ತುಮಕೂರು: ಪದವಿಪೂರ್ವ, ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಹೇ ವಿಶ್ವವಿದ್ಯಾಲಯದೊಂದಿಗೆ ಮಧ್ಯಪ್ರದೇಶದ ಉಜ್ಜೆಯಿನಿ ಆವಂತಿಕಾ ವಿಶ್ವವಿದ್ಯಾಲಯ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.
ಸಾಹೇ ವಿ.ವಿಯಲ್ಲಿ ಮಂಗಳವಾರ ಎರಡು ವಿ.ವಿಗಳ ಶೈಕ್ಷಣಿಕ ಪ್ರತಿನಿಧಿಗಳ ಜಂಟಿ ಸಭೆ ನಡೆಯಿತು. ಇನ್ನು ಮುಂದೆ ಎರಡು ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ಸಹಕಾರ, ಸಂಬಂಧಗಳನ್ನು ಔಪಚಾರಿಕಗೊಳಿಸಲು, ವೇಗಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆದವು.
ಸಭೆ ಬಳಿಕ ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ ಹಾಗೂ ಆವಂತಿಕಾ ವಿ.ವಿ ಕುಲಪತಿ ನಿತಿನ್ ರಾಣೆ ಪರಸ್ಪರ ಒಡಂಬಡಿಕೆ ಪತ್ರಗಳಿಗೆ ಸಹಿ ಮಾಡಿ, ವಿನಿಮಯ ಮಾಡಿಕೊಂಡರು.
ನಂತರ ಸಾಹೇ ವಿ.ವಿ ಕುಲಾಧಿಪತಿ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದ ನಿಯೋಗ, ಜಾಗತಿಕ ಮಟ್ಟದಲ್ಲಿ ಸ್ವರ್ಧೆ ಎದುರಿಸಲು ಆಮೂಲಾಗ್ರ ಶೈಕ್ಷಣಿಕ ಸುಧಾರಣಾ ಕ್ರಮಗಳು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಕುರಿತು ಮನವರಿಕೆ ಮಾಡಿಕೊಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ, ‘ಪದವಿಪೂರ್ವ, ಪದವಿ ಹಂತದಲ್ಲಿ ವಿದ್ಯಾರ್ಥಿಗಳ ವಿನಿಮಯ, ಶೈಕ್ಷಣಿಕ, ಸಂಶೋಧನಾ ಚಟುವಟಿಕೆಗಳ ವಿಸ್ತರಣೆ ಹಾಗೂ ಎರಡನೇ ಹಂತದ ನಗರದಲ್ಲೂ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು ಇದರಿಂದ ಸಹಕಾರಿಯಾಗಲಿದೆ’ ಎಂದು ಹೇಳಿದರು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯೋಗ, ಕೈಗಾರಿಕಾ ವಲಯಕ್ಕೆ ಬೇಕಾದ ಕೋರ್ಸ್‌ಗಳ ಆರಂಭ ಹಾಗೂ ತರಬೇತಿ ನೀಡಲು ಸಹಕಾರಿಯಾಗಿದೆ ಎಂದರು.
ಆವಂತಿಕಾ ವಿ.ವಿ ಡೀನ್ ಪ್ರಿಯಾ ರಾವ್, ಪ್ರವೇಶಾತಿ ವಿಭಾಗದ ನಿರ್ದೇಶಕ ಅಮೀತ್ ಶರ್ಮಾ, ಸಾಹೇ ವಿ.ವಿ ರಿಜಿಸ್ಟ್ರಾರ್ ಎಂ.ಝೆಡ್.ಕುರಿಯನ್, ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಉಪಪ್ರಾಂಶುಪಾಲ ಡಾ.ಪ್ರಭಾಕರ್, ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್ ಕುಡುವಾ, ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.