ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ಹಾಹಾಕಾರ

ಬರಿದಾಗಿರುವ ಮಾರ್ಕಂಡೇಯ ನದಿಯ ಒಡಲು:
Last Updated 13 ಏಪ್ರಿಲ್ 2018, 9:05 IST
ಅಕ್ಷರ ಗಾತ್ರ

ಗೋಕಾಕ: ನಗರ ವಾಸಿಗಳಿಗೆ ಕುಡಿಯುವ ನೀರು ಪೂರೈಸುವ ಯೋಗಿಕೊಳ್ಳ ರಸ್ತೆಯ ಗಟ್ಟಿ ಬಸವಣ್ಣ ಬ್ಯಾರೇಜ್‌ ಬರಿದಾಗಿದ್ದು, ಸದ್ಯದಲ್ಲಿಯೇ ಜನತೆಗೆ ನೀರಿನ ಬಿಸಿ ಮುಟ್ಟುವ ಆತಂಕ ಎದುರಾಗಿದೆ.

ಅಂದಾಜು ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗೋಕಾಕ ನಗರಕ್ಕೆ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಯ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಘಟಪ್ರಭಾದಲ್ಲಿ ತಕ್ಕಮಟ್ಟಿಗೆ ನೀರಿದೆ. ಆ ಮೂಲವನ್ನೇ ಬಳಸಿಕೊಂಡು ನಗರಸಭೆಯವರು ನೀರಿನ ಪರಿಸ್ಥಿತಿಯನ್ನು ಹೇಗೋ ಕಷ್ಟಪಟ್ಟು ನಿಭಾಯಿಸುತ್ತಿದ್ದಾರೆ. ಶಿರೂರ ಜಲಾಶಯದಿಂದ ನೀರು ಬಿಡುಗಡೆಯಾಗುವಲ್ಲಿ ವಿಳಂಬ ಆಗಿರುವುದರಿಂದ ಗಟ್ಟಿ ಬಸವಣ್ಣ ಬ್ಯಾರೇಜ್‌ ಬರಿದಾಗಿದೆ.

ಕೇವಲ ಕುಡಿಯುವುದಕ್ಕಾಗಿ ಅಲ್ಲದೇ, ತಾಲ್ಲೂಕಿನ ಗೊಡಚಿನಮಲ್ಕಿ, ಮೇಲ್ಮಟ್ಟಿ ಮೊದಲಾದ ಗ್ರಾಮಗಳ ಸುತ್ತಮುತ್ತಲಿನ ಹೊಲಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ. ದನ– ಕರುಗಳಿಗೂ ಕುಡಿಯುವ ನೀರಿನ ಅಭಾವ ಎದುರಾಗಿದೆ. ಕೃಷಿಕರು ಕಂಗಾಲಾಗಿದ್ದಾರೆ.

ಪ್ರತಿ ವರ್ಷ ಏಪ್ರಿಲ್‌ ಅಂತ್ಯಕ್ಕೆ ಅಥವಾ ಮೇ ತಿಂಗಳಿನಲ್ಲಿ ಬ್ಯಾರೇಜ್‌ ಬರಿದಾಗುತ್ತಿತ್ತು. ಆದರೆ, ಈ ಸಲ ಅವಧಿಗೂ ಮುಂಚೆಯೇ ನೀರು ಬರಿದಾಗಿದೆ. ಇದು ನಾಗರಿಕರಿಗೆ ಹಾಗೂ ಕೃಷಿಕರಿಗೆ ಆತಂಕ ಮೂಡಿಸಿದೆ. ಇನ್ನೂ ಎರಡು ತಿಂಗಳು ಕಾಲ ಬೇಸಿಗೆ ದಿನಗಳನ್ನು ಕಳೆಯುವುದು ಹೇಗೆ ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ.

ನೀರು ಬಿಡಲು ಮನವಿ: ಇತ್ತೀಚೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಜಲಾಶಯಕ್ಕೆ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಥಳೀಯರು ಕೂಡ, ಆದಷ್ಟು ಬೇಗನೇ ನೀರನ್ನು ಹರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಮಾರ್ಕಂಡೇಯ ನದಿಯು ನೀರಿಲ್ಲದೇ ಬತ್ತಿಹೋಗಿದೆ. ಕುಡಿಯುವ ನೀರಿಗಷ್ಟೇ ಕೊರತೆ ಉಂಟಾಗಿಲ್ಲ, ನದಿ ತಟದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದೆ. ನೀರಿಲ್ಲದೆ ಕಂಗಾಲಾಗಿದ್ದಾರೆ. ದನ–ಕರುಗಳಿಗೂ ನೀರು ಸಿಗುತ್ತಿಲ್ಲ’ ಎಂದು ಲಯನ್ಸ್‌ ಕ್ಲಬ್‌ ನಿಕಟಪೂರ್ವ ಅಧ್ಯಕ್ಷ ಜಿ.ಎಸ್‌.ಸಿದ್ದಾಪೂರಮಠ ಹೇಳಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಹೆಚ್ಚು ಬಿಸಿಲು ಇದೆ. ಇದನ್ನು ಗಮನಿಸಿದರೆ, ಮುಂದಿನ ಮೇ ತಿಂಗಳಿನಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗುವುದು ಖಚಿತ. ಈಗಿನಿಂದಲೇ ನಗರಸಭೆಯವರು ಮುನ್ನೆಚ್ಚರಿಕೆ ವಹಿಸಿ, ಶಿರೂರ ಜಲಾಶಯದಿಂದ ಮಾರ್ಕಂಡೇಯ ನದಿಗೆ ನೀರು ಹರಿಸಬೇಕು’ ಎಂದು ಇಲ್ಲಿಯ ಶ್ರೀ ವಿನಾಯಕ ಅರ್ಬನ್‌ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಎಂ.ಪಿ.ಅಂಗಡಿ ಆಗ್ರಹಿಸಿದರು.

ಸಮಸ್ಯೆ ಉದ್ಭವಿಸದು: 2016ರಲ್ಲಿ ಹಿಡಕಲ್‌ ಹಾಗೂ ಶಿರೂರ ಜಲಾಶಯಗಳು ಸಂಪೂರ್ಣವಾಗಿ ಬತ್ತಿಹೋಗಿದ್ದವು. ಆಗ ಗೋಕಾಕ ನಗರಕ್ಕೆ ಭಾರಿ ನೀರಿನ ಸಮಸ್ಯೆ ಎದುರಾಗಿತ್ತು. ಈ ವರ್ಷ ಅಂತಹ ಪರಿಸ್ಥಿತಿ ಬರಲಾರದು. ಹಿಡಕಲ್‌ ಜಲಾಶಯದಲ್ಲಿ ಇನ್ನೂ ನೀರಿದೆ.  ಆ ನೀರನ್ನು ಬಳಸಿಕೊಂಡು ನಗರಕ್ಕೆ ಪೂರೈಸುತ್ತೇವೆ ಎಂದು ನಗರಸಭೆ ಸಹಾಯಕ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ವಿ.ಎಸ್‌. ತಡಸಲೂರ ಹೇಳಿದರು.

ಈ ಸಲ ಶಿರೂರ ಜಲಾಶಯದಿಂದ ನೀರು ಬಿಡುಗಡೆಯಾಗಲು ವಿಳಂಬವಾಗಿದ್ದರಿಂದ ಬ್ಯಾರೇಜ್‌ನಲ್ಲಿ ನೀರಿಲ್ಲ. ಕುಡಿಯುವ ನೀರಿನ ಇನ್ನೊಂದು ಮೂಲವಾಗಿರುವ ಘಟಪ್ರಭಾ ನದಿಗೆ ಶಿಂಗಳಾಪೂರ ಮತ್ತು ಧುಪದಾಳ ಜಲಾಶಯದಿಂದ ನೀರು ಬರುತ್ತದೆ. ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT