ನಾಗರಿಕರಿಗೆ ತೊಂದರೆ; ನಿರ್ದಾಕ್ಷಿಣ್ಯ ಕ್ರಮ

7
ಸ್ಮಾರ್ಟ್‌ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ನಾಗರಿಕರಿಗೆ ತೊಂದರೆ; ನಿರ್ದಾಕ್ಷಿಣ್ಯ ಕ್ರಮ

Published:
Updated:
Prajavani

ತುಮಕೂರು: ‘ನಗರದಲ್ಲಿ ಯಾವುದೇ ಕಾಮಗಾರಿಗಳು ನಡೆಯುವಾಗ ನಾಗರಿಕರಿಗೆ ತೊಂದರೆಗಳು ಆಗಬಾರದು. ಒಂದು ವೇಳೆ ತೊಂದರೆಗಳಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸ್ಮಾರ್ಟ್‌ಸಿಟಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಶಾಸಕರು ಕೆಲವು ಕಾಮಗಾರಿಗಳ ಬದಲಾವಣೆಗೆ ಸೂಚಿಸಿದ್ದರು. ಇದನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇತೃತ್ವದ ಸಮಿತಿ ಎದುರು ಈಗಾಗಲೇ ಪ್ರಸ್ತಾಪಿಸಲಾಗಿದೆ. ಶನಿವಾರ (ಜ.5) ಸಮಿತಿ ಸಭೆ ಇದೆ. ಈ ಸಭೆಯ ನಡಾವಳಿಗಳನ್ನೂ ಅಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ನಾಗರಿಕರನ್ನು ಸ್ಮಾರ್ಟ್‌ಸಿಟಿ ಯೋಜನೆಯ ಸಹಭಾಗಿಗಳನ್ನಾಗಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ಸಾಮಾಜಿಕ ಜಾತಾಣದಲ್ಲಿ 1.75 ಲಕ್ಷ ಜನರ ಅಭಿಪ್ರಾಯ ಪಡೆಯಲಾಗಿದೆ’ ಎಂದು ಅಧಿಕಾರಿಗಳು ವಿವರಿಸಿದರು.

ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌ ಅವರು, ಗುಬ್ಬಿ ಬೈಪಾಸ್ ರಸ್ತೆಯನ್ನು ಚತುಷ್ಪಥವಾಗಿಸುವ ಕಾಮಗಾರಿಯಲ್ಲಿನ ಲೋಪಗಳು ಮತ್ತು ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತುಮಕೂರು ಸ್ಮಾರ್ಟ್‌ಸಿಟಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಟಿ.ರಂಗಸ್ವಾಮಿ, ‘ಸಿದ್ಧಾರ್ಥ ಕಾಲೇಜು ಹಿಂಭಾಗ ಭೂಸ್ವಾಧೀನ ಆಗಬೇಕು’ ಎಂದರು. ಅಲ್ಲದೆ ರಸ್ತೆ ಬದಿ ಚರಂಡಿ ನಿರ್ಮಾಣದ ಸಾಧಕ ಬಾಧಕಗಳ ಕುರಿತು ಈ ವೇಳೆ ಚರ್ಚೆ ನಡೆಯಿತು.

 ‘3.71 ಕೋಟಿ ವೆಚ್ಚದಲ್ಲಿ ನಗರದ 17 ರಸ್ತೆಗಳನ್ನು ಸ್ಮಾರ್ಟ್‌ ರಸ್ತೆಗಳನ್ನಾಗಿಸಲಾಗುವುದು’ ಎಂದು ಅಧಿಕಾರಿಗಳು ವಿವರಿಸಿದರು. ಆಗ ಕುಂದರನಹಳ್ಳಿ ರಮೇಶ್, ‘ಮೊದಲು ಒಂದು ರಸ್ತೆಯನ್ನು ಪೂರ್ಣಗೊಳಿಸಿ. ಆ ನಂತರ ಉಳಿದವನ್ನು ಸ್ಮಾರ್ಟ್‌ ರಸ್ತೆಗಳನ್ನಾಗಿಸಿ’ ಎಂದರು.

ಸಮನ್ವಯದ ಮಾತು: ನಗರದ ಎಲ್ಲೆಡೆ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆ ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು.

‘ನಗರದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಇಲಾಖೆಗಳಿಂದ ಕೆಲಸಗಳು ನಡೆಯುತ್ತಿವೆ. ಇಲಾಖೆಗಳ ನಡುವೆ ಸಮನ್ವಯ ಅಗತ್ಯವಾಗಿದೆ. ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸಬೇಕು’ ಎಂದು ರಂಗಸ್ವಾಮಿ ಕೋರಿದರು.

ಆಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಗುಬ್ಬಿ ಗೇಟ್‌ ಬಳಿ ನಡೆದ ಕಾಮಗಾರಿಯ ವೇಳೆ ಲೋ‍ಪಗಳಾಗಿವೆ. ಗುತ್ತಿಗೆದಾರರು ಕಾಮಗಾರಿ ಮಾಡುವಾಗ ಒಳಚರಂಡಿ ಇಲ್ಲವೆ ಮ್ಯಾನ್‌ಹೋಲ್‌ಗಳಿಗೆ ಧಕ್ಕೆ ಆದಾಗ ಅದಕ್ಕೆ ಮಣ್ಣು ಮುಚ್ಚುವರು. ನಂತರದ ದಿನಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಾಗರಿಕರಿಗೆ ತೊಂದರೆಗಳು ಆಗದಂತೆ ಎಚ್ಚರವಹಿಸಲು ವಿವಿಧ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.

‘ಕಾಮಗಾರಿಗಳನ್ನು ಮಾಡುವಾಗ ಗುತ್ತಿಗೆದಾರರಿಂದ ಠೇವಣಿ ಪಡೆಯಬೇಕು’ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಅಲ್ಲದೆ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿ ಎಷ್ಟು ಠೇವಣಿ ಪಡೆದಿದ್ದೀರಿ ಎಂದು ಮಾಹಿತಿ ಕೇಳಿದರು.

ನಾಲೆಡ್ಜ್ ಹಬ್: ಡಿಜಿಟಲ್ ಗ್ರಂಥಾಲಯದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ನಗರದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಲ್ಲ  ಮಾಹಿತಿ ಒಂದೇ ಸೂರಿನಡಿ ದೊರೆಯಲು ‘ನಾಲೆಡ್ಜ್ ಹಬ್ಬ’ ರೂಪಿಸುವ ಬಗ್ಗೆಯೂ ಚರ್ಚೆಗಳು ನಡೆದವು.

ಶಾಸಕ ಜ್ಯೋತಿ ಗಣೇಶ್, ‘ಅಮಾನಿಕೆರೆ ಮತ್ತು ಮೈದಾಳ ಕೆರೆ ಸರ್ವೇ ಮಾಡಿಸಿ ಒತ್ತುವರಿಯನ್ನು ಗುರುತಿಸಬೇಕು. ಇವುಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು’ ಎಂದರು. ಅಮಾನಿಕೆರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಯಾವ ಯಾವ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಿದ್ದೀರಿ ಎನ್ನುವುದನ್ನು ತಿಳಿಯಲು ಶನಿವಾರ (ಜ.5) ಸ್ಥಳಕ್ಕೆ ಭೇಟಿ ನೀಡುವೆ’ ಎಂದರು.

ಉದ್ಯಾನಗಳ ಅಭಿವೃದ್ಧಿ, ಸ್ಮಾರ್ಟ್ ಉದ್ಯಾನದ ರೂಪುರೇಷೆ, ಯುಜಿಡಿ, ಪಾರಂಪರಿಕ ಕಟ್ಟಡಗಳ ರಕ್ಷಣೆ...ಹೀಗೆ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಯಾದವು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪ್ರತಿನಿಧಿಗಳು, ಸಲಹಾ ಸಮಿತಿ ಸದಸ್ಯರು ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !