ಶನಿವಾರ, ಡಿಸೆಂಬರ್ 7, 2019
22 °C
ಮಹಾನಗರ ಪಾಲಿಕೆಯಲ್ಲಿ ಕೊಳೆಗೇರಿ ನಿವಾಸಿಗಳ ಕುಂದು ಕೊರತೆ ಸಭೆ

ವಸತಿ ರಹಿತರಿಗೆ ವಸತಿ ಕಲ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮಹಾನಗರಪಾಲಿಕೆಯಲ್ಲಿ ಶುಕ್ರವಾರ ಮೇಯರ್ ಅಧ್ಯಕ್ಷತೆಯಲ್ಲಿ ಕೊಳೆಗೇರಿ ನಿವಾಸಿಗಳ ಕುಂದು ಕೊರತೆ ಸಭೆ ನಡೆಯಿತು.

ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ, ‘ ಕೊಳೆಗೇರಿಗಳ ಘೋಷಣೆಗೆ ಸಂಬಂಧಿಸಿದಂತೆ ನಗರದ 5 ಕೊಳೆಗೇರಿಗಳಿಗೆ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರದ ಅವಶ್ಯಕತೆ ಇದೆ. ದಾಖಲೆ ರಹಿತ ಕೊಳಚೆ ಪ್ರದೇಶಗಳಾದ ಎನ್.ಆರ್.ಕಾಲೊನಿ. ಹೆಳ್ಳಾರಬಂಡೆ, ಸಂಪಾದನೆಮಠ, ಎಸ್.ಎನ್. ಪಾಳ್ಯ, ಭಾರತಿನಗರ, ಗುಂಡ್ಲಮ್ಮನಗರ, ನಜರಾಬಾದ್, ಕುರಿಪಾಳ್ಯ, ಗಂಗಸಂದ್ರ ಮುಂತಾದ ಕೊಳೆಗೇರಿಗಳಿಗೆ ಪಾಲಿಕೆಯಿಂದ ಸರಳ ಖಾತೆಗಳನ್ನು ಮಾಡಬೇಕಿದೆ ಎಂದು ಆಗ್ರಹಿಸಿದರು.

ದಿಬ್ಬೂರಿನ ದೇವರಾಜ್ ಅರಸ್ ಬಡಾವಣೆಗೆ ಮೂಲ ಸೌಲಭ್ಯ ಕಲ್ಪಿಸಲು ₹ 5 ಕೋಟಿ ಅನುದಾನ ನೀಡಬೇಕು.  ನಗರದಲ್ಲಿ 21 ಸಾವಿರ ವಸತಿರಹಿತ ಕುಟುಂಬಗಳಿದ್ದು, ವಸತಿ ಕಲ್ಪಿಸಲು 200 ಎಕರೆ ಭೂಮಿಗೆ ಜಿಲ್ಲಾಡಳಿತಕ್ಕೆ ಪ್ರಾಸ್ತಾವ ಸಲ್ಲಿಸಲು ಪಾಲಿಕೆ ಮುಂದಾಗಬೇಕು ಎಂದು ಕೋರಿದರು.

ಆಯುಕ್ತ ಭೂಬಾಲನ್ ಮಾತನಾಡಿ, ‘ಹಕ್ಕುಪತ್ರ ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು.  ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಕೊಳಚೆ ಪ್ರದೇಶಗಳಿಗೆ ಆದ್ಯತೆ ಮೇಲೆ ಖಾತೆ ನೀಡಲು ಸರ್ಕಾರದಿಂದ ಸ್ಪಷ್ಟನೆ ಪಡೆಯಲಾಗುವುದು. ದೇವರಾಜ್ ಅರಸು ಬಡವಾಣೆಯಲ್ಲಿನ ಸಮಸ್ಯೆಗಳ ನಿವಾರಣೆಗೆ ಸ್ಲಂ ನಿವಾಸಿಗಳ ಸಹಭಾಗಿತ್ವದಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲು ನಾಗರಿಕ ಸಮಿತಿ ರಚಿಸಿ ನೀರು, ವಿದ್ಯುತ್, ಚರಂಡಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಲಲಿತಾ ರವೀಶ್, ‘ಕೊಳೆಗೇರಿಗಳಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭಿಸಿ ₹ 2ಕ್ಕೆ ಒಂದು ಕ್ಯಾನ್ ನೀರು ನೀಡಲಾಗುವುದು. ಕೊಳಚೆ ಪ್ರದೇಶಗಳ ಘೋಷಣೆಗೆ ನಿರಾಕ್ಷೇಪಣಾ ಪತ್ರ ಮತ್ತು ದಾಖಲೆ ರಹಿತ ಕೊಳಚೆ ಪ್ರದೇಶಗಳಿಗೆ ಖಾತೆ ಮಾಡಿಕೊಡಲು ಸಾಮಾನ್ಯ ಸಭೆಯಲ್ಲಿ ನಿರ್ಣಹಿಸಲಾಗುವುದು ಎಂದು ಹೇಳಿದರು.

ಉಪಮೇಯರ್ ರೂಪಶ್ರೀ, ಸಾಮಾಜಿಕ ಸ್ಥಾಯಿ ಸಮಿತಿ ಅದ್ಯಕ್ಷ ಸೈಯಾದ್ ನಯಾಜ್, ಪಾಲಿಕೆ ಸದಸ್ಯೆ ವೀಣಾ, ಆರೋಗ್ಯಾಧಿಕಾರಿ ಡಾ.ನಾಗೇಶ್,  ಡೇ ನಲ್ಮಾ, ವಸತಿ ಕೋಶದ ಅಧಿಕಾರಿಗಳು ಮತ್ತು ಕೊಳಗೇರಿ ಸಮಿತಿಯ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು