ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ | ಗೈರು ಹಾಜರಿಗೆ ಅವಕಾಶ ಬೇಡ: ಮಾಧುಸ್ವಾಮಿ ಸೂಚನೆ

ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೆ.ಸಿ.ಮಾಧುಸ್ವಾಮಿ ಸೂಚನೆ
Last Updated 19 ಜೂನ್ 2020, 15:09 IST
ಅಕ್ಷರ ಗಾತ್ರ

ತುಮಕೂರು: ಜೂನ್ 25ರಿಂದ ಜುಲೈ 2ರ ವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗಬಾರದು. ಈ ಬಗ್ಗೆ ಎಚ್ಚರವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ‘ಮಕ್ಕಳು ಭಯಪಡದೆ ಪರೀಕ್ಷೆ ಬರೆಯುವಂತೆ ಆಗಬೇಕು. ವಿದ್ಯಾರ್ಥಿಗಳು ಮನೆಯಿಂದಲೇ ಬಿಸಿ ನೀರು ತರುವಂತೆ ತಿಳಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು’ ಎಂದರು.

ಪರೀಕ್ಷಾ ಕೇಂದ್ರದಿಂದ ದೂರವಿರುವ ಮಕ್ಕಳ ಮಾಹಿತಿ ಪಡೆದು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ಮಕ್ಕಳು ಬಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಪ್ರಯಾಣಕ್ಕೆ ತೊಂದರೆಯಾಗಿ ಗೈರು ಹಾಜರಾಗುವ ಮಕ್ಕಳನ್ನು ಸರ್ಕಾರಿ ವಾಹನಗಳ ಮೂಲಕ ಕರೆತರಬೇಕು ಎಂದು ಡಿಡಿಪಿಐಗಳಿಗೆ ಸೂಚಿಸಿದರು.

ಕಂಟೈನ್ಮೆಂಟ್ ವಲಯದಿಂದ ಪರೀಕ್ಷೆಗೆ ಬರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗುವುದು. ಜ್ವರ ಬಂದಿರುವ ಮಕ್ಕಳಿಗೆ ಮುಂಜಾಗ್ರತೆವಹಿಸಿ ಪರೀಕ್ಷೆ ಬರೆಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ‘ಆರೋಗ್ಯ ಸಿಬ್ಬಂದಿ ಜವಾಬ್ದಾರಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಪರೀಕ್ಷಾ ಸಿದ್ಧತೆಯ ಬಗ್ಗೆ ತುಮಕೂರು ಡಿಡಿಪಿಐ ಕಾಮಾಕ್ಷಿ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ರೇವಣಸಿದ್ಧಪ್ಪ ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಗಳಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಸೋಂಕು ಇರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯ ಸೂಚನೆಯಂತೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ಕ್ವಾರಂಟೈನ್; ಪರೀಕ್ಷಾ ಕೇಂದ್ರ
ಶಿರಾ ತಾಲ್ಲೂಕಿನಲ್ಲಿ ಕ್ವಾರಂಟೈನ್ ಮಾಡಲು ಬಳಕೆಯಾಗಿದ್ದ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವನ್ನಾಗಿಸಲಾಗಿದೆ. ಪೂರ್ಣವಾಗಿ ಔಷಧಿ ಸಿಂಪಡಿಸಿ ಹಾಗೂ ಸ್ಯಾನಿಟೈಸ್ ಮಾಡಿದ ನಂತರವೇ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಆದರೆ ಸಚಿವರು, ಇಲ್ಲಿ ಪರೀಕ್ಷೆ ನಡೆಸುವುದು ಬೇಡ ಬೇರೆ ಕಡೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. ಆಗ ಅಧಿಕಾರಿಗಳು ಮೌನವಾದರು.

ಕ್ವಾರಂಟೈನ್‌ಗೆ ಬಳಕೆಯಾಗಿದ್ದ ಕಟ್ಟಡವನ್ನು ಪರೀಕ್ಷಾ ಕೇಂದ್ರಕ್ಕೆ ಬಳಸಿದರೆ ಪೋಷಕರಲ್ಲಿ ಭಯ ಮೂಡುವುದಿಲ್ಲ? ಅಲ್ಲದೆ ಈಗಾಗಲೇ ಪರೀಕ್ಷಾ ಮಂಡಳಿಯಿಂದ ಪರೀಕ್ಷಾ ಕೇಂದ್ರಕ್ಕೆ ಕೋಡ್ ನೀಡಲಾಗಿದೆ. ಇಂತಹ ಸಮಯದಲ್ಲಿ ಕೇಂದ್ರ ಬದಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT