ಮಂಗಳವಾರ, ಸೆಪ್ಟೆಂಬರ್ 28, 2021
22 °C

ರೈತರ ಮಕ್ಕಳಿಗೆ ವಿಶೇಷ ಅಂಕ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೋವಿಡ್ ಸಮಯದಲ್ಲಿ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿರುವ ರೈತರು, ಬಡವರು, ಪರಿಶಿಷ್ಟರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸುವಾಗ ‘ವಿಶೇಷ ಪ್ರೋತ್ಸಾಹ ಅಂಕ’ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಕೋವಿಡ್‍ ಸಮಯದಲ್ಲಿ (2019-20 ಹಾಗೂ 2020-21) ಆನ್‌ಲೈನ್‌ನಲ್ಲಿ ಪಾಠ ಮಾಡಲಾಗಿದ್ದು, ಗ್ರಾಮೀಣ ಪ್ರದೇಶಗಳ ಮಕ್ಕಳು ಹಲವು ಸಮಸ್ಯೆಗಳಿಂದ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶೇ 20ರಷ್ಟು ಮಕ್ಕಳಿಗೂ ಅನ್‍ಲೈನ್ ಶಿಕ್ಷಣ ಸಮರ್ಪಕವಾಗಿ ದೊರೆತಿಲ್ಲ. 10ನೇ ತರಗತಿ ಫಲಿತಾಂಶ ನೀಡುವಾಗ ಹಿಂದಿನ ಎರಡು ವರ್ಷಗಳ ಸರಾಸರಿ ಅಂಕಗಳ ಜತೆಗೆ, ಪ್ರೋತ್ಸಾಹ ಅಂಕ ನೀಡಬೇಕು ಎಂದು ಒತ್ತಾಯಿಸಿದರು.

ಕೊರೊನಾ ಸೋಂಕಿನಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದನ್ನು ಗಮನಿಸಿದ ಹಲವು ರಾಜ್ಯಗಳು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿದ್ದರೆ, ರಾಜ್ಯದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತ್ರ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದರು. ಭೌತಿಕವಾಗಿ ಪಾಠ, ಪ್ರವಚನಗಳು ನಡೆಯದೆ ಆನ್‍ಲೈನ್ ಕಲಿಕೆಯನ್ನೇ ಮುಂದಿಟ್ಟುಕೊಂಡು ಪರೀಕ್ಷೆ ನಡೆಸಿದ್ದಾರೆ. ಅಗತ್ಯವಿರುವ ಮೊಬೈಲ್, ಲ್ಯಾಪ್‍ಟಾಪ್ ಇನ್ನಿತರ ಪರಿಕರಗಳನ್ನು ಹೊಂದುವ ಶಕ್ತಿ ಇಲ್ಲದ ಪರಿಶಿಷ್ಟರು, ಬಡವರು, ರೈತರ ಮಕ್ಕಳ ಕಲಿಕೆಗೂ, ಎಲ್ಲಾ ಸೌಲಭ್ಯದೊಂದಿಗೆ ಪರೀಕ್ಷೆ ಎದುರಿಸಿದ ಮಕ್ಕಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಈ ಫಲಿತಾಂಶ ಮುಂದಿನ ಶಿಕ್ಷಣ, ಉದ್ಯೋಗದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದ್ದು, ಗ್ರಾಮೀಣ ಮಕ್ಕಳಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಎಂಟು ತಿಂಗಳಿನಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಈವರೆಗೆ ಪ್ರತಿಭಟನಾನಿರತ 534 ರೈತರು ಸಾವನ್ನಪ್ಪಿದ್ದಾರೆ. ಕನಿಷ್ಠ ಸೌಜನ್ಯಕ್ಕೂ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿಲ್ಲ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ‘ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟರು, ಮಹಿಳೆಯರು, ಅಸಹಾಯಕರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಕೆರೆಗಳ ಹೂಳೆತ್ತಿಸಿ, ನೀರು ತುಂಬಿಸುವ ಕಾರ್ಯ ನೆನೆಗುದಿಗೆ ಬಿದ್ದಿವೆ. ನೀರಾವರಿ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿವೆ’ ಎಂದು ದೂರಿದರು.

ಪ್ರಾಂತ ರೈತ ಸಂಘದ ಅಜ್ಜಪ್ಪ, ರೈತ ಸಂಘ ಮತ್ತು ಹಸಿರು ಸೇನೆ ಯುವಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ಮುಖಂಡರಾದ ಕಂದೂರು ತಿಮ್ಮಯ್ಯ, ರವೀಶ್, ಶಂಕರಪ್ಪ, ಗುಬ್ಬಿ ಲೋಕೇಶ್, ಕಾಳೇಗೌಡ, ವೆಂಕಟೇಗೌಡ, ಪಾವಗಡದ ಪೂಜಾರಪ್ಪ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.