ಶನಿವಾರ, ಜೂನ್ 6, 2020
27 °C
ಮೋಹಕ ಬಲೆ ಅಳವಡಿಸುವ ಕುರಿತು ಪ್ರಾತ್ಯಕ್ಷಿಕೆ

ಕೋಲಾರ: ಮಾವು ರಕ್ಷಣೆಗೆ ಹಣ್ಣು ನೊಣ ನಿಯಂತ್ರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ರೈತರು ಮಾವಿನ ಫಸಲು ರಕ್ಷಣೆಗೆ ಹಣ್ಣಿನ ನೊಣ ನಿಯಂತ್ರಣ ಮಾಡಬೇಕು ಎಂದು ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿ ಗುರುವಾರ ಮಾವಿನ ಫಸಲು ರಕ್ಷಣೆಗೆ ಮೋಹಕ ಬಲೆ ಅಳವಡಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಹಣ್ಣು ನೊಣ ಬಾಧೆಯಿಂದ ಶೇ 25 ರಷ್ಟು ಮಾವಿನ ಫಸಲು ಹಾಳಾಗುತ್ತದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತದೆ. ಸಂಭವನೀಯ ನಷ್ಟ ತಪ್ಪಿಸಲು ರೈತರು ಸಾಮೂಹಿಕವಾಗಿ ಸಮಗ್ರ ಹತೋಟಿ ಕ್ರಮ ಕೈಗೊಳ್ಳಬೇಕು ಎಂದರು.

ಮಾವಿನ ತೋಟಗಳಲ್ಲಿ ಹಣ್ಣು ನೊಣದ ಬಾಧೆಯಿಂದ ಹಾನಿಗೊಂಡು ಕೆಳಗೆ ಬಿದ್ದ ಹಣ್ಣನ್ನು ಸಂಗ್ರಹಿಸಿ ಆಳವಾದ ಹುಣಿಯಲ್ಲಿ ಹಾಕಿ ಮಣ್ಣು ಮುಚ್ಚಬೇಕು. ತೋಟದಲ್ಲಿ ನೈರ್ಮಲ್ಯ ಪಾಲನೆ ಮಾಡುವುದರಿಂದ ನೊಣಬಾಧೆ ಕಡಿಮೆಯಾಗುತ್ತದೆ. ತೋಟಗಳಲ್ಲಿ ಮೋಹಕ ಬಲೆ ಅಳವಡಿಸುವುದರ ಮೂಲಕ ನೊಣಗಳನ್ನು ಕೊಲ್ಲಬಹುದಾಗಿದೆ ಎಂದು ತಿಳಿಸಿದರು.

ಮಿಥೈಲ್ ಯೂಜಿನಾಲ್‌ ಮೋಹಕ ಬಲೆಗಳನ್ನು ಒಂದು ಎಕರೆಗೆ ಕನಿಷ್ಠ 8 ಕಡೆ ಅಳವಡಿಸಬೇಕು. ಅಳವಡಿಸುವ ಮುನ್ನ ಲಿಂಗಾಕರ್ಷಕ ಮೋಹಕವನ್ನು ಹೊಂದಿರುವ ಮರದ ತುಂಡಿಗೆ 5 ರಿಂದ 6 ಹನಿ ಮೆಲಾಥಿಯಾನ್‌ ಅಥವಾ ಡೈಕ್ಲೋರೋವಾಸ್‌ನಿಂದ ನೆನೆಸಬೇಕು. ಮೋಹಕ ಬಲೆಯನ್ನು ನೆಲದಿಂದ 4 ರಿಂದ 5 ಅಡಿ ಎತ್ತರದಲ್ಲಿನ ಮರದ ಕೊಂಬೆಗೆ ಕಟ್ಟಬೇಕು. ಮೋಹಕ ಔಷಧ ಹೊಂದಿರುವ ಮರದ ತುಂಡುಗಳನ್ನು 20 ರಿಂದ 25 ದಿನಗಳಿಗೊಮ್ಮೆ ಬದಲಿಸಬೇಕು ಎಂದು ಅವರು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು, ಮಾವು ಅಭಿವೃದ್ಧಿ ನಿಗಮ ಅಥವಾ ಹೊಗಳಗೆರೆಯ ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಮನವಿ ಮಾಡಿದರು.

*

ರಿಯಾಯಿತಿ ದರದಲ್ಲಿ ಲಭ್ಯ

ಡೆಲ್ಟಾ ಮಿಥ್ರಿನ್‌ ಮತ್ತು ಬೆಲ್ಲವನ್ನು ಅಗತ್ಯ ಪ್ರಮಾಣದಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ಗಂಡು ಹಾಗೂ ಹೆಣ್ಣು ನೊಣಗಳು ಸಾಯುತ್ತವೆ. ಮಾವು ಅಭಿವೃದ್ಧಿ ನಿಗಮದಿಂದ ರೈತರಿಗೆ ಮೋಹಕ ಬಲೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ರೈತರು ಈ ಸಲದ ಪಹಣಿ ಹಾಗೂ ಆಧಾರ್‌ ಕಾರ್ಡ್‌ ಜೆರಾಕ್ಸ್‌ಹೊಂದಿಗೆ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು