ನಾಗರಕಟ್ಟೆ ತೆರವು; ನೋಟಿಸ್‌ಗೆ ಆಕ್ಷೇಪ

7
ಎಲ್ಲ ಧಾರ್ಮಿಕ ಸ್ಥಳಗಳ ಒತ್ತುವರಿ ತೆರವಿಗೆ ಬಿಜೆಪಿ ಹಿರಿಯ ಮುಖಂಡ ಶಿವಣ್ಣ ಆಗ್ರಹ

ನಾಗರಕಟ್ಟೆ ತೆರವು; ನೋಟಿಸ್‌ಗೆ ಆಕ್ಷೇಪ

Published:
Updated:
Deccan Herald

ತುಮಕೂರು: ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206 ಅನ್ನು ಒತ್ತುವರಿ ಮಾಡಿ ನಾಗರಕಟ್ಟೆ (ಟೌನ್‌ಹಾಲ್‌ ಬಳಿ) ಕಟ್ಟಡ ನಿರ್ಮಿಸಲಾಗಿದೆ. ಈ ಒತ್ತುವರಿಯನ್ನು 30 ದಿನಗಳ ಒಳಗೆ ತೆರವುಗೊಳಿಸಬೇಕು ಎಂದು ತುಮಕೂರು ಮಹಾನಗರ ಪಾಲಿಕೆ ನೀಡಿರುವ ನೋಟಿಸ್‌ಗೆ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್ ನಿರ್ದೇಶನದಂತೆ ಅನಧಿಕೃತವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳನ್ನು ಕೂಡಲೇ ತೆರವುಗೊಳಿಸಬೇಕು. ನಾಗರಕಟ್ಟೆಯ ಕಟ್ಟಡವನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿ ದೇವಾಲಯದ ವ್ಯವಸ್ಥಾಪಕರು, ಅಧ್ಯಕ್ಷರು, ಅರ್ಚಕರಿಗೆ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.

‘ಆದರೆ ಇಲ್ಲಿ ಒಬ್ಬರ ಕಣ್ಣಿಗೆ ಸುಣ್ಣ, ಮತ್ತೊಬ್ಬರಿಗೆ ಬೆಣ್ಣೆ ಹಚ್ಚುವ ಕೆಲಸ ಆಗುತ್ತಿದೆ. ಈ ನಾಗರಕಟ್ಟೆ ಸಮೀಪದಲ್ಲಿಯೇ ಮುಸ್ಲಿಮರ ಪ್ರಾರ್ಥನಾ ಮಂದಿರ ಇದೆ. ಇಲ್ಲಿಯೂ ಒತ್ತುವರಿ ಆಗಿದೆ. ಆದರೆ ಏಕಪಕ್ಷೀಯವಾಗಿ ನಮ್ಮ ಸಮಾಜಕ್ಕೆ ಮಾತ್ರ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಇದು ಸಮ್ಮತವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದೂ, ಮುಸ್ಲಿಂ, ಕ್ರೈಸ್ತರು ಯಾರೇ ಆಗಲಿ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಬೇಕು. ಆದರೆ ಕೇವಲ ಹಿಂದೂಗಳ ಪ್ರಾರ್ಥನಾ ಸ್ಥಳಕ್ಕೆ ಮಾತ್ರ ಈ ರೀತಿ ಮಾಡುವುದು ಸರಿಯಲ್ಲ’ ಎಂದರು.

‘ಈ ಸ್ಥಳದಲ್ಲಿ ಕಾಲೇಜುಗಳು, ಸರ್ಕಾರಿ ಆಸ್ಪತ್ರೆ, ಕಬರ್‌ಸ್ಥಾನ ಇದೆ. ಇಲ್ಲಿ ಜನರ ಸಂಚಾರಕ್ಕೂ ಅಡಚಣೆ ಆಗುತ್ತಿದೆ. ಆದ ಕಾರಣ ನಾಗರಕಟ್ಟೆಯ ಒತ್ತುವರಿ ಕಟ್ಟಡವನ್ನು ಹಾಗೂ ದರ್ಗಾ ಪ್ರದೇಶದ ಒತ್ತುವರಿಯನ್ನೂ ತೆರವುಗೊಳಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರು ಸೂಕ್ತವಾಗಿ ಕಾನೂನು ಪಾಲಿಸಬೇಕು’ ಎಂದು ಆಗ್ರಹಿಸಿದರು.

