ಸಣ್ಣ ಕೈಗಾರಿಕೆ ತೆರೆಯಲು ಜಾಗ ಹುಡುಕಿ

7
ಗುಬ್ಬಿ: ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎಸ್.ಆರ್.ಶ್ರೀನಿವಾಸ್ ಸೂಚನೆ

ಸಣ್ಣ ಕೈಗಾರಿಕೆ ತೆರೆಯಲು ಜಾಗ ಹುಡುಕಿ

Published:
Updated:
ಗುಬ್ಬಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತ್ರೈಮಾಸಿಕ ಸಭೆಯನ್ನು ಸಚಿವ ಎಸ್.ಆರ್.ಶ್ರೀನಿವಾಸ್ ನಡೆಸಿದರು. ತುರುವೇಕೆರೆ ಶಾಸಕ ಮಸಾಲ ಜಯರಾಮ್ ಇದ್ದರು

ಗುಬ್ಬಿ: ‘ತಾಲ್ಲೂಕಿನ ಪ್ರತಿ ಹೋಬಳಿಯಲ್ಲಿ ಸಣ್ಣ ಕೈಗಾರಿಕೆ ತೆರೆಯಲು ಜಾಗ ಹುಡುಕಿ. ನಮ್ಮ ಇಲಾಖೆಯಲ್ಲಿ ₹ 400 ಕೋಟಿ ಇದೆ. ಇದನ್ನು ಸಮರ್ಪಕವಾಗಿ ಖರ್ಚು ಮಾಡಬೇಕಿದೆ. ತಿಂಗಳೊಳಗೆ ಸೂಕ್ತ ಜಾಗ ಪತ್ತೆ ಮಾಡಿ. ಖಾಸಗಿಯವರಿಂದ ಖರೀದಿಸಿದರೂ ಪರವಾಗಿಲ್ಲ’ ಎಂದು ಸಣ್ಣ ಕೈಗಾರಿಕೆ ಅಧಿಕಾರಿ ಸಿದ್ದೇಶ್ ಅವರಿಗೆ ಸಚಿವ ಎಸ್.ಆರ್.ಶ್ರೀನಿವಾಸ್ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈ ಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

‘ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಇಡೀ ರಾಜ್ಯದಲ್ಲಿಯೇ ಸಮವಸ್ತ್ರ ವಿತರಣೆಯಾಗದಿರುವ ಅಂಶ ಬೆಳಕಿಗೆ ಬಂದಿತು. ತಾಲ್ಲೂಕಿನ ಉರ್ದು ಶಾಲೆಗಳು ಹಾಗೂ ಇತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಹೊರಗುತ್ತಿಗೆ ಮೇಲೆ ಶಿಕ್ಷಕರನ್ನು ನೇಮಿಸಿಕೊಳ್ಳಿ. ಕುಡಿಯುವ ನೀರಿನ ಕೊರತೆ, ತರಗತಿ ಕೊಠಡಿಗಳ ಕೊರತೆ ಹಾಗೂ ರಿಪೇರಿ ಆಗಬೇಕಾದ ಕೊಠಡಿಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿ. ತ್ಯಾಗಟೂರು, ಚೇಳೂರು ಶಾಲೆಗಳು ಸೋರುತ್ತಿರುವ ಬಗ್ಗೆ ಗಮನ ಹರಿಸಿ’ ಎಂದು ಸಚಿವ ಶ್ರೀನಿವಾಸ್ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಯ್ಯ ಅವರಿಗೆ ಸೂಚಿಸಿದರು.

‘ತಾಲ್ಲೂಕಿನಲ್ಲಿ 108 ಶುದ್ದೀಕರಣ ಘಟಕ ಇದ್ದು, ಸೂಕ್ತವಾಗಿ ಕಾರ್ಯನಿರ್ವಹಿಸುತ್ತವೆಯೇ? ಎಂಬ ಬಗ್ಗೆ ಪರಿಶೀಲಿಸಿ. ಎಲ್ಲಿ ನಿರ್ವಹಣೆ ಕಷ್ಟವಾಗುತ್ತಿದೆಯೋ, ಅಂತಹ ಘಟಕಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಿ. ಎಲ್ಲ ಸಮಯದಲ್ಲೂ ನೀರು ಸಿಗುವಂತೆ ನೋಡಿಕೊಳ್ಳಿ’ ಎಂದು ಕುಡಿಯುವ ನೀರು ನೈರ್ಮಲ್ಯ ಅಧಿಕಾರಿ ರಮೇಶ್ ಅವರಿಗೆ ಸೂಚಿಸಿದರು.

‘ಹೊರಗುತ್ತಿಗೆಯ ಮೇಲೆ 11 ಶುಶ್ರೂಷಕಿಯರನ್ನು ತಾಲ್ಲೂಕಿಗೆ ಮಂಜೂರು ಮಾಡಿ ಸಂಬಳ ಬಿಡುಗಡೆ ಮಾಡಿದೆ. ಆದರೆ, ಕೆಲಸ ಮಾಡುತ್ತಿರುವವರು 7 ಮಂದಿ ಮಾತ್ರ. ಉಳಿದ ನಾಲ್ವರ ಸಂಬಳದ ಹಣ ಎಲ್ಲಿ ಹೋಯಿತು? ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಭೆಯ ಗಮನಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎಚ್.ಜಗನ್ನಾಥ್ ತಂದರು.

‘ರೈತರ ಆತ್ಮಹತ್ಯೆ ಪ್ರಕರಣಗಳ ಪೂರ್ಣ ಕಡತ ಸಿದ್ಧಗೊಂಡ ನಂತರ ಸಭೆಗೆ ತನ್ನಿ. ಸಿ.ಎಸ್.ಪುರ ಹೋಬಳಿ ಪಡುಗುಡಿ ರೈತನ ಸಾವಿನ ಕಡತ ಹಿಂದಕ್ಕೆ ಹಾಕಿದ್ದಾರೆ. ಮತ್ತೊಮ್ಮೆ ಕಡತ ಸಿದ್ಧಮಾಡಿ ಸಭೆಗೆ ಮಂಡಿಸಿ’ ಎಂದು ಕೃಷಿ ಅಧಿಕಾರಿಗೆ ಸಚಿವರು ಸೂಚಿಸಿದರು.

ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ‘ಕಲ್ಲೂರು, ಸಿ.ಎಸ್.ಪುರ ಕೇಂದ್ರದಲ್ಲಿ ಸಣ್ಣ ಕೈಗಾರಿಕೆ ತೆರೆಯಲು ಸೂಕ್ತ ಜಾಗ ನೀಡುತ್ತೇವೆ’ ಎಂದು ಸಚಿವರಿಗೆ ಮನವಿ ಮಾಡಿದರು. ‘ನಮ್ಮ ಸ್ವಗ್ರಾಮ ಅಂಕಳಕೊಪ್ಪದಲ್ಲೇ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ಜನರಿಗೆ ಉತ್ತರಿಸುವುದು ಹೇಗೆ’ ಎಂದು ಜಯರಾಮ್‌ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ತಮ್ಮ ಅನುದಾನ ನೀಡಿ 13 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಿದ್ದಾರೆ. ಎರಡು ವರ್ಷದಿಂದ ಬಳಕೆಗೆ ಬಂದಿಲ್ಲ. ಈಗಾಗಲೇ 9 ಪೂರ್ಣಗೊಂಡಿದ್ದು, ಉಳಿದ 4ರಲ್ಲಿ ಕಾಮಗಾರಿ ಪ್ರಾರಂಭವಾಗಿಲ್ಲ. ತುಂಡು ಗುತ್ತಿಗೆ ಅಡಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಶುದ್ಧ ಕುಡಿಯುವ ನೀರಿನ ಘಟಕ ಸಕಾಲಕ್ಕೆ ಪ್ರಾರಂಭವಾಗಿಲ್ಲ ಎಂಬುದು ಸಭೆಯಲ್ಲಿ ಚರ್ಚೆಯಾಯಿತು.

ಸಭೆಯಲ್ಲಿ ತಹಶೀಲ್ದಾರ್‌ ವೆಂಕಟೇಶಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನುಸೂಯಾ, ಉಪಾಧ್ಯಕ್ಷೆ ಕಲ್ಪನಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್.ಗಾಯಿತ್ರಿದೇವಿ ನಾಗರಾಜು, ಕೆ.ಯಶೋಧಮ್ಮ, ಡಾ.ನವ್ಯಬಾಬು, ಭಾರತಿ ಹಿತೇಶ್, ಜಿ.ಎಚ್.ಜಗನ್ನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !