ಗುರುವಾರ , ಫೆಬ್ರವರಿ 20, 2020
27 °C

ಆರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಿ: ತುಮಕೂರು ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊಳೆಗೇರಿ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ನಗರಾಭಿವೃದ್ಧಿ ಕೋಶವು ಆರು ತಿಂಗಳಿಗೆ ಒಮ್ಮೆ ಕುಂದುಕೊರತೆ ಸಭೆ ಕರೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲೆಯ ಕೊಳೆಗೇರಿ ನಿವಾಸಿಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು ನಿವೇಶನ ರಹಿತರಿಗೆ ತಕ್ಷಣ ನಿವೇಶನ ಅಥವಾ ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಲಿದೆ ಎಂದರು.

ಸಭೆಯಲ್ಲಿ ತುಮಕೂರು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನೀಡಿದ ಹಕ್ಕೊತ್ತಾಯಗಳ ಬಗ್ಗೆ ಚರ್ಚಿಸಿದ ಜಿಲ್ಲಾಧಿಕಾರಿ, ನಗರದಲ್ಲಿರುವ ನಿವೇಶನ ರಹಿತರಿಗೆ ಸೌಲಭ್ಯ ನೀಡಲು ಸರ್ಕಾರಿ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ. ಸರ್ವೆ ನಂಬರ್ ಅನ್ನು ಸಂಘಟನೆ ನೀಡಿದೆ. ನಗರಕ್ಕೆ ಹತ್ತಿರವಿರುವ ಸರ್ಕಾರಿ ಗೋಮಾಳಗಳನ್ನು ತುಮಕೂರು ತಹಶೀಲ್ದಾರ್ 30 ದಿನಗಳ ಒಳಗೆ ಗುರುತಿಸಿ ನಕ್ಷೆ ಸಮೇತ ವರದಿ ನೀಡಬೇಕು ಎಂದು ಆದೇಶಿಸಿದರು. 

ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಘೋಷಣೆಯಾಗಿ 15 ವರ್ಷವಾಗಿರುವ ಕೊಳಚೆ ಪ್ರದೇಶಗಳಿಗೆ ಕ್ರಯಪತ್ರ ನೀಡಬೇಕು. ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳಿಗೆ ಸರ್ಕಾರಿ ಸುತ್ತೋಲೆ ಅನ್ವಯ ಹಕ್ಕುಪತ್ರ ನೀಡಲು 3 ತಿಂಗಳೊಳಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಎಸ್.ಎನ್ ಪಾಳ್ಯ, ಅರಳೀಮರದ ಪಾಳ್ಯ ಕಾಲೊನಿ, ಸಂಪಾದನೆ ಮಠ, ಭಾರತಿ ನಗರ 2 ಮತ್ತು ಗುಂಡ್ಲಮ್ಮನ ನಗರ ಕೊಳಚೆ ಪ್ರದೇಶಗಳನ್ನು ಕೊಳೆಗೇರಿಗಳು ಎಂದು ಘೋಷಿಸಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿದೆ. ಅಗತ್ಯ ದಾಖಲೆ ಸಂಗ್ರಹಿಸಿ ಪ್ರಸ್ತಾವ ಸಲ್ಲಿಸಿ ಎಂದು ಕೊಳೆಗೇರಿ ಮಂಡಳಿ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು.

ದಿಬ್ಬೂರಿನ ದೇವರಾಜು ಅರಸು ವಸತಿ ಸಮುಚ್ಚಯದಲ್ಲಿ ಬೆಸ್ಕಾಂನಿಂದ ನೀಡುತ್ತಿರುವ ವಿದ್ಯುತ್ ಬಿಲ್ ದುಬಾರಿಯಾಗಿರುವ ಕುರಿತು ಚರ್ಚೆ ನಡೆಯಿತು.

ವಿದ್ಯುತ್ ವೈರಿಂಗ್ ಸರಿಪಡಿಸಲು ಜಿಲ್ಲಾಧಿಕಾರಿ ಕೊಳೆಗೇರಿ ಮಂಡಳಿತೆ ಸೂಚಿಸಿ, ಅಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಬೆಸ್ಕಾಂ ಎಂಜಿನಿಯರ್‌ಗೆ ಆದೇಶಿಸಿದರು.

ಕೊಳೆಗೇರಿ ಸಮಿತಿ ಪದಾಧಿಕಾರಿಗಳಾದ ದೀಪಿಕಾ, ಅರುಣ್, ಶಂಕರಯ್ಯ, ಹಯತ್, ದೊಡ್ಡರಂಗಯ್ಯ, ಜಾಬೀರ್, ಗೋಪಾಲಯ್ಯ, ಗಂಗಮ್ಮ ,ಚಕ್ರಪಾಣಿ, ಶಾರದಮ್ಮ, ರಂಗನಾಥ್, ಲತಾ, ಕಾಶಿ ಇದ್ದರು.

250 ಕುಟುಂಬಕ್ಕೆ ನಿವೇಶನ ನೀಡಿ

ತುರ್ತಾಗಿ ಅಗತ್ಯವಿರುವ 250 ಕುಟುಂಬಗಳಿಗೆ ತುಮಕೂರು ಕಸಬಾ ಸರ್ವೇ ನಂ 8, 45 ಅಥವಾ 59ರಲ್ಲಿ ಆದ್ಯತೆ ಮೇಲೆ ನಿವೇಶನ ನೀಡಬೇಕು ಎಂದು ಕೊಳೆಗೇರಿ ಸಮಿತಿಯ ಎ.ನರಸಿಂಹಮೂರ್ತಿ ಸಭೆಯಲ್ಲಿ ಒತ್ತಾಯಿಸಿದರು. ತಪ್ಪಿದಲ್ಲಿ ನಿವೇಶನ ರಹಿತರೊಂದಿಗೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು