ಸೋಮವಾರ, ಸೆಪ್ಟೆಂಬರ್ 27, 2021
21 °C

ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮುಂದಿನ ಆರು ತಿಂಗಳ ಒಳಗಾಗಿ ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗ್ರಾ.ಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ, ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಗ್ರಾ.ಪಂ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ
ಮಾತನಾಡಿದರು.‌

ಗ್ರಾಮಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಬೇಕು. ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕಟ್ಟಡ ಗುರುತಿಸಬೇಕು ಎಂದು ನಿರ್ದೇಶನ ನೀಡಿದರು.

ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡಗಳ ದುರಸ್ತಿಯಲ್ಲದೆ ಶಾಲಾ ಕಟ್ಟಡ ದುರಸ್ತಿಗೂ ಅವಕಾಶ ಮಾಡಿಕೊಡಲಾಗುವುದು. ನರೇಗಾದಲ್ಲಿ ಕೇಂದ್ರದಿಂದ 13 ಕೋಟಿ ಮಾನವ ದಿನಗಳನ್ನು ಸೃಜಿಸಲು ಗುರಿ ನೀಡಲಾಗಿತ್ತು. ಕಳೆದ ನವೆಂಬರ್‌ನಲ್ಲೇ ಗುರಿಮೀರಿ ಸಾಧನೆ ಮಾಡುವ ಮೂಲಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಕಲ್ಯಾಣಿ, ಗೋಕಟ್ಟೆ, ಕೊಳವೆ ಬಾವಿಗೆ ಮರುಪೂರಣ ಗುಂಡಿ, ಕೃಷಿ ಹೊಂಡ, ಕೆರೆಗಳ ಹೂಳೆತ್ತುವುದು ಸೇರಿದಂತೆ ಅನೇಕ ಕಾಮಗಾರಿ ಕೈಗೊಳ್ಳಬಹುದಾಗಿದೆ ಎಂದರು.

ಕೆರೆ, ಕಟ್ಟೆ, ಕಲ್ಯಾಣಿಗಳು ಒತ್ತುವರಿಯಾಗದಂತೆ ಕ್ರಮ ವಹಿಸಬೇಕು. ಗ್ರಾಮದ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಗ್ರಾ.ಪಂ.ಗಳಲ್ಲಿ ಪ್ರತಿವರ್ಷ ಹೊಸ ಯೋಜನೆಗಳನ್ನು ರೂಪಿಸಿ ಜನಪರ ಕೆಲಸಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಪ್ರಮೋದ್ ಹೆಗಡೆ, ‘ಚರಂಡಿ, ರಸ್ತೆ ನಿರ್ಮಾಣ ಮಾಡುವುದು ಅಭಿವೃದ್ಧಿಯಲ್ಲ. ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ದೊರೆಯುವಂತಾಗಬೇಕು. ಪ್ರತಿ ವರ್ಷವೂ ಒಂದೊಂದು ಹೊಸ ಯೋಜನೆ ರೂಪಿಸಬೇಕು’ ಎಂದು ಹೇಳಿದರು.

ಉಡುಪಿ ಜಿ.ಪಂ ಯೋಜನಾಧಿಕಾರಿ ಶ್ರೀನಿವಾಸರಾವ್, ‘ತ್ಯಾಜ್ಯ ನಿರ್ವಹಣೆ ಮಾಡುವುದು ಜಟಿಲ ಸಮಸ್ಯೆಯಾಗಿದೆ. ನೀರಿನ ಬಾಟಲಿ ಉಪಯೋಗಿಸುವುದು, ಹೊರಗಿನ ಆಹಾರ, ತಿನಿಸುಗಳಿಂದಲೂ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ನಗರ ಪ್ರದೇಶಗಳಂತೆ ಹಳ್ಳಿಗಳಲ್ಲಿಯೂ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆಯಾಗಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕುವುದು, ಸುಡುವುದರಿಂದ ಪರಿಸರ ನಾಶವಾಗಿ ಭೂಮಿ ಫಲವತ್ತತೆ ಕಳೆದುಕೊಂಡು ಅಂತರ್ಜಲ ಕುಸಿಯುತ್ತದೆ’ ಎಂದು ಎಚ್ಚರಿಸಿದರು.

ಪರಿಸರವಾದಿ ಶಿವಾನಂದ ಕಳವೆ, ‘ಗ್ರಾ.ಪಂ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತಿಸುವ ಮೂಲಕ ಪುನಶ್ಚೇತನಗೊಳಿಸಬೇಕು. ಕೆರೆಗಳನ್ನು ಹಾಳು ಮಾಡಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆ ಯಶಸ್ವಿಯಾಗಬೇಕಾದರೆ ಕೆರೆಗಳ ಪುನಶ್ಚೇತನ ಅಗತ್ಯ’ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕ ಯಾಲಕ್ಕಿಗೌಡ, ‘ಗ್ರಾಮ ಪಂಚಾಯಿತಿಗಳು ತಮ್ಮಲ್ಲಿರುವ ಸಂಪನ್ಮೂಲದಿಂದಲೇ ಕಡಿಮೆ ವೆಚ್ಚದಲ್ಲಿ ಗ್ರಾಮಗಳ ಅಭಿವೃದ್ಧಿಪಡಿಸಬೇಕು’ ಎಂದು ಸಲಹೆ
ಮಾಡಿದರು.

ಮಧುಗಿರಿ ದೊಡ್ಡಮಾಲೂರು ಗ್ರಾ.ಪಂ ಅಧ್ಯಕ್ಷ ಪಂಚಾಕ್ಷರಿ, ಶಿರಾ ತಾಲ್ಲೂಕು ಬೇವಿನಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್ ಅನುಭವ ಹಂಚಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು