ಶುಕ್ರವಾರ, ಡಿಸೆಂಬರ್ 4, 2020
24 °C

ಶಿರಾ ವಿಧಾನಸಭೆ ಉಪಚುನಾವಣೆ: ಬಂಡಾಯದ ನಡುವೆ ಅರಳಿದ ಕಮಲ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿ, ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ವಿಜಯದ ಪತಾಕೆ ಹಾರಿಸುವ ಮೂಲಕ ಜಿಲ್ಲೆಯಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಜೆಡಿಎಸ್, ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿ ಕಮಲ ನಳನಳಿಸುವಂತೆ ಮಾಡಿದೆ.

ಪರಿಷತ್‌ನಲ್ಲಿ ಜೆಡಿಎಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತಗಳಿಕೆ ಪ್ರಮಾಣ ಹೆಚ್ಚಳವಾಗಿದ್ದರೂ ಪೈಪೋಟಿ ನೀಡುವ ಮಟ್ಟಕ್ಕೆ ಏರಲು ತಿಣುಕಾಡಿದೆ. ಎಸ್.ಮಲ್ಲಿಕಾರ್ಜುನಯ್ಯ ನಂತರ ಕೈ ತಪ್ಪಿದ್ದ ಅಧಿಕಾರವನ್ನು ಮರಳಿ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಒಂದೇ ಬಾರಿಗೆ ಎರಡು ಕ್ಷೇತ್ರಗಳನ್ನು ಬಾಚಿಕೊಂಡಿದೆ.

ಕಳೆದ ಬಾರಿ ಶಿರಾ ವಿಧಾನಸಭೆಗೆ ಜೆಡಿಎಸ್‌ನಿಂದ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡು ಹಿನ್ನಡೆ ಅನುಭವಿಸಿದ್ದ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಎಂ.ಚಿದಾನಂದ ಗೌಡ ಈಗ ಪರಿಷತ್ ಮೂಲಕ ವಿಧಾನಸೌಧ ಪ್ರವೇಶಿಸಿದ್ದಾರೆ. ಸೋಲಿನ ನಂತರ ತಟಸ್ಥವಾಗಿದ್ದು, ಬಿಜೆಪಿ ಸೇರಿ ಪರಿಷತ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಟಿಕೆಟ್ ಸಿಕ್ಕರೂ ಸ್ಪರ್ಧೆ ಅಷ್ಟೊಂದು ಸುಲಭವಾಗಿರಲಿಲ್ಲ. ಹೊರಗಿನಿಂದ ಬಂದವರಿಗೆ ಅವಕಾಶ ನೀಡಲಾಗಿದೆ ಎಂಬ ಕಾರಣಕ್ಕೆ ಪಕ್ಷದ ಒಳಗೆ ಕೆಲವರು ಬಂಡಾಯದ ಬಾವುಟ ಹಾರಿಸಿದ್ದರು. ಈ ಬಂಡಾಯವನ್ನು ಮೆಟ್ಟಿನಿಂತು ಗೆದ್ದುಬಂದಿರುವುದು ದೊಡ್ಡ ಸಾಧನೆ.

ಚಿದಾನಂದಗೌಡ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಹಾಲನೂರು ಲೇಪಾಕ್ಷ್ ಬಂಡಾಯವಾಗಿ ಕಣಕ್ಕಿಳಿದರು. ಮತ್ತೊಬ್ಬ ಆಕಾಂಕ್ಷಿ ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಸಹ ಬಂಡಾಯವಾಗಿ ಸ್ಪರ್ಧಿಸಿದರು. ಲೇಪಾಕ್ಷ್ ಕೂಡ ಜಿಲ್ಲೆಯವರಾಗಿದ್ದು, ಶ್ರೀನಿವಾಸ್ ರಾಜಕೀಯವಾಗಿ ಸಾಕಷ್ಟು ‘ಶಕ್ತಿ’ವಂತರಾಗಿದ್ದು ಹೆಜ್ಜೆ ಹೆಜ್ಜೆಗೂ ತೊಡಕಾಗಿ ಕಾಡಿದರು.

ಚಿದಾನಂದಗೌಡ ಅವರಿಗೆ ಪಕ್ಷ ಬೆಂಬಲವಾಗಿ ನಿಂತು ಕೆಲಸ ಮಾಡಿದರೂ ಶ್ರೀನಿವಾಸ್ ಪ್ರಬಲ ಪೈಪೋಟಿ ಒಡ್ಡಿದ್ದು, ಎರಡನೇ ಸ್ಥಾನಕ್ಕೆ ಏರಿದ್ದಾರೆ. ಬಂಡಾಯದ ಪ್ರಕೋಪ ತೋರಿದ ಲೇಪಾಕ್ಷ್‌ ಅವರನ್ನೂ ಪದವೀಧರರು ಕೈಹಿಡಿದಿಲ್ಲ. ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಮತಗಳು ಬಿಜೆಪಿಯತ್ತ ವಾಲಿದಂತೆ ಪರಿಷತ್ ಚುನಾವಣೆಯಲ್ಲೂ ಅದೇ ವಾತಾವರಣ ಕಂಡುಬಂದಿದೆ. ಜೆಡಿಎಸ್‌ನ ಚೌಡರೆಡ್ಡಿ ಕೇವಲ ಕೋಲಾರ ಭಾಗಕ್ಕೆ ಸೀಮಿತರಾಗಿದ್ದು, ತುಮಕೂರು ಭಾಗದಲ್ಲಿ ಮತಗಳನ್ನು ಸೆಳೆಯಲು ಸಾಧ್ಯವಾಗದಿರುವುದು ಬಿಜೆಪಿ ಗೆಲುವಿಗೆ ನೆರವಾಗಿದೆ.

ಶಿರಾದಂತೆ ಪರಿಷತ್ ಚುನಾವಣೆಯಲ್ಲೂ ಆರ್ಥಿಕ ಸಂಪನ್ಮೂಲ ಹಾಗೂ ಕೊಡುಗೆಗಳ ಮಹಾಪೂರವೇ ಹರಿದು ಬಂದಿದೆ. ಪ್ರಜ್ಞಾವಂತರು, ಪದವೀಧರರು ಆಮಿಷಕ್ಕೆ ಒಳಗಾಗಿದ್ದಾರೆ. ಸುಶಿಕ್ಷಿತರೇ ಇಂತಹ ಮಟ್ಟಕ್ಕೆ ಇಳಿದರೆ ಇನ್ನು ಯಾರಿಗೆ ಬುದ್ಧಿ ಹೇಳುವುದು ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು