ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಸ್ಮಾರ್ಟ್ ಸಿಟಿ ಅಕ್ರಮ: ತನಿಖೆಗೆ ಆಗ್ರಹ

Published : 25 ಸೆಪ್ಟೆಂಬರ್ 2024, 5:19 IST
Last Updated : 25 ಸೆಪ್ಟೆಂಬರ್ 2024, 5:19 IST
ಫಾಲೋ ಮಾಡಿ
Comments

ತುಮಕೂರು: ನಗರದಲ್ಲಿ ಈಚೆಗೆ ನಡೆದ ಸಿಪಿಐಎಂ ನಗರ ಸಮ್ಮೇಳನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಸ್ಮಾರ್ಟ್ ಸಿಟಿ ಅಕ್ರಮ ತನಿಖೆ ನಡೆಸಬೇಕು, ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಲಾಯಿತು.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ, ‘ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಘೋಷಿಸಿ ಎಂಟು ವರ್ಷಗಳು ಕಳೆದಿದ್ದರೂ ಈವರೆಗೂ ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೊಡಿದ್ದು, ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ವಸತಿಹೀನರಿಗೆ ವಸತಿ ಕಲ್ಪಿಸುತ್ತಿಲ್ಲ. ಕಳೆದ 30 ವರ್ಷಗಳಲ್ಲಿ ನಗರದಲ್ಲಿ 1,200 ಮನೆ ಬಿಟ್ಟರೆ ಒಂದೇ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ. ವರ್ಷಕ್ಕೆ ಸಾವಿರ ಮನೆ ಕೊಟ್ಟಿದ್ದರೂ 20 ವರ್ಷದಲ್ಲಿ 20 ಸಾವಿರ ಮನೆ ನೀಡಬಹುದಿತ್ತು. ರೈತರಿಂದ ಜಮೀನು ಕಿತ್ತುಕೊಂಡು ಕಾರ್ಖಾನೆಗಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಪಾಲಿಕೆಯು ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು, ಅದನ್ನು ವಾಪಸ್ ಪಡೆಯಬೇಕು. ಸ್ಮಾರ್ಟ್ ಸಿಟಿ ಯೋಜನೆಯಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಿಜೆಪಿ ಮಾಜಿ ಸಚಿವರೇ ಹೇಳುತ್ತಿದ್ದಾರೆ. ಈ ಕಾಮಗಾರಿಯಲ್ಲಿ ಕಮಿಷನ್ ದಂಧೆ ನಡೆದಿದೆ ಎಂದು ಆರೋಪಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಸಿಪಿಐಎಂ ನಗರ ಕಾರ್ಯದರ್ಶಿ ಜಿ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಅಶ್ವತ್ಥಯ್ಯ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಪುಟ್ಟೇಗೌಡ, ಗೋವಿಂದರಾಜು, ಖಲೀಲ್, ಶಿವಕುಮಾರಸ್ವಾಮಿ, ನಾಗರಾಜು, ಷಣ್ಮುಖಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT