ಶನಿವಾರ, ಜನವರಿ 23, 2021
21 °C
ಗೋಡೆಕೆರೆಯಲ್ಲಿ ಸರಳವಾಗಿ ಆಚರಣೆಗೆ ಮುಖಂಡರ ನಿರ್ಧಾರ

ಜ. 14ಕ್ಕೆ ಸಿದ್ದರಾಮೇಶ್ವರ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಶ್ರೀಗುರು ಸಿದ್ದರಾಮೇಶ್ವರ 848 ಜಯಂತಿಯನ್ನು ಈ ಬಾರಿ ತಾಲ್ಲೂಕಿನ ಗೋಡೆಕೆರೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ರಾಜ್ಯ ನೊಳಂಬ ವೀರಶೈವ ಸಂಘದ ಅಧ್ಯಕ್ಷ ನಾಗರಾಜು ಹೇಳಿದರು.

ತಾಲ್ಲೂಕಿನ ಗೋಡೆಕೆರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸೊಲ್ಲಾಪುರದಲ್ಲಿ 847ನೇ ಸಿದ್ದರಾಮೇಶ್ವರ ಜಯಂತಿಯನ್ನು ವಿಜೃಂಭಣೆಯಾಗಿ ಮಾಡಲಾಗಿತ್ತು. ಈ ಬಾರಿಯು ಜಯಂತಿಯನ್ನು ಬ್ಯಾಡಗಿ ತಾಲ್ಲೂಕು ಚಿಕ್ಕಬಾಸೂರುನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲು ಉದ್ದೇಶವಿತ್ತು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ ಹಿನ್ನೆಲೆಯಲ್ಲಿ ಸಚಿವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯಲ್ಲಿಯೇ ಸಿದ್ದರಾಮೇಶ್ವರ ಜಯಂತಿ ಮಾಡಲು ಸಲಹೆ ನೀಡಿದರು. ಅವರ ಸಲಹೆ ಪರಿಗಣಿಸಿ ಈ ಬಾರಿ ಗೋಡೆಕೆರೆಯಲ್ಲಿಯೇ ಆಚರಿಸಲಾಗುವುದು ಎಂದರು.

ಈ ಬಾರಿಯ ಜಯಂತಿಯಲ್ಲಿ ಆಹ್ವಾನ ಪತ್ರಿಕೆಯಿರುವುದಿಲ್ಲ. ಇಲ್ಲಿನ ಮಠದ ಸ್ವಾಮೀಜಿ ಅವರು ಮಾತ್ರ ಹಾಜರಿರುತ್ತಾರೆ. ಜಯಂತಿಯನ್ನು ಜ. 14ರಂದು 10ಗಂಟೆಗೆ ಆರಂಭಿಸಿ 2 ಗಂಟೆಯೊಳಗೆ ಕಾರ್ಯಕ್ರಮ ಮುಗಿಸುವ ತೀರ್ಮಾನ ಮಾಡಲಾಗಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ, ಸಂಸದ ಜಿ.ಎಸ್. ಬಸವರಾಜು, ತುಮಕೂರಿನ ಶಾಸಕ ಜ್ಯೋತಿಗಣೇಶ್, ಬೇಲೂರಿನ ಶಾಸಕ  ಲಿಂಗೇಶ್ ಉಪಸ್ಥಿತರಿರುವರು. ಸಿದ್ದರಾಮೇಶ್ವರರ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು.

ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸಿದ್ದರಾಮೇಶ್ವರರ ಜಯಂತಿಯು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ. ಜಯಂತಿಯಲ್ಲಿ ನಾಲ್ಕು ಮಂದಿ ಚುನಾಯಿತರನ್ನು ಕರೆಸುವುದು ಹಾಗೂ ಸರಳ ರೀತಿಯಲ್ಲಿ ಶಾಂತಿಯುತವಾಗಿ ಜಯಂತಿ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಣ್ಣ, ಷಡಕ್ಷರಿ, ಆನಂದಯ್ಯ, ನಿಜಾನಂದಮೂರ್ತಿ, ಸ್ವಾಮಿ, ಕುಮಾರಯ್ಯ, ವಿವೇಕಾನಂದಸ್ವಾಮಿ, ಅಶೋಕ್ ಸೇರಿದಂತೆ ಹಲವರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.