ಬುಧವಾರ, ನವೆಂಬರ್ 25, 2020
21 °C
ಬಿರುಸು ಪಡೆದ ರಾಜಕೀಯ ಲೆಕ್ಕಾಚಾರ

ಶಿರಾ ವಿಧಾನಸಭೆ ಉಪಚುನಾವಣೆ| ದಾಖಲೆ ಮತದಾನ: ಗೆಲುವಿನ ಸೋಪಾನ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿರಾ ವಿಧಾನಸಭೆ ಉಪಚುನಾವಣೆ ಮತದಾನ ಪೂರ್ಣಗೊಂಡಿದ್ದು, ಈಗ ಗೆಲುವು– ಸೋಲಿನ ಲೆಕ್ಕಾಚಾರಗಳು ನಡೆದಿವೆ. ಬಿಜೆಪಿ, ಕಾಂಗ್ರೆಸ್‌ ನಡುವೆ ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಬಿರುಸು ಪಡೆದುಕೊಂಡಿವೆ.

ದಾಖಲೆಯ ಶೇ 84.54ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಅಧಿಕ ಪ್ರಮಾಣ ದಲ್ಲಿ ಮತದಾನವಾಗಿದ್ದು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಾದ ಮಂಡನೆಗೆ ಪುಷ್ಟಿ ನೀಡಿದೆ. ಮತದಾನದ ಪ್ರಮಾಣದಲ್ಲಿ ಏರಿಕೆ ಆಗಿರುವುದು ಯಾವ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ಮುಖಂಡರು ತಮ್ಮದೇ ಗೆಲುವು ಎಂಬ ಲೆಕ್ಕಾಚಾರದಲ್ಲಿ ತರಾಗಿದ್ದಾರೆ.

ಮತದಾನ ಪ್ರಮಾಣ ಕಡಿಮೆ ಇದ್ದಾಗ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾ ಬಂದಿದ್ದಾರೆ. ಇದು ಹೆಚ್ಚಿದ್ದ ಸಂದರ್ಭಗಳಲ್ಲಿ ಇತರೆ ಪಕ್ಷದವರು ಆಯ್ಕೆಯಾಗಿದ್ದು, ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳು ಕಡಿಮೆ. ಶಿರಾದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಬಿಜೆಪಿ, ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಶೇ 60ಕ್ಕಿಂತ ಮೇಲ್ಪಟ್ಟು ಚಲಾವಣೆಯಾಗಿರುವ ಮತಗಳಲ್ಲಿ ಬಹುತೇಕ ಬಿಜೆಪಿಗೆ ಬಂದಿವೆ. ಕಾಂಗ್ರೆಸ್, ಜೆಡಿಎಸ್‌ಗೆ ಮತ ನೀಡುತ್ತಿದ್ದವರು ಈ ಸಲ ಬಿಜೆಪಿ ಬೆಂಬಲಿಸಿದ್ದಾರೆ. ಅಧಿಕಾರ, ಹಣಬಲ ಹೆಚ್ಚು ಕೆಲಸ ಮಾಡಿದೆ. ಈ ‘ಲೆಕ್ಕಾಚಾರ’ ಗಮನಿಸಿದರೆ ಬಿಜೆಪಿ ಗೆಲ್ಲುವ ಅವಕಾಶಗಳು ಹೆಚ್ಚು ಎಂದು ಹೇಳಲಾಗುತ್ತಿದೆ.

ಶಿರಾ ನಗರ ಹಾಗೂ ತಾಲ್ಲೂಕಿನ ಪ್ರತಿ ಹೋಬಳಿ ವ್ಯಾಪ್ತಿಯಲ್ಲೂ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಸಹ ಅಷ್ಟೇ ಪ್ರಮಾಣದಲ್ಲಿ ಸ್ಪರ್ಧೆ ಒಡ್ಡಿದ್ದಾರೆ. ಆದರೆ ಜೆಡಿಎಸ್‌ನ ಅಮ್ಮಾಜಮ್ಮ ಎಲ್ಲಾ ಭಾಗದಲ್ಲೂ ಸ್ಪರ್ಧೆ ನೀಡಲು ಸಾಧ್ಯವಾಗಿಲ್ಲ. ಆ ಪಕ್ಷದ ಮತಗಳೂ ನಮಗೆ ಬಂದಿವೆ. ಮತದಾನದ ಪ್ರಮಾಣ ಹೆಚ್ಚಿರುವುದು ಬಿಜೆಪಿಗೆ ಗೆಲುವು ತಂದುಕೊಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ಈ ವಾದವನ್ನು ಕಾಂಗ್ರೆಸ್ ಮುಖಂಡರು ಒಪ್ಪುತ್ತಿಲ್ಲ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಚದುರಿಲ್ಲ. ತಮ್ಮ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಏನಿದ್ದರೂ ಜೆಡಿಎಸ್ ಮತಗಳನ್ನೇ ಸೆಳೆದಿದೆ. ಚುನಾವಣೆ ಹತ್ತಿರ ಬಂದಂತೆ ಆ ಪಕ್ಷ ಸಹ ಚೇತರಿಕೆ ಕಂಡಿದ್ದು, ಅಭ್ಯರ್ಥಿಗೆ ಸಾಕಷ್ಟು ಮತಗಳು ಬಿದ್ದಿವೆ. ಇಂತಹ ವಾತಾವರಣವನ್ನು ಗಮನಿಸಿದರೆ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ. ಕ್ಷೇತ್ರದಲ್ಲಿ ಅಬ್ಬರ ಕಂಡುಬಂದಿದೆ. ಆದರೆ ಗೆಲ್ಲುವ ಮಟ್ಟಕ್ಕೆ ಮತದಾರರನ್ನು ಸೆಳೆಯಲು ಸಾಧ್ಯವಾಗಿಲ್ಲ ಎಂಬ ತರ್ಕವನ್ನು ಕಾಂಗ್ರೆಸಿಗರು ಮುಂದಿಡುತ್ತಿದ್ದಾರೆ.

ಕಾಂಗ್ರೆಸ್, ಬಿಜೆಪಿಗೆ ಸರಿಸಮನಾಗಿ ಜೆಡಿಎಸ್ ಎಲ್ಲಾ ಭಾಗದಲ್ಲೂ ಮತಪಡೆದಿದ್ದರೆ ಯಾರು ಗೆಲ್ಲುತ್ತಾರೆ ಎಂದು ಈಗಲೇ ಹೇಳುವುದು ಕಷ್ಟಕರವಾಗುತ್ತದೆ. ಜೆಡಿಎಸ್ ‘ಶಕ್ತಿ’ ಬಿಜೆಪಿ ಗೆಲುವನ್ನು ನಿರ್ಧರಿಸುತ್ತದೆ. ಕಾಂಗ್ರೆಸ್‌ನ ಮತಗಳು ಹೆಚ್ಚು ಚದುರದಂತೆ ನೋಡಿಕೊಂಡಿದ್ದರೆ ಆ ಪಕ್ಷಕ್ಕೆ ನೆರವಾಗಬಲ್ಲದು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

‘ಬೂತ್ ಮಟ್ಟದಿಂದ ವಿವರ ಪಡೆದುಕೊಂಡಿದ್ದೇವೆ. 10 ಸಾವಿರ ಮತಗಳ ಅಂತರದಿಂದ ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ನಮಗೆ ಹೆಚ್ಚು ಅವಕಾಶಗಳಿವೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ಗೆಲುವು ನಿರ್ಧಾರವಾಗಿದೆ. ಎಷ್ಟು ಮತಗಳಿಂದ ಎಂಬುದು ಮತಗಳ ಎಣಿಕೆ ದಿನ ಗೊತ್ತಾಗಲಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರೊಬ್ಬರು ಉತ್ಸಾಹ ತೋರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು