು ದಿನಗಳಲ್ಲಿ ಸಿದ್ಧಪಡಿಸಿಕೊಳ್ಳಬಹುದು. ಪ್ರದೇಶ ಹೆಚ್ಚಿದ್ದಷ್ಟೂ ಬೀಜದ ಪ್ರಮಾಣವೂ ಹೆಚ್ಚು ಬೇಕಾಗುತ್ತದೆ. ಅಂತಹ ಸಮಯದಲ್ಲಿ ಕಾಯಿ ಬಿಡಿಸಿ ಬೀಜ ಸಿದ್ಧಪಡಿಸಲು ಕನಿಷ್ಠ ಒಂದು ವಾರ ತೆಗೆದುಕೊಳ್ಳುತ್ತದೆ. ಆ ವೇಳೆಗೆ ಭೂಮಿಯಲ್ಲಿ ತೇವಾಂಶ ಇದ್ದರೆ, ಅಥವಾ ಮಳೆ ಬಿದ್ದರೆ ಬಿತ್ತನೆ ಮಾಡುತ್ತಾರೆ. ಇಲ್ಲವಾದರೆ ಬಿತ್ತನೆ ಮತ್ತೆ ಮುಂದಕ್ಕೆ ಹೋಗುತ್ತದೆ. ಕೊನೆಗೆ ರೈತರ ಪರದಾಟ ಮಾತ್ರ ನಿಲ್ಲುವುದಿಲ್ಲ.

ಕುಸಿದ ಬಿತ್ತನೆ: ವರ್ಷದಿಂದ ವರ್ಷಕ್ಕೆ ಬಿತ್ತನೆ ಪ್ರದೇಶ ಕುಸಿಯುತ್ತಲೇ ಸಾಗಿದೆ. ಜಿಲ್ಲೆಯಲ್ಲಿ ಹಿಂದಿನ ವರ್ಷಗಳಲ್ಲಿ 3 ಲಕ್ಷ ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಕಡಲೆ ಕಾಯಿ ಬೆಳೆಯಲಾಗುತಿತ್ತು. ಹವಾಮಾನ ವೈಪರೀತ್ಯ, ಮಳೆ ಕೊರತೆ, ಸರಿಯಾದ ಬೆಲೆ ಸಿಗದಿರುವುದು ಮೊದಲಾದ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಬಿತ್ತನೆ ಪ್ರದೇಶ ತಗ್ಗುತ್ತಲೇ ಇದೆ. ಶೇಂಗಾ ಸಹವಾಸವೇ ಸಾಕು ಎಂದು ತೊಗರಿ ಸೇರಿದಂತೆ ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದಾರೆ.

2020ರಲ್ಲಿ 1.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ, 2021ರಲ್ಲಿ 1.50 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿತ್ತು. ಕೊನೆಗೆ ಬಿತ್ತನೆಯಾಗಿದ್ದು ಕೇವಲ 70 ಸಾವಿರ ಹೆಕ್ಟೇರ್‌ನಲ್ಲಿ. ಕಳೆದ ವರ್ಷ (2022) ಸುಮಾರು 80 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಿತ್ತನೆ ಪ್ರದೇಶ ಶೇ 75ರಷ್ಟು ಕಡಿಮೆಯಾಗಿದೆ.

ಎಣ್ಣೆ ಕಾಳು: ಎಣ್ಣೆಕಾಳು ಬೆಳೆಯುವುದು ಕಡಿಮೆಯಾಗಿದ್ದು, ಅನಿವಾರ್ಯವಾಗಿ ವಿದೇಶಗಳಿಂದ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸಾಕಷ್ಟು ಹಣ ನೀಡಬೇಕಾಗಿದೆ. ನಮ್ಮಲ್ಲೇ ಉತ್ಪಾದನೆ ಮಾಡಿದರೆ ಆಮದು ತಗ್ಗಿಸಿ, ವಿದೇಶಿ ವಿನಿಮಯ ಉಳಿಸಬಹುದು ಎಂಬ ಕಾರಣಕ್ಕೆ ಸರ್ಕಾರ ಪ್ರೋತ್ಸಾಹದ ಮಾತುಗಳನ್ನಾಡುತ್ತಿದೆ. ಆದರೆ ಕಾರ್ಯ ರೂಪಕ್ಕೆ ಬರುತ್ತಿಲ್ಲ. ಪ್ರೋತ್ಸಾಹವೂ ಸಿಗುತ್ತಿಲ್ಲ. ಪ್ರಮುಖವಾಗಿ ಸರಿಯಾದ ಬೆಲೆ ಸಿಗದೆ ರೈತರು ಶೆಂಗಾ ಬೆಳೆಯುವುದರಿಂದ ವಿಮುಖರಾಗುತ್ತಿದ್ದಾರೆ.

ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ಕೊಡಬೇಕು. ಬೆಳೆ ಬಂದು ಮಾರುಕಟ್ಟೆಗೆ ತಂದಾಗ ಬೆಲೆ ಕುಸಿದು ನಷ್ಟವಾಗದಂತೆ ನೋಡಿಕೊಂಡರೆ ಮಾತ್ರ ಶೇಂಗಾ ಬೆಳೆಯಬಹುದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಡಲೆ ಕಾಯಿ ಬೆಳೆಯಲು ಯಾರು ಮುಂದೆ ಬರುವುದಿಲ್ಲ ಎಂದು ಪಾವಗಡ ತಾಲ್ಲೂಕು ತಿರುಮಣಿ ರೈತ ವೀರಾಂಜನೇಯ ಹೇಳುತ್ತಾರೆ.

ವಿತರಣೆಗೆ ಕ್ರಮ

ಪಾವಗಡ ತಾಲ್ಲೂಕಿನ‌ ನಾಗಲಮಡಿಕೆ ಮಂಗಳವಾಡ ವೈ.ಎನ್.ಹೊಸಕೋಟೆ ರೈತ ಸಂಪರ್ಕ‌ ಕೇಂದ್ರಗಳು ಹಾಗೂ ಲಿಂಗದಹಳ್ಳಿಯಲ್ಲಿ ಶೇಂಗಾ ಬಿತ್ತನೆ ಬೀಜ ವಿತರಿಸಲಾಗುವುದು. 10330 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೆ ಬಿತ್ತನೆ ಬೀಜ ದಾಸ್ತಾನು ಮಾಡಲಾಗುತ್ತಿದೆ. 33900 ಹೆಕ್ಟೇರ್ ಬಿತ್ತನೆ ಗುರಿ ಇದೆ. ವಿಜಯಮೂರ್ತಿ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ ಪಾವಗಡ

ಬಿತ್ತನೆ ಬೀಜ ದುಬಾರಿ

ಶೇಂಗಾ ಬಿತ್ತನೆ ಬೀಜ ಸಿಗುತ್ತಿಲ್ಲ. ಕ್ವಿಂಟಲ್‌ಗೆ ₹12 ಸಾವಿರದಿಂದ 14 ಸಾವಿರ ನೀಡಿ ಮಳಿಗೆಗಳಿಂದ ಕೊಳ್ಳಬೇಕಿದೆ. ಇದಕ್ಕೆ ಸಾಕಷ್ಟು ಹಣ ವಿನಿಯೋಗಿಸಬೇಕು. ಇದರಿಂದ ರೈತರು ಸಾಲದ ಶೂಲಕ್ಕೆ ಸಿಲುಕುತ್ತಾರೆ. ಜಯಣ್ಣ ಕೆ.ಟಿ.ಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT