ಗುರುವಾರ , ನವೆಂಬರ್ 21, 2019
20 °C

ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಕ್ರೀಡೆ ಅವಶ್ಯ

Published:
Updated:
Prajavani

ತುಮಕೂರು: ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಕ್ರೀಡೆಗಳು ಅವಶ್ಯ. ಮೊಬೈಲ್, ಟಿ.ವಿ ಗೀಳಿನಿಂದ ಯುವಕರು ಹೊರಬರಬೇಕು. ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾರನಾಯಕನಪಾಳ್ಯದಲ್ಲಿ ಭಾನುವಾರ ಲಗಾನ್ ಯುವಕರ ಸಂಘವು ಆಯೋಜಿಸಿದ್ಧ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಯುವ ಸಮುದಾಯವೇ ದೇಶದ ಆಸ್ತಿ. ಈ ಸಮುದಾಯ ಆರೋಗ್ಯವಾಗಿದ್ದರೆ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಸ್ವಾಮಿ ವಿವೇಕಾನಂದರು ಹೇಳಿದಂತೆ ದೇಶಕ್ಕೆ ಬೇಕಿರುವುದು ಉಕ್ಕಿನ ದೇಹವನ್ನು ಹೊಂದಿರುವ ಯುವಕರು. ಅಂತಹ ಯುವಕರಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ನುಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಮುರಳೀಧರ ಹಾಲಪ್ಪ, ‘ಇಂದಿನ ಯುವ ಸಮುದಾಯ ಸಮೂಹ ಮಾಧ್ಯಮಗಳ ಸನ್ನಿಯಲ್ಲಿ ಬದುಕುತ್ತಿದೆ’ ಎಂದರು.

’ಯುವಕರ ಸಂಘಗಳು ಇತ್ತೀಚೆಗೆ ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಯುವ ಸಮುದಾಯದಲ್ಲಿ ಕ್ರೀಡಾ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿವೆ. ಇಂತಹ ಚಟುವಟಿಕೆಗಳು ರಾಜ್ಯದ ಎಲ್ಲ ಕಡೆಗೂ ನಡೆಯಬೇಕು. ಕ್ರೀಡಾಚಟುವಟಿಕೆಗೆ ಉತ್ತೇಜನ ನೀಡುವ ಸಂಸ್ಥೆಗಳು ಹೆಚ್ಚಾಗಬೇಕು’ ಎಂದು  ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಮುಷ್ತಾಕ್ ಅಹಮ್ಮದ್, ಬಾಳಾರಾಧ್ಯ, ಗಣೇಶ್, ರಘು ಇದ್ದರು.

 

 

ಪ್ರತಿಕ್ರಿಯಿಸಿ (+)