ಕುಣಿಗಲ್: ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಜಮೀನು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದರೂ, ಭೂಮಿ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ದಾಖಲೆಗಳನ್ನು ನಿಯಮಬಾಹಿರವಾಗಿ ಸೃಷ್ಟಿಸಿ ಮಾರಾಟ ಮಾಡಲು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಉಜ್ಜನಿ ಗ್ರಾಮಸ್ಥರು ಮಂಗಳವಾರ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ದಿನೇಶ್, ‘ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿಯ ಸರ್ವೆ ನಂಬರ್ 345ರಲ್ಲಿ ಈಚೆಗೆ 345-1 ಮತ್ತು 345-2 ಎಂದು ಪಹಣಿ ಸೃಜನೆಯಾಗಿದ್ದು, 345ಕ್ಕೆ ಒಟ್ಟುಗೂಡಿಸಲು ಕೋರಿದ್ದ ಮೇರೆಗೆ ಪರಿಶೀಲಿಸಲಾಗಿ ದಾಖಲೆಗಳು ಭೂ ದಾಖಲೆ ಸಹಾಯಕ ನಿರ್ದೇಶಕರಿಂದ ಮೇಲು ಸಹಿಯಾಗಿ ಆಕಾರ್ ಬಂದ್ ದುರಸ್ತಿಯಾಗಿರುವುದಿಲ್ಲ. ಕಣ್ ತಪ್ಪಿನಿಂದ ನಕಲು ವಿತರಿಸಿರುವುದರಿಂದ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ತಡೆಯಾಜ್ಞೆ ನೀಡಲಾಗಿದೆ.
ಸಂಬಂಧಪಟ್ಟ ದಾಖಲೆ ನೀಡಿ ಪೋಡಿ ಮಾಡದಂತೆ ಭೂದಾಖಲೆ ಸಹಾಯಕ ನಿರ್ದೇಶಕರಿಗೆ ಇದೇ 14ರಂದು ಮನವಿ ಸಲ್ಲಿಸಿದ್ದರೂ, 16ಕ್ಕೆ ಪೋಡಿಯಾಗಿದೆ. ಇದಕ್ಕೆ ಪೂರಕ ದಾಖಲೆ ಇಲ್ಲದಿದ್ದರೂ 17ಕ್ಕೆ ಪಹಣಿ ನೀಡಿ 18ಕ್ಕೆ ಮಾರಾಟ ಮಾಡಲಾಗಿದೆ. ಭೂ ದಾಖಲೆ ನಿರ್ದೇಶಕರ ಕಚೇರಿ ಸಿಬ್ಬಂದಿ ಮತ್ತು ಭೂಮಿ ವಿಭಾಗದ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ದೂರಿದರು..
ಭೂದಾಖಲೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ವಿವಾದದ ಬಗ್ಗೆ ತಹಶೀಲ್ದಾರ್ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಪೋಡಿಯೇ ಆಗದ ಭೂಮಿ ದಾಖಲೆಗಳನ್ನು ನಕಲು ಮಾಡಲಾಗಿದೆ. ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ತಪ್ಪುಮಾಡಿರುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಪೋಡಿ ರದ್ದಿಗೆ ಸಹ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಯು.ಕೆ.ಕುಮಾರ್, ಹುಲಿಯೂರುದುರ್ಗ ಹೋಬಳಿ ರೈತ ಸಂಘದ ಅಧ್ಯಕ್ಷ ಬಸವರಾಜು, ಕೃಷ್ಣ, ಚಲುವರಾಜು, ವಿನಯ್ ಕುಮಾರ್ ಪ್ರದೀಪ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.