ತುಮಕೂರು: ವಿಧಾನಸಭೆ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಮುಖ್ಯಮಂತ್ರಿಗೆ ಬರೆದಿರುವ ಬಹಿರಂಗ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿಸಿ, ಸ್ಲಂ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಆಗ್ರಹಿಸಿದರು.
ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸ್ಲಂ ಪ್ರದೇಶಗಳಿಗೆ ‘ಶ್ರಮಿಕ ನಿವಾಸ ಪ್ರದೇಶ’ ಎಂದು ನಾಮಕರಣ ಮಾಡಿ ವಸತಿ ಯೋಜನೆ ಜಾರಿಮಾಡಿ, ಹಕ್ಕುಪತ್ರ ನೀಡಬೇಕು. ಕೊಳೆಗೇರಿಗಳಿಗೆ ಸೌಲಭ್ಯ ಕಲ್ಪಿಸುವುದು ಹಾಗೂ ಅಭಿವೃದ್ಧಿಗೆ ಪ್ರತ್ಯೇಕ ಸಚಿವರು, ಇಲಾಖೆ ರಚಿಸಬೇಕು. ಕುಟುಂಬಕ್ಕೊಂದು ಮನೆ ನೀಡುವ ಭರವಸೆ ಈಡೇರಿಸಬೇಕು. ಬಡವರಿಗಾಗಿ ನಿರ್ಮಿಸುವ ವಸತಿ ಯೋಜನೆಯಲ್ಲಿ ಮನೆ ಹಂಚಿಕೆ ಮಾಡುವ ಸಮಯದಲ್ಲಿ ₹3.50 ಲಕ್ಷ ಸಬ್ಸಿಡಿ ನೀಡುವ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ವಸತಿ ರಹಿತ ಕುಟುಂಬಗಳ ಸಮೀಕ್ಷೆ ಮಾಡಿ ‘ನಗರ ಲ್ಯಾಂಡ್ ಬ್ಯಾಂಕ್’ ಯೋಜನೆ ಜಾರಿಗೊಳಿಸಿ, ಮನೆ ಇಲ್ಲದ ಕುಟುಂಬಕ್ಕೆ ಮನೆ ನೀಡಲು ರಾಜ್ಯದಲ್ಲಿ ವಸತಿ ಹಕ್ಕು ಕಾಯ್ದೆ ಜಾರಿಗೊಳಿಸಬೇಕು. ಬಡವರಿಗೆ ಮನೆಗಳನ್ನು ನಿರ್ಮಿಸಲು ಗುತ್ತಿಗೆ ನೀಡದೆ ಫಲಾನುಭವಿಗಳೇ ಮನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ನೇರವಾಗಿ ಫಲಾನುಭವಿಗೆ ರಾಜ್ಯ ಸರ್ಕಾರದ ₹3.50 ಲಕ್ಷ ಸಬ್ಸಿಡಿ ಮತ್ತು ಕೇಂದ್ರದ 1.50 ಲಕ್ಷ ಸಬ್ಸಿಡಿ ನೀಡಬೇಕು. ಚಿತ್ರದುರ್ಗ ಘೋಷಣೆಯಂತೆ ಮನೆ ಇಲ್ಲದ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಸರ್ಕಾರದಿಂದಲೇ ಉಚಿತವಾಗಿ ಮನೆ ನೀಡುವ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸ್ಲಂ ಜನರಿಗೆ ಸಾಮಾಜಿಕ ನ್ಯಾಯ ಖಾತ್ರಿಯಾಗಬೇಕು; ನಗರ ಉದ್ಯೋಗ ಖಾತ್ರಿ ಜಾರಿ ಮಾಡಬೇಕು; ಸ್ಲಂ ಅಭಿವೃದ್ಧಿ ಕಾಯ್ದೆ–2018ರ ಕರಡು ಜಾರಿಯಾಗಬೇಕು; ವಸತಿ ಹಕ್ಕು ಕಾಯಿದೆ ಜಾರಿಗೊಳಿಸಬೇಕು; ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಪಾಲು ನೀಡಬೇಕು; ಸ್ಲಂ ನಿವಾಸಿಗಳಿಗೆ ಭೂ ಒಡೆತನ ನೀಡಬೇಕು ಎಂದು ಮನವಿ ಮಾಡಿದರು.
ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ‘ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಕೊಳೆಗೇರಿ ಜನರ ಬೇಡಿಕೆಗೂ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.
ಸಮಿತಿ ಮುಖಂಡರಾದ ಶಂಕ್ರಯ್ಯ, ಕಣ್ಣನ್, ಶಾರದಮ್ಮ, ಗುಲ್ನಾಜ್, ಗಂಗಮ್ಮ, ಕೃಷ್ಣಮೂರ್ತಿ, ತಿರುಮಲಯ್ಯ, ಜಾಬೀರ್ ಖಾನ್, ಶಾಬುದ್ದಿನ್, ಲತಾ, ಗೋವಿಂದ್‍ರಾಜ್, ವೆಂಕಟೇಶ್, ಧನಂಜಯ್, ಚಕ್ರಪಾಣಿ, ಮುರುಗನ್, ಮಾಧವನ್, ರಾಜ, ಟಿ.ಆರ್.ಮೋಹನ್, ಮಂಗಳಮ್ಮ, ಸುಧಾ, ಪೂರ್ಣಿಮ, ಮುಭಾರಕ್, ಹನುಮಕ್ಕ, ಲಕ್ಷ್ಮಮ್ಮ, ಮಹಾದೇವಮ್ಮ, ಜಗದೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.