ಕೊಳೆಗೇರಿ ಜನರ ಹಕ್ಕೊತ್ತಾಯಕ್ಕಾಗಿ ಬೆಂಬಲಿಸಿ: ಎಚ್.ಡಿ.ದೇವೇಗೌಡ

ಶುಕ್ರವಾರ, ಏಪ್ರಿಲ್ 19, 2019
22 °C
ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದ ಪದಾಧಿಕಾರಿಗಳ ಜೊತೆ ಚರ್ಚೆ

ಕೊಳೆಗೇರಿ ಜನರ ಹಕ್ಕೊತ್ತಾಯಕ್ಕಾಗಿ ಬೆಂಬಲಿಸಿ: ಎಚ್.ಡಿ.ದೇವೇಗೌಡ

Published:
Updated:
Prajavani

ತುಮಕೂರು: ’ಕೊಳೆಗೇರಿ ನಿವಾಸಿಗಳ ಹಕ್ಕೊತ್ತಾಯಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಲು ಹಾಗೂ ಕೊಳೆಗೇರಿ ನಿವಾಸಿಗಳಿಗೆ ಭೂಮಿ ಮತ್ತು ವಸತಿ ಹಕ್ಕು ಖಾತ್ರಿಗೊಳಿಸುವ ಕಾಯ್ದೆ ಜಾರಿಗೊಳಿಸಲು ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ‘ ಎಂದು ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ನುಡಿದರು.

ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದ ಪದಾಧಿಕಾರಿಗಳೊಂದಿಗೆ ’ಸ್ಲಂ ನಿವಾಸಿಗಳ ಸನ್ನದ್ದು‘ ಕುರಿತು ಚರ್ಚಿಸಿ ಅವರು ಮಾತನಾಡಿದರು.

’ಕೊಳೆಗೇರಿ ನಿವಾಸಿಗಳಿಗೆ ಸಾಮಾಜಿಕ ನ್ಯಾಯ ಖಾತ್ರಿಗೊಳಿಸಲು ಚುನಾವಣೆಯಲ್ಲಿ ನನ್ನನು ಬೆಂಬಲಿಸಿ. ಬಡವರಲ್ಲಿ ಭಗವಂತನನ್ನು ಕಾಣುತ್ತಿದ್ದೇನೆ. ಸ್ಲಂ ಜನರ ಸೇವೆಗಾಗಿ ಅವಕಾಶ ದೊರಕಿಸಿಕೊಡಿ‘ ಎಂದರು. 

’ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಏಕ ನಾಯಕತ್ವಕ್ಕೂ ಮತ್ತು ಪ್ರಜಾಪ್ರಭುತ್ವದ ಉಳಿವಿಗೂ ನಡೆಯುವ ಹೋರಾಟವಾಗಿದೆ. ಸಂವಿಧಾನದ ಆಶಯದಂತೆ ಕೊಳೆಗೇರಿ ಜನರಿಗೆ ಮಾನವ ಘನತೆಯ ಭೂಮಿ, ವಸತಿ, ಮೂಲ ಸೌಲಭ್ಯ, ಶಿಕ್ಷಣ, ಆರೋಗ್ಯ, ಆಹಾರ ಸೌಲಭ್ಯಕ್ಕಾಗಿ ನನ್ನ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ‘ ಎಂದು ಹೇಳಿದರು.

ಈ ವೇಳೆ ಸ್ಲಂ ಜನಾಂದೋಲನಾ ಕರ್ನಾಟಕದ ಸಂಚಾಲಕ ನರಸಿಂಹಮೂರ್ತಿ, ಕೊಳೆಗೇರಿ ನಿವಾಸಿಗಳ ಸನ್ನದ್ದು ಕುರಿತು ವಿವರಿಸಿದರು.

ಸಂಸತ್ ಸದಸ್ಯರ ನಿಧಿಯಲ್ಲಿ ಕೊಳೆಗೇರಿ ಅಭಿವೃದ್ಧಿಗೆ ಹಣ ಮೀಸಲಿಡಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಪ್ರೋತ್ಸಾಹ ಧನವನ್ನು ₹ 5 ಲಕ್ಷಕ್ಕೆ ಏರಿಕೆ ಮಾಡಬೇಕು. ಸ್ಲಂ ಜನರ ಭೂಮಿಯನ್ನು ಸಾರ್ವಜನಿಕ ಸಂಪನ್ಮೂಲ ಎಂಬುದನ್ನು ಕೈಬಿಡಲು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಎಲ್ಲ ನಗರ ವಂಚಿತ ಸಮುದಾಯಗಳಿಗೆ ಉಚಿತವಾಗಿ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ವಸತಿ, ಆಹಾರ ಖಾತ್ರಿಗೊಳಿಸಬೇಕು. ನಗರಾಭಿವೃದ್ಧಿ ಹೆಸರಿನಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ಕಡ್ಡಾಯವಾಗಿ ಕೊಳೆಗೇರಿಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಡುವ ಕಾಯ್ದೆ ರೂಪಿಸಬೇಕು. ಸ್ಮಾರ್ಟ್‌ಸಿಟಿ, ಅಮೃತ್ ಯೋಜನೆ ಹಾಗೂ ಕೇಂದ್ರದಿಂದ ಜಾರಿಯಾಗುವ ಬಡತನ ನಿರ್ಮೂಲನಾ‌ ಕಾರ್ಯಕ್ರಮಗಳಲ್ಲಿ ನಗರ ವಂಚಿತ ಸಮುದಾಯಗಳಿಗೆ ಪಾಲ್ಗೊಳ್ಳುವ ಪ್ರಾತಿನಿಧ್ಯ ನೀಡಬೇಕು ಎಂದು ಕೋರಲಾಯಿತು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಕೊಳೆಗೇರಿ ಸಂಘಟನೆಯ ಪದಾಧಿಕಾರಿಗಳಾದ ದೀಪಿಕಾ, ಶೆಟ್ಟಾಳಯ್ಯ, ಕಣ್ಣನ್, ದೊಡ್ಡರಂಗಯ್ಯ, ಶಂಕರಯ್ಯ, ಶಾರದಮ್ಮ, ಅರುಣ್ ಮತ್ತು ಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !