ಮಂಗಳವಾರ, ನವೆಂಬರ್ 12, 2019
20 °C
ಪಾಲಿಕೆ ಮುಂದುವರಿದ ಸಭೆ: ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ನಾನಾ ಅರೆಬರೆ ಕಾಮಗಾರಿಗಳು; ಪೂರ್ಣ ಮಾಹಿತಿಗೆ ಸದಸ್ಯರ ಒತ್ತಾಯ

ಸ್ಮಾರ್ಟ್ ಸಿಟಿ; 24ರಂದು ಪಾಲಿಕೆ ವಿಶೇಷ ಸಭೆ

Published:
Updated:
Prajavani

ತುಮಕೂರು: ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿ, ಅಡುಗೆ ಅನಿಲ ಪೈಪ್‌ ಲೈನ್‌ (ಗ್ಯಾಸ್ ಪೈಪ್‌ ಲೈನ್‌) 24X7 ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಸೆ.24ರಂದು ಮಹಾನಗರ ಪಾಲಿಕೆ ವಿಶೇಷ ಸಭೆ ನಡೆಯಲಿದೆ.

ಈ ವಿಷಯಗಳ ಕುರಿತು ಸಮಗ್ರ ಮಾಹಿತಿ ಕೊಡಿಸಬೇಕು ಎಂದು ಸದಸ್ಯರು ಸೋಮವಾರ ನಡೆದ ಪಾಲಿಕೆ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸೆ.24ರಂದು ವಿಶೇಷ ಸಭೆ ನಡೆಸುವುದಾಗಿ ಮೇಯರ್ ಲಲಿತಾ ರವೀಶ್ ಘೋಷಿಸಿದರು.

ಆರಂಭದಲ್ಲಿಯೇ ಸದಸ್ಯರು ಸ್ಮಾರ್ಟ್ ಸಿಟಿ, ಗ್ಯಾಸ್ ಪೈಪ್ ಲೈನ್, 24X7 ಕಾಮಗಾರಿ ಕುರಿತ ವಿಷಯ ಪ್ರಸ್ತಾಪಿಸಿದರು.

ಸದಸ್ಯ ಕುಮಾರ್ ಅವರು ಮಾತನಾಡಿ, ‘ನಗರದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿ ಕಂಡಲ್ಲೆಲ್ಲ ನಡೆಯುತ್ತಿವೆ. ಎಲ್ಲಿ ಏನು ನಡೆಯುತ್ತಿದೆ ಎಂಬುದು ಸದಸ್ಯರಾದ ನಮಗೂ ಗೊತ್ತಾಗುತ್ತಿಲ್ಲ. ಸಾರ್ವಜನಿಕರಿಗೆ ನಾನಾ ರೀತಿಯ ಸಮಸ್ಯೆ ಆಗುತ್ತಿದೆ. ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ಆಯುಕ್ತ ಟಿ.ಭೂಬಾಲನ್ ಅವರು ಕೋರ್ಟ್ ಕೆಲಸ ನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಉಪಯುಕ್ತ ಯೋಗಾನಂದ್ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದರು.

ಇದಕ್ಕೆ ಆಕ್ಷೇಪಿಸಿದ ಹಿರಿಯ ಸದಸ್ಯ ಸೈಯದ್ ನಯಾಜ್, ‘ಆಯುಕ್ತರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸಭೆಯಲ್ಲಿ ಅವರೇ ಇದ್ದು ನಮ್ಮ ಅನುಮಾನ ಹೋಗಲಾಡಿಸಬೇಕು, ಪ್ರಶ್ನೆಗಳಿಗೆ ಉತ್ತರ ನೀಡಬೇಕು. ನೀವು ಉತ್ತರ ನೀಡಬಹುದು. ಜವಾಬ್ದಾರಿ ತೆಗೆದುಕೊಳ್ಳುತ್ತೀರಾ? ಎಂದು ಪ್ರಶ್ನಿಸಿದರು. ಸದಸ್ಯರು ನಯಾಜ್ ಅವರ ಮಾತಿಗೆ ದನಿಗೂಡಿಸಿದರು.

‘ಅಡುಗೆ ಅನಿಲ ಪೈಪ್‌ ಲೈನ್ (ಗ್ಯಾಸ್‌ ಪೈಪ್ ಲೈನ್‌) ಕಾಮಗಾರಿ, 24X7 ಕಾಮಗಾರಿಯಂತೂ ಎಲ್ಲೆಲ್ಲಿ ನಡೆದಿದೆ ಎಂಬುದೇ ಗೊತ್ತಾಗುತ್ತಿಲ್ಲ. ಯಾರು ಕಾಮಗಾರಿ ಮಾಡುತ್ತಿದ್ದಾರೆ. ಯಾವ ಹಂತದಲ್ಲಿದೆ ಏನೂ ಗೊತ್ತಾಗದ ಆಯೋಮಯ ಸ್ಥಿತಿಯಲ್ಲಿದೆ’ ಎಂದರು.

ಈ ಎಲ್ಲದಕ್ಕೂ ನಮಗೆ ಸಂಬಂಧಪಟ್ಟ ಕಂಪನಿ, ಅಧಿಕಾರಿಗಳು, ಆಯುಕ್ತರಿಂದ ಮಾಹಿತಿ ಕೊಡಿಸಬೇಕು ಎಂದು ಒತ್ತಾಯ ಮಾಡಿದರು.

ಈ ಕುರಿತು ಕೆಲ ಹೊತ್ತು ಉಪ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಿದ ಮೇಯರ್ ಸೆ.24ರಂದು ವಿಶೇಷ ಸಭೆ ನಡೆಸುವುದಾಗಿ ಘೋಷಿಸಿ ಮುಂದುವರಿದ ಸಾಮಾನ್ಯ ಸಭೆಯ ಅಂತ್ಯಗೊಳಿಸಿದರು.

ನರಸಿಂಹಮೂರ್ತಿ, ಮಲ್ಲಿಕಾರ್ಜುನಯ್ಯ, ಧರಣೇಂದ್ರಕುಮಾರ್, ಎಂ.ಕೆ.ಮನು, ವಿಷ್ಣುವರ್ಧನ್ ಸೇರಿದಂತೆ ಹಲವು ಸದಸ್ಯರು ಸಭೆಯಲ್ಲಿ ಮಾತನಾಡಿದರು.

ಉಪಮೇಯರ್ ಬಿ.ಎಸ್.ರೂಪಶ್ರೀ ಸಭೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)