ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಸ್ಮಾರ್ಟ್‌ಸಿಟಿ ಸಭೆಯಲ್ಲಿ ಶಾಸಕ ಜ್ಯೋತಿ ಗಣೇಶ್ ತಾಕೀತು
Last Updated 11 ನವೆಂಬರ್ 2019, 15:24 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ಸಿಟಿ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಹಾನಗರ ಪಾಲಿಕೆಯಲ್ಲಿ ಸಭಾಂಗಣದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಪ್ರಗತಿಯ ಕುರಿತು ವಿವಿಧ ಇಲಾಖೆಗಳೊಂದಿಗೆ ಸೋಮವಾರ ಏರ್ಪಡಿಸಿದ್ದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆಯು ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಗೊಂಡು 2 ವರ್ಷಗಳಾದರೂ ಇದುವರೆಗೂ ಸಾರ್ವಜನಿಕರಿಗೆ ಹತ್ತಿರವಾಗುವಂತಹ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಊರಿನ ತುಂಬಾ ಹಳ್ಳ-ಗುಂಡಿಗಳನ್ನು ತೆಗೆದು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇರುವುದು ಸ್ಮಾರ್ಟ್‌ಸಿಟಿಯ ಲೋಪವನ್ನು ತೋರಿಸುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದಿನದಿಂದ ದಿನಕ್ಕೆ ತುಮಕೂರು ನಗರದಲ್ಲಿ ವಾಹನಗಳ ಸಂಚಾರದ ದಟ್ಟಣೆಯು ಹೆಚ್ಚಾಗಿದ್ದು, ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋಟೆ ಆಂಜನೇಯ ಸ್ವಾಮಿ ವೃತ್ತದಿಂದ ಶಿರಾಗೇಟ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ತಲುಪುವ ರಸ್ತೆಯಲ್ಲಿ ಹಲವೆಡೆ ಅಪಘಾತ ವಲಯಗಳಿದ್ದು, ಅಮಾಯಕರ ಪ್ರಾಣ ಹಾನಿಯಾಗುತ್ತಿದೆ. ತುಮಕೂರು ಅಮಾನಿಕೆರೆ ಕೋಡಿಯ ಬಳಿ ವಿಸ್ತಾರವಾದ ಸೇತುವೆಯನ್ನು ನಿರ್ಮಿಸಲು ಅವಶ್ಯಕವಾದ ಯೋಜನೆ ರೂಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ತುಮಕೂರು ರಿಂಗ್ ರಸ್ತೆಯು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿದ್ದು, ಸರ್ವೀಸ್ ರಸ್ತೆ ಪ್ರಾರಂಭಿಸುವ ಮುಂಚೆಯೇ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ನಗರದಲ್ಲಿ ಕೇಬಲ್ ಅಳವಡಿಕೆ ಕಾರ್ಯವನ್ನು ಪ್ರಾಯೋಗಿಕವಾಗಿ ಜನರಲ್ ಕಾರ್ಯಪ್ಪ ರಸ್ತೆ, ಎಂ.ಜಿ ರಸ್ತೆ, ಅಶೋಕ ರಸ್ತೆಗಳಲ್ಲಿ ಬೆಸ್ಕಾಂ ಇಲಾಖೆಯೊಂದಿಗೆ ತುರ್ತಾಗಿ ಕಾರ್ಯಗತಗೊಳಿಸುವಂತೆ ತಿಳಿಸಿದರು.

ಸಭೆಯಲ್ಲಿ ಮಹಾಪೌರರಾದ ಲಲಿತಾ ರವೀಶ್, ಉಪಮಹಾಪೌರರಾದ ರೂಪ ಶೆಟ್ಟಳ್ಳಯ್ಯ, ಪ್ರಭಾರ ಆಯುಕ್ತರಾದ ಸಿ.ಎಲ್ ಶಿವಕುಮಾರ್, ಟೂಡಾ ಆಯುಕ್ತ ಯೋಗಾನಂದ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT