ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಆಮೆ ವೇಗದಲ್ಲಿ ಕಾಮಗಾರಿ

ಬಳ್ಳಾರಿ– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ
Last Updated 27 ಆಗಸ್ಟ್ 2020, 3:51 IST
ಅಕ್ಷರ ಗಾತ್ರ

ತಿಪಟೂರು: ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳನ್ನು ಬಲಿ ಪಡೆದ ಬಳ್ಳಾರಿ– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ವಾಹನ ಸವಾರರಿಗೆ ತಲೆನೋವಾಗಿದೆ.

ಬಳ್ಳಾರಿಯಿಂದ ಚಾಮರಾಜನಗರದವರೆಗೆ ರಾಷ್ಟ್ರೀಯ ಹೆದ್ದಾರಿ 150ಎ ಅನ್ನುಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ 425 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದ್ದು, ತಾಲ್ಲೂಕು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಇದ್ದ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿದೆ.

ಕೆ.ಬಿ.ಕ್ರಾಸ್ ಬಳಿಯಿಂದ ಜಯಚಾಮರಾಜಪುರ ಗ್ರಾಮದ ಬಳಿ ರಸ್ತೆ ಅಭಿವೃದ್ಧಿಗಾಗಿ ಒಂದೂವರೆ ತಿಂಗಳ ಹಿಂದೆಯೇ ಸುಸ್ಥಿತಿಯಲ್ಲಿದ್ದ ರಸ್ತೆಯನ್ನು ಕಿತ್ತು ಹಾಕಲಾಗಿದೆ. ಆದರೆ, ಇಲ್ಲಿವರೆಗೂ ಕಾಮಗಾರಿಯನ್ನು ಪ್ರಾರಂಭಿಸಿಲ್ಲ. ಇದರಿಂದ ಜನರು ದಿನವೂ ಬಿದ್ದು– ಎದ್ದು ಸಾಗುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರಂತೂ ಈ ರಸ್ತೆಯಲ್ಲಿ ಓಡಾಡುವುದು ಕಷ್ಟಕರ.

‘ರಸ್ತೆ ಅಭಿವೃದ್ಧಿಗಾಗಿ ಮರಗಳನ್ನು ಕಡಿದಷ್ಟೇ ತ್ವರಿತವಾಗಿ ಕಾಮಗಾರಿಯನ್ನು ಏಕೆ ಮಾಡುತ್ತಿಲ್ಲ. ಅಭಿವೃದ್ಧಿಯಿಂದಾಗಿ ಸ್ಥಳೀಯ ಗ್ರಾಮಗಳಿಗೆ ಮೂಲ ಸೌಕರ್ಯಗಳು ಸಿಗದಾಗಿವೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳೀಯರು ಎದುರಿಸುತ್ತಿದ್ದಾರೆ’ ಎನ್ನುತ್ತಾರೆ ಸಾರ್ವಜನಿಕರು.

‘ರಸ್ತೆ ಅಭಿವೃದ್ಧಿಗಾಗಿ ಹಟ್ನ ಗ್ರಾಮದ ಬಳಿ 3 ಸೇತುವೆಗಳ ಕಾಮಗಾರಿ ಪ್ರಾರಂಭಿಸಿ ವರ್ಷಗಳೇ ಕಳೆದಿದ್ದರೂ ಅದನ್ನು ಅರ್ಧಕ್ಕೆ ನಿಲ್ಲಿಸಿ ಪಕ್ಕದಿಂದ ಓಡಾಡಲು ದಾರಿ ಮಾಡಿಕೊಡಲಾಗಿದೆ. ಇದರಿಂದಾಗಿ ಎದುರಿಗೆ ಬರುವ ವಾಹನಗಳು ಕಾಣದೆ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ವಾಹನ ಸವಾರರ ಪ್ರಾಣ ಹೋಗುವ ಮುಂಚಿತವಾಗಿ ಕಾಮಗಾರಿ ತ್ವರಿತವಾಗಿ ಮುಗಿಸಬೇಕು’ ಎಂದು ವಾಹನ ಸವಾರರು ಒತ್ತಾಯಿಸುತ್ತಾರೆ.

‘ಹಾಲುಗೊಣ ಗ್ರಾಮದಲ್ಲಿ ಮೂರು ತಿಂಗಳಿನಿಂದ ರಸ್ತೆಯ ಎಡಬದಿಯಲ್ಲಿ ಇರುವ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ’ ಎಂದು ಸ್ಥಳೀಯರು ದೂರುತ್ತಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ತವರು ಗ್ರಾಮದಲ್ಲಿಯೇ ಇಂತಹ ಸಮಸ್ಯೆ ಇದ್ದರೂ ಬಗೆಹರಿಸುತ್ತಿಲ್ಲ. ಸಚಿವರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಅತ್ತ ಗಮನ ಹರಿಸದಿರುವುದು ಬೇಸರದ ಸಂಗತಿ’ ಎಂಬುದು ಜನಸಾಮಾನ್ಯರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT