ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿಗೆ ಆಲಮಟ್ಟಿಯಿಂದ ನೀರು: ಮತದಾರರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಆಶ್ವಾಸನೆ

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಬಾದಾಮಿ (ಬಾಗಲಕೋಟೆ): ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಅವರನ್ನು ಗೆಲ್ಲಿಸಿಕೊಟ್ಟರೆ, ಆಲಮಟ್ಟಿ ಜಲಾಶಯದಿಂದ ಬಾದಾಮಿಗೆ ನೀರು ಹರಿಸಿ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಸೋಮವಾರ ಇಲ್ಲಿ ಭರವಸೆ ನೀಡಿದರು.

ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಾದಾಮಿಯಲ್ಲಿ ಸಿದ್ದರಾಮಯ್ಯ– ಶ್ರೀರಾಮುಲು ನಡುವೆ ಸ್ಪರ್ಧೆ ಇರುವಂತೆ ಕಂಡರೂ ನಿಜವಾದ ಸ್ಪರ್ಧೆ ಇರುವುದು ಸಿದ್ದರಾಮಯ್ಯ– ಮಾವಿನಮರದ ನಡುವೆ. ಹೀಗಾಗಿ, ಸಿದ್ದರಾಮಯ್ಯ ವಿರುದ್ಧ ಈ ಹುಡುಗ ಹನುಮಂತನನ್ನ ಗೆಲ್ಲಿಸಿ ಕೊಡಿ’ ಎಂದು ಕೇಳಿಕೊಂಡರು.

‘ಹಾವನೂರ ವರದಿ ಆಧರಿಸಿ ವಾಲ್ಮೀಕಿ (ನಾಯಕ) ಹಾಗೂ ಉಪ್ಪಾರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ್ದೇನೆ. 2023ರ ಚುನಾವಣೆ ನೋಡುತ್ತೇನೋ, ಇಲ್ಲವೋ ಗೊತ್ತಿಲ್ಲ. ಈ ಬಾರಿ ಬಾದಾಮಿಯ ವಾಲ್ಮೀಕಿ ಸಮುದಾಯದವರು ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಿ ಉಪಕಾರ ತೀರಿಸಿ’ ಎಂದು ಅವರು ಮನವಿ ಮಾಡಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಕೃಷ್ಣಾ ಕಣಿವೆಯಲ್ಲಿ ರಾಜ್ಯದ ಪಾಲಿನ 173 ಟಿಎಂಸಿ ಅಡಿ ನೀರು ಹಿಡಿದಿಡದೇ ಹೋಗಿದ್ದರೆ ಅದು ಆಂಧ್ರ ಪ್ರದೇಶದ ಪಾಲಾಗುತ್ತಿತ್ತು. ಉತ್ತರ ಕರ್ನಾಟಕಕ್ಕೆ ದೇವೇಗೌಡರು ಏನು ಮಾಡಿದ್ದಾರೆ ಎಂದು ಕೇಳುವವರಿದ್ದಾರೆ; ಅವರಿಗೆ ಇದೇ ಉತ್ತರ’ ಎಂದರು.

ಯಾರೂ ತಪ್ಪಿಸಲಾಗದು: ‘ಇಲ್ಲಿ ಬನಶಂಕರಿ ತಾಯಿಗೆ ಪೂಜೆ ಮಾಡಿಸಿದ್ದೇನೆ. ಆಕೆಯ ಅನುಗ್ರಹದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ಯಾರೂ ತಪ್ಪಿಸಲಾಗದು. ನಾಡಿನ ಎಲ್ಲ ತಾಯಂದಿರ ಆಶೀರ್ವಾದ ನಮ್ಮ ಪಕ್ಷದ ಮೇಲಿದೆ’ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭಕ್ಕೂ ಮುನ್ನ ಸಮೀಪದ ಶಿವಯೋಗ ಮಂದಿರಕ್ಕೆ ಭೇಟಿ ನೀಡಿದ ದೇವೇಗೌಡರು, ಹಾನಗಲ್ ಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಅಲ್ಲಿಯೇ ಉಪಾಹಾರ ಸೇವಿಸಿದರು.

‘ನಾನು ಮಾಜಿ ಪ್ರಧಾನಿ; ಹಾಗೆ ಮಾತಾಡೋಲ್ಲ’

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾರಂಭವೊಂದರಲ್ಲಿ ನನಗೆ ಏಕವಚನದಲ್ಲಿ ಮಾತನಾಡಿದ್ದಾರಂತೆ; ಇರಲಿ, ನಾನು ಮಾಜಿ ಪ್ರಧಾನಿ. ಆ ರೀತಿ ಮಾತನಾಡಲು ಸಿದ್ಧನಿಲ್ಲ’ ಎಂದು ದೇವೇಗೌಡ ಹೇಳಿದರು.

‘ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿ ಮಂತ್ರಿ ಆಗಿದ್ದರು. ಅವರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಉತ್ತಮ ಸಂಸ್ಕೃತಿ ಹಿನ್ನೆಲೆಯಲ್ಲಿ, ಸಭ್ಯವಾಗಿಯೇ ಮಾತಾಡುವೆ’ ಎಂದರು.

‘ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಸ್ವಲ್ಪ ಭಯ ಇರಬೇಕು. ಸತ್ಯ ಮಾತಾಡಬೇಕು. ಚುನಾವಣೆಯಲ್ಲಿ ಸೋಲು–ಗೆಲುವು ಸಾಮಾನ್ಯ. ಆದರೆ ಯಾವುದೇ ವ್ಯಕ್ತಿಯನ್ನು ಲಘುವಾಗಿ ಟೀಕಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT