ಕ್ರಿಯಾಸಮಾಧಿ ಎಂದರೇನು? ಲಿಂಗವಂತರ ಅಂತಿಮ ವಿಧಿವಿಧಾನಗಳ ಮಾಹಿತಿ ಇಲ್ಲಿದೆ

7
ಶವವನ್ನು ಶಿವವನ್ನಾಗಿಸುವ ಕ್ರಿಯೆಯೇ ಕ್ರಿಯಾಸಮಾಧಿ

ಕ್ರಿಯಾಸಮಾಧಿ ಎಂದರೇನು? ಲಿಂಗವಂತರ ಅಂತಿಮ ವಿಧಿವಿಧಾನಗಳ ಮಾಹಿತಿ ಇಲ್ಲಿದೆ

Published:
Updated:

ಬೆಂಗಳೂರು: ಕ್ರಿಯಾಸಮಾಧಿ ಎಂದರೇನು? ಅದನ್ನು ಹೇಗೆ ಮಾಡುತ್ತಾರೆ? ಜೀವಮಾನವಿಡೀ ಶ್ರದ್ಧೆಯಿಂದ ಇಷ್ಟಲಿಂಗ ಪೂಜಿಸಿದ ಅಧ್ಯಾತ್ಮ ಸಾಧಕರಿಗೆ ಲಿಂಗಾಯತ ಪರಂಪರೆ ಅಂತಿಮ ಗೌರವವನ್ನು ಹೇಗೆ ಸಲ್ಲಿಸುತ್ತದೆ?

–ಈ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಈ ಬರಹವನ್ನೂ ಪೂರ್ತಿ ಓದಿ.

* ಏನಿದು ಕ್ರಿಯಾಸಮಾಧಿ?

ಶವವನ್ನು ಶಿವವಾಗಿಸುವ ಕ್ರಿಯೆಯೇ ಕ್ರಿಯಾಸಮಾಧಿ. ಲಿಂಗಧಾರಣೆ ಮಾಡಿ, ಇಷ್ಟ ಲಿಂಗಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಲಿಂಗಾಯತ ಪರಂಪರೆಯಲ್ಲಿ ಮಾಡುವ ಅಂತಿಮ ವಿಧಿಯೇ ಕ್ರಿಯಾಸಮಾಧಿ. ಶಿವೈಕ್ಯರಾದವರ (ಮೃತರ) ದೇಹವನ್ನು ಮಣ್ಣಿನಿಂದ ಮುಚ್ಚದೆ ವಿಭೂತಿ ಮತ್ತು ಉಪ್ಪನ್ನು ಮಾತ್ರ ಬಳಸಿ ಮುಚ್ಚಲಾಗುತ್ತದೆ. ಆ ಸ್ಥಳದ ಮೇಲ್ಭಾಗದಲ್ಲಿ ಗದ್ದುಗೆ ನಿರ್ಮಿಸಲಾಗುತ್ತದೆ. ಈ ಗದ್ದುಗೆಯನ್ನು ಮುಂದಿನ ದಿನಗಳಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ.

* ಯಾರಿಗೆ ಕ್ರಿಯಾಸಮಾಧಿ?

ಕ್ರಿಯಾಸಮಾಧಿಯನ್ನು ಲಿಂಗಾಯತ ಪರಂಪರೆಯಲ್ಲಿ ಅನುಸರಿಸಲಾಗುತ್ತದೆ. ಅಧ್ಯಾತ್ಮ ಸಾಧಕರು (ಸಾಧು, ಸಂತರು, ಜಂಗಮರು), ಇಷ್ಟಲಿಂಗ ಪೂಜೆಯನ್ನು ತಪಸ್ಸಿನಂತೆ ಆಚರಿಸಿಕೊಂಡು ಬಂದವರಿಗೆ ಮಾತ್ರ ಕ್ರಿಯಾಸಮಾಧಿಯ ಗೌರವ ಸಿಗುತ್ತದೆ.

* ಹೇಗಿರುತ್ತೆ ಕ್ರಿಯಾಸಮಾಧಿ?

ಕ್ರಿಯಾಸಮಾಧಿ ನಡೆಯುವ ಸ್ಥಳವನ್ನು ಸಾಮಾನ್ಯವಾಗಿ ಮೊದಲೇ ಗುರುತಿಸಲಾಗುತ್ತದೆ. ಅದರೊಳಗೆ ಇಳಿಯಲು ಮೂರು ಹಂತದಲ್ಲಿ ಮೆಟ್ಟಿಲುಗಳನ್ನೂ ನಿರ್ಮಿಸಲಾಗುತ್ತದೆ. ಪಾರ್ಥಿವ ಶರೀರವನ್ನು ಕೂರಿಸಲು ಅದರೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ಇರುತ್ತದೆ. ಕ್ರಿಯಾವಿಧಾನಗಳು ನೆರವೇರುವ ವೇಳೆ ದೀಪವನ್ನು ಹಚ್ಚಿಡಲು ಪಕ್ಕದಲ್ಲಿ ಪುಟ್ಟದೊಂದು ಗೂಡನ್ನೂ ರೂಪಿಸಲಾಗಿರುತ್ತದೆ.

* ಉದ್ದ– ಅಗಲ ಎಷ್ಟು?

ಕ್ರಿಯಾಸಮಾಧಿಯ ವಿಸ್ತೀರ್ಣ ಹೀಗಿರುತ್ತೆ. 9 ಪಾದ ಉದ್ದ ಮತ್ತು 5 ಪಾದ ಅಗಲ. ಒಂದು ಪಾದ ಎಂದರೆ ಅದು ಮೃತರ ಪಾದದ ಹೆಬ್ಬರೆಳಿನಿಂದ ಹಿಮ್ಮಡಿವರೆಗಿನ ಉದ್ದ. ಗದ್ದುಗೆಯು ಆಳಕ್ಕೆ ಇಳಿದಂತೆ ಹಿರಿದಾಗುವಂತೆ ಮೂರು ಹಂತಗಳನ್ನು ಒಳಗೊಂಡಿರುತ್ತದೆ. 

* ಗುಂಡಿಯೊಳಗೆ ಏನೆಲ್ಲಾ ಇಡುತ್ತಾರೆ?

ಗುಂಡಿ ತೆಗೆದ ಬಳಿಕ ಒಳಭಾಗದ ಗೋಡೆಗೆ ವಿಭೂತಿ ಪುಡಿಯನ್ನು ಬಳಿಯಲಾಗುತ್ತದೆ. ಗೋಡೆಯ ಒಳಭಾಗವನ್ನು ನಯಗೊಳಿಸಿ, ಸುಣ್ಣ, ವಿಭೂತಿ ಹಚ್ಚಲಾಗುತ್ತದೆ. ಪಾರ್ಥಿವ ಶರೀರವನ್ನು ಅಲ್ಲಿಗೆ ತರುವ ಮುನ್ನ ಆ ಸ್ಥಳಕ್ಕೆ ಪೂಜೆ ನೆರವೇರಿಸಲಾಗುವುದು.

* ಕ್ರಿಯಾವಿಧಿಯ ಪೂಜೆ ಹೇಗಿರುತ್ತೆ?

ಶಿವೈಕ್ಯರಾದವರಿಗೆ ನಾಡಿನ ವಿವಿಧ ನದಿಗಳ ಪವಿತ್ರ ಜಲದಿಂದ ಅಂತಿಮ ಪುಣ್ಯಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ತೊಡಿಸಲಾಗುತ್ತದೆ. ಕಾಲುಗಳನ್ನು ಪದ್ಮಾಸನ ಸ್ಥಿತಿಯಲ್ಲಿರುವಂತೆ ಕೂರಿಸಿ, ಪೂಜೆ ಸಲ್ಲಿಸಲಾಗುವುದು. ಅಲ್ಲಿಂದ ಮೆರವಣಿಗೆ ಮೂಲಕ ಕ್ರಿಯಾಸಮಾಧಿ ನಡೆಯುವ ಸ್ಥಳಕ್ಕೆ ತರಲಾಗುತ್ತದೆ.

* ಕ್ರಿಯಾಮೂರ್ತಿಗಳು ಏನು ಮಾಡುತ್ತಾರೆ?

ಓರ್ವ ಹಿರಿಯ ಸ್ವಾಮೀಜಿಗೆ ಕ್ರಿಯಾಮೂರ್ತಿಗಳ ಗೌರವ ನೀಡಲಾಗುತ್ತದೆ. ಕ್ರಿಯಾವಿಧಾನದ ವಿಧಿಗಳು ಅವರ ನೇತೃತ್ವದಲ್ಲಿಯೇ ನಡೆಯುತ್ತವೆ. ಗಣಪತಿ ಪೂಜೆ, ಪಂಚ ಕಳಶ ಸ್ಥಾಪನೆ, ಅಷ್ಟ ದಿಕ್ಪಾಲಕರ ಪೂಜೆ, ನವಗ್ರಹ ಪೂಜೆಗಳು ನಡೆಯುತ್ತವೆ. ಶಿವನ ಪಂಚಮುಖಗಳ ಸಂಕೇತವಾಗಿ ಐದು ಕಳಶ ಹಾಗೂ ವರ್ಣ ಮತ್ತು ವಾಸ್ತು ದೇವತೆಗಳ ಎರಡು ಕಳಶಗಳನ್ನು ಸ್ಥಾಪಿಸಲಾಗುತ್ತದೆ. ಸ್ಥಳದಲ್ಲಿರುವ ಒಟ್ಟು ಏಳು ಕಳಶಗಳಿಗೆ ಪುಣ್ಯಾಹ ಎನ್ನುತ್ತಾರೆ. ನಾಂದಿ ಕಳಶ ಸ್ಥಾಪನೆಯೊಂದಿಗೆ ಹಿರಿಯರು, ಗುರುಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಇದಕ್ಕೆ ಶಿವನ ಏಕೋವಿಂಶತಿ ಮಹೇಶ್ವರರ ಪೂಜೆ ಎನ್ನಲಾಗುತ್ತದೆ.

* ಲಿಂಗೈಕ್ಯರ ಇಷ್ಟಲಿಂಗ ಏನಾಗುತ್ತೆ?

ಜೀವಮಾನವಿಡೀ ಭಕ್ತಿ, ಗೌರವ ಮತ್ತು ವಿಶ್ವಾಸದಿಂದ ಆರಾಧಿಸಿದ ಇಷ್ಟಲಿಂಗಕ್ಕೆ ಸಾಂಗವಾಗಿ ಅಭಿಷೇಕ ನೆರವೇರಿಸಿ, ಪೂಜಿಸಲಾಗುತ್ತದೆ. ನಂತರ ಅದನ್ನು ಮೃತರ ತೋಳಿಗೆ ಕಟ್ಟಲಾಗುತ್ತದೆ. ಕೆಲವೆಡೆ ಕುತ್ತಿಗೆಗೆ ಕಟ್ಟುವ ಪದ್ಧತಿಯೂ ಇದೆ.

* ಗದ್ದುಗೆ ವಿಧಿ ಹೇಗೆ?

ಗುಂಡಿಗೆ ಇಳಿಸಿದ ಪಾರ್ಥಿವ ಶರೀರವನ್ನು ವಿಭೂತಿ ಮತ್ತು ಉಪ್ಪಿನಿಂದ ಮುಚ್ಚಲಾಗುತ್ತದೆ. ವಿಭೂತಿ ಭಸ್ಮಗುಣ ಹೊಂದಿದ್ದು, ಉಪ್ಪು ಕರಗಿಸುವ ಗುಣ ಹೊಂದಿದೆ. ಆದ್ದರಿಂದ, ಎರಡನ್ನೂ ಮಿಶ್ರ ಮಾಡಿ ಬಳಸಲಾಗುತ್ತದೆ. ವಿಭೂತಿಯನ್ನು ಪುಡಿ ಮಾಡಿ ಹಾಕುವ ಹಾಗೂ ಇಡಿಯಾದ ಗಟ್ಟಿಗಳನ್ನು ಕ್ರಮವಾಗಿ ಜೋಡಿಸುವ ಮೂಲಕವೂ ಶರೀರವನ್ನು ಮುಚ್ಚುವ ಪದ್ಧತಿ ಇದೆ. ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರ ಬರೆದ 108 ತಾಮ್ರದ ಅಂತ್ರಗಳನ್ನು (ಯಂತ್ರ) ಸಮಾಧಿಯ ನಾಲ್ಕೂ ಗೋಡೆಗೆ ಬಡಿಯಲಾಗುವುದು. ಅದರಲ್ಲಿ ಒಂದನ್ನು ಪಾರ್ಥಿವ ಶರೀರದ ನಾಲಿಗೆಯ ಮೇಲೆ ಇರಿಸಲಾಗುವುದು.

* ಉತ್ತರಾಧಿಕಾರಿಗೆ ಹೊಣೆ ವರ್ಗಾವಣೆ ಹೇಗೆ?

ಶರೀರವನ್ನು ಗುಂಡಿಯಲ್ಲಿ ಇಳಿಸಿದ ಬಳಿಕ, ವಿಭೂತಿ–ಉಪ್ಪು ಹಾಕಿ ಮುಚ್ಚುವ ಮೊದಲು ಅವರ ಮುಂದಿನ ಉತ್ತರಾಧಿಕಾರಿಗೆ ಪಾರ್ಥಿವ ಶರೀರದ ತಲೆಯ ಮೇಲಿದ್ದ ಪೇಟ ತೊಡಿಸಲಾಗುತ್ತದೆ. ಪೇಟ ತೊಡಿಸಿಕೊಂಡ ಉತ್ತರಾಧಿಕಾರಿ ಕೊನೆಯದಾಗಿ ಪೂಜೆ ಸಲ್ಲಿಸಿ, ‘ಮಠದ ಜವಾಬ್ದಾರಿಯನ್ನು ನಿಮ್ಮ ಆಶಯಗಳಿಗೆ ಧಕ್ಕೆಬಾರದಂತೆ ಸರಿದೂಗಿಸಿಕೊಂಡು ಹೋಗುವೆ’ ಎಂದು ನೆರೆದವರ ಸಮ್ಮುಖದಲ್ಲಿ ಪ್ರಮಾಣ ಮಾಡುತ್ತಾರೆ.

* ‘ವಚನ ಮಂಗಳಾರತಿ’ ಎಂದರೇನು?

‘ಜೀವನವಿಡೀ ಇಷ್ಟಲಿಂಗ ಪೂಜೆ ಮಾಡಿದ ಧನ್ಯಜೀವಕ್ಕೆ ಮುಕ್ತಿ ಸಿಗಲಿ’ ಎಂದು ನೆರೆದವರು ವಚನಗಳು ಮತ್ತು ತತ್ವಪದಗಳ ಮೂಲಕ ಹಾರೈಸುವುದೇ ವಚನ ಮಂಗಳಾರತಿ. ಶರಣರು ಸಲ್ಲಿಸುವ ವಿದಾಯದ ವಚನ ಮಂಗಳಾರತಿ ಬಳಿಕ ಎಲ್ಲರೂ ಹೂವು, ಪತ್ರೆಯನ್ನು ಸಮರ್ಪಿಸುತ್ತಾರೆ.

* ಕ್ರಿಯಾಸಮಾಧಿಗೆ ಸ್ಥಳದ ಆಯ್ಕೆ ಹೇಗೆ?

ಕೆಲ ಸಾಧಕರು ತಮ್ಮ ಕ್ರಿಯಾಸಮಾಧಿ ಇಂಥದ್ದೇ ಸ್ಥಳದಲ್ಲಿ, ಹೀಗೆಯೇ ನಡೆಯಬೇಕು ಎಂದು ನಿರ್ದಿಷ್ಟವಾಗಿ ಸೂಚಿಸಿರುತ್ತಾರೆ. ಅದೇ ಪ್ರಕಾರವಾಗಿ ನಡೆಯುತ್ತದೆ. ಶಿವಕುಮಾರ ಸ್ವಾಮೀಜಿ 37 ವರ್ಷಗಳ ಹಿಂದೆಯೇ ಇದನ್ನು ಸೂಚಿಸಿದ್ದರು. ಒಂದು ವೇಳೆ ಸೂಚನೆ ನೀಡದಿದ್ದ ಪಕ್ಷದಲ್ಲಿ ಅಂಥವರ ಕ್ರಿಯಾಸಮಾಧಿಯನ್ನು ಮಠ ಅಥವಾ ಊರಿನ ಪವಿತ್ರ ಸ್ಥಳದಲ್ಲಿ ನೆರವೇರಿಸಲಾಗುತ್ತದೆ.

ಇನ್ನಷ್ಟು ಓದು

ಶಿವಕುಮಾರ ಶ್ರೀ ಬರೆದಿಟ್ಟಿರುವಂತೆ ಅವರ ಕ್ರಿಯಾಸಮಾಧಿ ನಡೆಯಲಿದೆ, ಸಿದ್ಧಲಿಂಗ ಶ್ರೀ

ಇಷ್ಟಲಿಂಗ ಪ್ರಿಯ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

ಹುಟ್ಟಿದ ಊರಿಗೆ 25 ವರ್ಷ ಕಾಲಿಡದ ಸ್ವಾಮೀಜಿ

ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ, ನೀವು ಓದಬೇಕಾದ ಸುದ್ದಿಗಳು

ಅನ್ನದಾಸೋಹದಲ್ಲಿಯೇ ಶಿವನ ಸಾಕ್ಷಾತ್ಕಾರ​

ಅರಿವಿನ ಜತೆ ಬದುಕು ಕೊಟ್ಟ ಲೋಕಗುರು

ಸರಳತೆಯ ಕಾಯಕಯೋಗಿ

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !