ಗುರುವಾರ , ಸೆಪ್ಟೆಂಬರ್ 19, 2019
24 °C
ನ್ಯಾಯಾಲಯ ಆವರಣಕ್ಕೆ ಹೊಂದಿಕೊಂಡ ವಿವಾದಿತ ಮಳಿಗೆ ಮೇಲೆ ಮೇಲಂತಸ್ತು ನಿರ್ಮಾಣಕ್ಕೆ ಯತ್ನ

ವಕೀಲರು, ವ್ಯಾಪಾರಿಗಳ ನಡುವೆ ಚಕಮಕಿ

Published:
Updated:
Prajavani

ಕುಣಿಗಲ್: ಪಟ್ಟಣದ ನ್ಯಾಯಾಲಯದ ಆವರಣಕ್ಕೆ ಹೊಂದಿಕೊಂಡ ವಿವಾದಿತ ಮಳಿಗೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣ ವಿಚಾರದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವ್ಯಾಪಾರಿಗಳು ಮತ್ತು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯನ್ನು ವಕೀಲರು ಕೆಡವಿದ ಘಟನೆ ಭಾನುವಾರ  ನಡೆದಿದೆ.

ದೊಡ್ಡಪೇಟೆ ರಸ್ತೆಯ ಅಂಗಡಿಗಳ ವಿವಾದ ಹೈಕೋರ್ಟ್‌ನಲ್ಲಿ ಯಥಾಸ್ಥಿತಿ ಕಾಪಾಡುವ ಆದೇಶವಿದೆ. ಆದರೂ ಅಂಗಡಿ ಮಾಲೀಕ ಗುರುಸಿದ್ದೇಶ್ವರ ತಮ್ಮ ಅಂಗಡಿಯ ಮೇಲಂತಸ್ತಿನಲ್ಲಿ ಮಳಿಗೆ ನಿರ್ಮಾಣಕ್ಕೆ ಶನಿವಾರ ರಾತ್ರಿಯಿಂದಲೇ ಕೆಲಸ ಪ್ರಾರಂಭಿಸಿದ್ದರು.

ವಿಷಯ ತಿಳಿದ ವಕೀಲರ ಸಂಘದ ಅಧ್ಯಕ್ಷ ಹುಚ್ಚೇಗೌಡ. ಕಾರ್ಯದರ್ಶಿ ಸಿಂಗಯ್ಯ, ಪದಾಧಿಕಾರಿಗಳಾದ ಹರ್ಷ ರಾಜೇಶ್ ಮತ್ತು ಚಿಕ್ಕೇಗೌಡ ಸ್ಥಳಕ್ಕೆ ಬಂದು ಕಾಮಗಾರಿ ತಡೆದರು. ವಿವಾದಿತ ಸ್ಥಳದಲ್ಲಿ ಅನುಮತಿ ಇಲ್ಲದೆಯೇ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ಕಟ್ಟುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಮಾಲೀಕನ ಬೆಂಬಲಕ್ಕೆ ನಿಂತ ವ್ಯಾಪಾರಿ ಚೇತನ್, ನಾಗೇಶ್ ಮತ್ತು ಗಂಗಾಧರ್  ಅವರು ವಕೀಲರೊಂದಿಗೆ ಮಾತಿನ ಚಕಮಕಿ ನಡೆಸಿದರು. ತಾವು ನಿಯಮಾವಳಿಗಳ ಪ್ರಕಾರವೇ ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದರು.

ವಕೀಲರು, ಪುರಸಭೆ ಮುಖ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಮಳಿಗೆ ನಿರ್ಮಾಣಕ್ಕೆ ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ತೆರವಿಗೆ ವಕೀಲರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ತೆರವು ಮಾಡದೇ ಇದ್ದಾಗ ಸಂಘದ ಪದಾಧಿಕಾರಿಗಳೇ ತೆರವುಗೊಳಿಸಿದರು.

ಮಾತಿನ ಚಕಮಕಿ

ಮಾಲೀಕರ ಬೆಂಬಲಿಗರು ಮತ್ತು ವಕೀಲರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ವಿಕಾಸ್ ಅವರು ಸಿಬ್ಬಂದಿಯೊಂದಿಗೆ ಬಂದು ಪರಿಸ್ಥಿತಿ ಶಾಂತಗೊಳಿಸಿದರು. ಎರಡು ಗುಂಪಿನವರಿಂದ ಮಾಹಿತಿ ಪಡೆದು ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲು ಸೂಚನೆ ನೀಡಿದರು.

ಭಾನುವಾರದ ಘಟನೆ ಬಗ್ಗೆ ಸೋಮವಾರ ವಕೀಲರ ಸಂಘದ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಲಲಾಗುವುದು ಎಂದು ಕಾರ್ಯದರ್ಶಿ ಸಿಂಗಯ್ಯ ತಿಳಿಸಿದ್ದಾರೆ.

Post Comments (+)