‘ಈ ಹಿಂದೆ ನಾನು ಶಾಸಕನಾಗಿದ್ದಾಗ ಈ ಎರಡೂ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದೆ. ಆಗ ಮಹಾನ್ ರಾಜಕೀಯ ಮುಖಂಡರೊಬ್ಬರು ಇದನ್ನು ತಡೆದರು. ನಗರದ 28 ಕಡೆಗಳಲ್ಲಿ ಒತ್ತುವರಿ ಸ್ಥಳಗಳು ಇವೆ. ಅವುಗಳನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಕೆ.ಪಿ.ಮಹೇಶ್, ನಾಗರಕಟ್ಟೆಯ ಭಕ್ತರಾದ ಮಂಜುಭಾರ್ಗವ್, ಕುಮಾರಸ್ವಾಮಿ, ಗಂಧರ್ವಮ, ನಿಶಾಂತ್ ಗೋಷ್ಠಿಯಲ್ಲಿ ಇದ್ದರು.

**

ಮಾಧುಸ್ವಾಮಿ ಹೊಗಳಿಸಿದ ಶಿವಣ್ಣ

‘ಡೆಡ್‌ಸ್ಟೋರೇಜ್ ಬಿಟ್ಟು ಹೆಚ್ಚು ಪ್ರಮಾಣದ ನೀರು ಹೇಮಾವತಿ ಅಣೆಕಟ್ಟೆಯಲ್ಲಿ ಇದೆ. ಆ ನೀರನ್ನು ಬಿಟ್ಟಿದ್ದರೆ ಜಿಲ್ಲೆಯ ಬರದ ಸ್ಥಿತಿ ಪರಿಹಾರ ಆಗುತ್ತಿತ್ತು. ಅಂತರ್ಜಲ ಉತ್ತಮಗೊಳ್ಳುತ್ತಿತ್ತು. ಬೆಳಗಾವಿ ಅಧಿವೇಶನದಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ, ನೀರಿನ ವಿಚಾರ ಪ್ರಸ್ತಾಪಿಸಿದರು. ನಂತರ ಜಿಲ್ಲೆಗೆ ನೀರು ಹರಿಯಿತು. ಅದೃಷ್ಟವಶಾತ್ ಮಾಧುಸ್ವಾಮಿ ಗೆಲುವು ಕಂಡಿದ್ದಾರೆ. ಅದು ನಮ್ಮ ಪುಣ್ಯ’ ಎಂದು ಶಿವಣ್ಣ, ಮಾಧುಸ್ವಾಮಿ ಅವರನ್ನು ಹೊಗಳಿದರು.

‘ಉಪಮುಖ್ಯಮಂತ್ರಿ ಸೇರಿದಂತೆ ಜಿಲ್ಲೆಯಲ್ಲಿ ಮೂವರು ಸಚಿವರು ಇದ್ದರೂ ನಾಗರಿಕರಿಗೆ ನೀರಿನ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಪಕ್ಷ ರಾಜಕಾರಣವನ್ನು ಬಿಟ್ಟು ಮೊದಲು ನಾಗರಿಕರ ಪರವಾಗಿ ಎಲ್ಲರೂ ಕೆಲಸ ಮಾಡಬೇಕಿದೆ’ ಎಂದು ಆಶಿಸಿದರು.

**

ಈಗಾಗಲೇ ಎಂಟು ಕಡೆ ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿದೆ. ನಾಗರಕಟ್ಟೆ ತೆರವು ಸೂಕ್ಷ್ಮ ವಿಚಾರವಾಗಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆ ಕ್ರಮವನ್ನು ಜಿಲ್ಲಾಡಳಿತ ನಿರ್ವಹಿಸಲಿದೆ.
- ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !