ಗುರುವಾರ , ಜುಲೈ 29, 2021
26 °C
ಪ್ರಜಾವಾಣಿ ‘ಫೋನ್‌ – ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮಾಹಿತಿ

ಕೊರೊನಾ ರ‍್ಯಾಪಿಡ್‌ ಟೆಸ್ಟ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಟಿ.ಎ.ವೀರಭದ್ರಯ್ಯ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ವ್ಯಾಪಿಸುತ್ತಿದ್ದು ‘ಪಲ್ಸ್‌ ಆಕ್ಸಿ ಮೀಟರ್‌’ ಮೂಲಕ ರ‍್ಯಾಪಿಡ್‌ ಟೆಸ್ಟ್‌ ಮಾಡಲಾಗುವುದು. ಇದು ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಅಳೆಯುತ್ತದೆ. ಕೇವಲ 20 ನಿಮಿಷಗಳಲ್ಲಿ ವರದಿ ಬರುತ್ತದೆ.

ಗುರುವಾರ ‘ಪ್ರಜಾವಾಣಿ’ ಕಚೇರಿಯಲ್ಲಿ ನಡೆದ ‘ಫೋನ್‌– ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಈ ಮಾಹಿತಿ ನೀಡಿದರು.

ವ್ಯಕ್ತಿಯ ರಕ್ತದಲ್ಲಿ ಶೇ 94ಕ್ಕಿಂತ ಕಡಿಮೆ ಆಮ್ಲಜನಕ ಪ್ರಮಾಣ ಕಂಡುಬಂದರೆ ಅಂತಹವರನ್ನು ಕೋವಿಡ್‌– 19 ಪರೀಕ್ಷೆಗೆ ಒಳಪಡಿಸಲಾಗುವುದು. ಹೆಚ್ಚಾಗಿ ವೃದ್ಧರು, ಮಕ್ಕಳನ್ನು ಪರೀಕ್ಷಿಸಲಾಗುವುದು. ಜಿಲ್ಲೆಗೆ ಈಗಾಗಲೇ 2 ಸಾವಿರ ಪಲ್ಸ್‌ ಆಕ್ಸಿ ಮೀಟರ್‌ ಕಿಟ್‌ಗಳು ಬಂದಿವೆ. ಪರೀಕ್ಷೆ ಹೇಗೆ ನಡೆಸಬೇಕು ಎಂಬ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ. ರ‍್ಯಾಪಿಡ್‌ ಟೆಸ್ಟ್‌ಗೆ ಒಳಪಟ್ಟವರಲ್ಲಿ ಶೇ 94ಕ್ಕಿಂತ ಕಡಿಮೆ ಆಮ್ಲಜನಕ ಪ್ರಮಾಣ ಕಂಡು ಬಂದರೆ ಅವರ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಎರಡೂ ವರದಿಗಳನ್ನು ತುಲನೆ ಮಾಡಲಾಗುವುದು ಎಂದು ವಿವರಿಸಿದರು.

ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ನಡೆಸಿದ ‘ಫೋನ್‌– ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನಾಗರಿಕರು ಕರೆ ಮಾಡಿ ತಮ್ಮ ಸಮಸ್ಯೆ, ಅನುಮಾನಗಳಿಗೆ ಪರಿಹಾರ ಕಂಡುಕೊಂಡರು. ಆಯ್ದ ಪ್ರಶ್ನೆ ಮತ್ತು ಉತ್ತರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

- ಗಂಗಾಧರ್, ಕೊಡಿಗೇನಹಳ್ಳಿ

ಆಯುಷ್ಮಾನ್‌ ಭಾರತ್ ಕಾರ್ಡ್‌ ಖಾಸಗಿ ಆಸ್ಪತ್ರೆಯಲ್ಲೂ ಅನುಕೂಲವಾಗುವುದೆ?

ಖಂಡಿತ ಅನುಕೂಲವಾಗಲಿದೆ. ಆದರೆ, ಮೊದಲು ರೋಗಿ ಸರ್ಕಾರಿ ಆಸ್ಪತ್ರೆಗೆ ಬರಬೇಕು. ಇಲ್ಲಿ ಕೋವಿಡ್–19ಗೆ ಚಿಕಿತ್ಸೆ ಸಾಧ್ಯವಾಗದಿದ್ದರೆ ವೈದ್ಯರ ಶಿಫಾರಸು ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಇದರ ಪ್ರಯೋಜನ ದೊರೆಯಲಿದೆ.

- ವರದರಾಜ್, ಬ್ಯಾಲ್ಯ, ಮಧುಗಿರಿ

ನಮ್ಮ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳ ಕೊರತೆಯಿದೆ. ಶೀಘ್ರ ಈ ಕೊರತೆ ನೀಗಿಸಿ.

ಈಗಾಗಲೇ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಆದೇಶ ಬಂದಿದೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ವಾರದಲ್ಲಿ ಪ್ರಕಟಣೆ ಹೊರಡಿಸಲಾಗುವುದು.

- ಶ್ರೀನಾಥ್, ತಮ್ಮನಳ್ಳಿ, ಪಾವಗಡ

ಆಸ್ಪತ್ರೆಗಳಲ್ಲಿ ಸಾಮಾನ್ಯ ಕಾಯಿಲೆಗೂ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಅನೇಕರು ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಇತ್ತೀಚೆಗೆ ನೆಗಡಿ, ಕೆಮ್ಮು, ಜ್ವರ ಇದ್ದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್–19 ಕಾಣಿಸಿಕೊಂಡಿದೆ. ಹಾಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಈ ಬಗ್ಗೆ ಯಾವುದೇ ಭಯಪಡದೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ತಾವು ಹಾಗೂ ಇತರರು ಆರೋಗ್ಯದಿಂದ ಇರಬಹುದು.

- ಯತೀಂದ್ರ, ತುಮಕೂರು

ವೈದ್ಯಕೀಯ ಕ್ಷೇತ್ರದಲ್ಲಿ ಎಂಬಿಬಿಎಸ್‌ ಮಾಡಿದ ವಿದ್ಯಾರ್ಥಿಗಳಿಗೆ ನೀಡಿದಷ್ಟು ಮನ್ನಣೆಯನ್ನು ಆಯುರ್ವೇದ ವಿದ್ಯಾರ್ಥಿಗಳಿಗೆ ಏಕೆ ನೀಡುತ್ತಿಲ್ಲ?

ಹಾಗೇನು ಇಲ್ಲ. ಇಬ್ಬರನ್ನೂ ಸಮಾನವಾಗಿ ಸರ್ಕಾರ ನೋಡುತ್ತಿದೆ. ಅವರಿಗೆ ನೀಡುವಷ್ಟೇ ವೇತನ, ಸೌಲಭ್ಯವನ್ನು ಇವರಿಗೂ ನೀಡಲಾಗುತ್ತಿದೆ.

- ರುದ್ರಾಚಾರ್ಯ, ಶಾಗದಡು, ಬುಕ್ಕಾಪಟ್ಟಣ ಹೋಬಳಿ, ಶಿರಾ ತಾ

ಈ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುತ್ತಿಲ್ಲ. ಸಣ್ಣ ಪುಟ್ಟ ಕಾಯಿಲೆಗಳು ಬಂದರೂ ಜನ ಹೆದರುತ್ತಿದ್ದಾರೆ?

ಭಯ ಪಡಬೇಡಿ. ಎಚ್ಚರಿಕೆಯಿಂದ ಇರಿ. ರೋಗದ ಲಕ್ಷಣ ಕಂಡುಬಂದರೆ ಉದಾಸೀನ ಮಾಡಬೇಡಿ. ತಡವಾಗಿ ಬಂದಷ್ಟು ತೊಂದರೆ ಹೆಚ್ಚು. ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಿಸಲಾಗುವುದು.

- ಗುರುಮೂರ್ತಿ, ಚಿಕ್ಕನಾಯಕನಹಳ್ಳಿ

ಕೋವಿಡ್‌– 19 ದೃಢಪಟ್ಟ ರೋಗಿಗಳ ಬಗ್ಗೆ ಆರೋಗ್ಯ ಇಲಾಖೆ ತಪ್ಪು ಮಾಹಿತಿ ನೀಡುತ್ತಿದೆ. ರೋಗಿಯ ಊರಿನ ಹೆಸರು ಬದಲಾಗಿರುತ್ತದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆತಂಕ ಹೆಚ್ಚಾಗುತ್ತಿದೆ.

ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ವ್ಯಕ್ತಿಯ ಗಂಟಲು ದ್ರವ ತೆಗೆದುಕೊಳ್ಳುವಾಗ ಸರಿಯಾದ ವಿಳಾಸ ನಮೂದಿಸದಿದ್ದರೆ ಈ ರೀತಿಯ ಗೊಂದಲ ಆಗುತ್ತದೆ. ತಾಲ್ಲೂಕು ಭಾಗದಲ್ಲಿ ಗಂಟಲು ದ್ರವ ತೆಗೆದುಕೊಳ್ಳುವ ಕೇಂದ್ರಗಳಿಗೆ ಸೂಚನೆ ನೀಡಿ ಸರಿಪಡಿಸಲಾಗುವುದು.

- ಪಂಡಿತ್ ಜವಾಹರ್, ತುಮಕೂರು

ರೋಗ ಲಕ್ಷಣಗಳು ಕಂಡಬಂದರೆ ರೋಗಿಯೇ ಬಂದು ಗಂಟಲು ದ್ರವ ಪರೀಕ್ಷೆ ಮಾಡಿಸಬಹುದೆ? ಎಷ್ಟು ದಿನಕ್ಕೆ ಪರೀಕ್ಷಾ ವರದಿ ಬರುತ್ತದೆ.

ರೋಗ ಲಕ್ಷಣ ಕಂಡುಬಂದರೆ ಮೊದಲು ಆಸ್ಪತ್ರೆಗೆ ಬನ್ನಿ. ಗಂಟಲು ದ್ರವ ಪರೀಕ್ಷಾ ವರದಿ 24ರಿಂದ 48 ಗಂಟೆಯೊಳಗೆ ಬರುತ್ತದೆ. ಗಂಟಲು ದ್ರವ ಪರೀಕ್ಷೆಗೆ ಕೊಟ್ಟವರು ವರದಿ ಬರುವವರೆಗೂ ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರಬೇಕು.

- ನಂಜುಂಡಯ್ಯ, ತುಮಕೂರು

ಗಂಟಲು ದ್ರವ ತೆಗೆದುಕೊಂಡವರ ವರದಿ 15 ದಿನವಾದರೂ ಬಂದಿಲ್ಲ. ಏಕೆ?

ಎರಡು ದಿನದೊಳಗೆ ಪರೀಕ್ಷಾ ವರದಿ ಬರುತ್ತದೆ. ಜಿಲ್ಲೆಯ ಪ್ರಯೋಗಾಲಯದಲ್ಲಿ ತಾಂತ್ರಿಕ ಕಾರಣದಿಂದ ಮೂರು ದಿನ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಸರಿಹೋಗಿದೆ. ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ.

ವೈದ್ಯಕೀಯ ಕಾಲೇಜಿನಲ್ಲೂ ಕೋವಿಡ್ ಚಿಕಿತ್ಸೆ

ನಗರದ 2 ವೈದ್ಯಕೀಯ ಕಾಲೇಜುಗಳು ಕೋವಿಡ್‌– 19 ರೋಗಿಗಳಿಗೆ ಚಿಕಿತ್ಸೆ ನೀಡಲು ಒಪ್ಪಿಕೊಂಡಿವೆ. ಶೀಘ್ರ ಅಲ್ಲೂ ಚಿಕಿತ್ಸೆ ಸಿಗಲಿದ್ದು, ಅಲ್ಲಿ 500ರಿಂದ 600 ಹಾಸಿಗೆಗಳು ಲಭ್ಯವಾಗುತ್ತವೆ.

ತುರ್ತು ಚಿಕಿತ್ಸೆ ಅಗತ್ಯ ಇಲ್ಲದವರನ್ನು ಕ್ಯಾತ್ಸಂದ್ರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇರಿಸಲಾಗುತ್ತಿದೆ. ಚಿಕಿತ್ಸೆ ಅಗತ್ಯ ಇದ್ದವರನ್ನು ಮಾತ್ರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತಿದೆ. ನಗರದ ಎಲ್ಲ ಖಾಸಗಿ ಆಸ್ಪತ್ರೆಗಳು (48 ಆಸ್ಪತ್ರೆಗಳು) ಶೇ 50ರಷ್ಟು ಬೆಡ್‌ಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿವೆ. ಖಾಸಗಿ ಆಸ್ಪತ್ರೆಗಳಿಂದಲೇ 750 ಹಾಸಿಗೆಗಳು ಲಭ್ಯವಾಗುತ್ತವೆ ಎಂದು ವೀರಭದ್ರಯ್ಯ ಮಾಹಿತಿ ನೀಡಿದರು.

ಭಯ ಬಿಟ್ಟರೆ ಕೊರೊನಾ ದೂರ

* ಕಾಯಿಲೆ ಲಕ್ಷಣ ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಿ. ತಡವಾದರೆ ಅಪಾಯ

* ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಬಂದರೆ ಕಾಯಿಲೆಯಿಂದ ಗುಣಮುಖ

* ಮೃತಪಟ್ಟವರಲ್ಲಿ ತಡವಾಗಿ ಆಸ್ಪತ್ರೆಗೆ ಬಂದವರೇ ಹೆಚ್ಚು

* ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಬಂದವರಲ್ಲಿ ಶೇ 97ರಷ್ಟು ಮಂದಿ ಗುಣಮುಖ

* ಗುಂಪಿನಲ್ಲಿ ಇರಬೇಡಿ, ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ

* ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಿರಿ. ಮಾಸ್ಕ್ ಧರಿಸಿ

* ಮನೆಯಲ್ಲಿಯೇ ಇದ್ದು ಗುಣಮುಖರಾತ್ತೇವೆ ಎಂಬ ಉದಾಸೀನ ಬೇಡ

* ಕಾಯಿಲೆ ಉಲ್ಬಣಗೊಂಡ ನಂತರ ಆಸ್ಪತ್ರೆಗೆ ಬಂದರೆ ಜೀವ ರಕ್ಷಣೆ ಕಷ್ಟ

* ಬೆಂಗಳೂರು, ಇತರೆ ರಾಜ್ಯಗಳಿಂದ ಯಾರಾದರೂ ಬಂದರೆ ತಕ್ಷಣ ತಿಳಿಸಿ

* ಗಂಟಲು ಸ್ರಾವ ಪರೀಕ್ಷೆಗೆ ಒಳಪಟ್ಟವರು ವರದಿ ಬರುವವರೆಗೆ ಮನೆಯಿಂದ ಹೊರಬರಬಾರದು

* ಆದಷ್ಟು ಒಬ್ಬರೇ ಇರಲು ಪ್ರಯತ್ನಿಸಿ

* ನ್ಯೂಟ್ರಿಷಿಯನ್, ಪ್ರೋಟಿನ್, ವಿಟಮಿನ್‌–ಸಿ ಇರುವ ಆಹಾರವನ್ನು ಹೆಚ್ಚು ಸೇವಿಸಿ

* ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಹಬೆ ತೆಗೆದುಕೊಳ್ಳಿ

* ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ, ಸ್ವಯಂ ರಕ್ಷಣೆ ಅಗತ್ಯ

***

65 ಮಂದಿ ಮೇಲೆ ಎಫ್‌ಐಆರ್‌

ಗಂಟಲು, ರಕ್ತ ಪರೀಕ್ಷೆ ಮಾಡಿಸಿಕೊಂಡವರು ವರದಿ ಬರುವ ಮುನ್ನವೇ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುತ್ತಿರುವುದು ಸೋಂಕು ಹರಡಲು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ 65 ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಇದೀಗ ಕ್ವಾರಂಟೈನ್‌ ವಾಚ್‌ ಆ್ಯಪ್‌ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಆ್ಯಪ್‌ ಕ್ವಾರಂಟೈನ್‌ನಲ್ಲಿ ಇರುವವರು ಮನೆಯಿಂದ ಹೊರಬಂದ ತಕ್ಷಣ ಮಾಹಿತಿ ನೀಡಲಿದೆ. ಇದರಿಂದ ಪೊಲೀಸರು ಅವರ ಮೇಲೆ ಎಫ್‌ಐಆರ್‌ ದಾಖಲಿಸುವರು ಎಂದು ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದರು.

ಅಕ್ರಮವಾಗಿ ನಡೆಯುತ್ತಿದೆ ಕ್ಲಿನಿಕ್

ತುಮಕೂರು ಪೂರ್‌ಹೌಸ್‌ ಕಾಲೊನಿ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿ ವೈದ್ಯರೆಂದು ಹೇಳಿಕೊಂಡಿರುವ ಒಬ್ಬರು ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಇಲ್ಲಿಗೆ ಬರುವವರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು ಎಲ್ಲೆಂದರಲ್ಲಿ ಉಗಿಯುವುದು, ಕೆಮ್ಮುವುದು ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಭಯ ಉಂಟಾಗುತ್ತಿದೆ ಎಂದು ಹೆಸರು ಹೇಳಲು ಬಯಸದ ಇಬ್ಬರು ನಾಗರಿಕರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಟಿ.ಎ.ವೀರಭದ್ರಯ್ಯ, ‘ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಏನಿದು ರ‍್ಯಾ‍‍ಪಿಡ್ ಟೆಸ್ಟ್

ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಸಾಮಾನ್ಯ ಜ್ವರ, ಕೆಮ್ಮು ಬಂದವರೂ ಗಂಟಲು ದ್ರವ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಇದರಿಂದ ಪರೀಕ್ಷಾ ವರದಿಗಳು ಬರುವುದು ತಡವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರ‍್ಯಾ‍‍ಪಿಡ್ ಟೆಸ್ಟ್‌ಗೆ ಮುಂದಾಗಿದೆ.

‘ಪಲ್ಸ್‌ ಆಕ್ಸಿ ಮೀಟರ್‌’ ಬಳಸಿ ಹೀಗೆ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದವರನ್ನು ಹಳ್ಳಿ ಹಳ್ಳಿಗಳಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಗುವುದು.  ‘ಪಲ್ಸ್‌ ಆಕ್ಸಿ ಮೀಟರ್‌’  ವ್ಯಕ್ತಿಯ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಅಳೆಯುತ್ತದೆ. 20 ನಿಮಿಷಗಳಲ್ಲಿ ವರದಿ ಬರುತ್ತದೆ. ವ್ಯಕ್ತಿಯ ರಕ್ತದಲ್ಲಿ ಶೇ 94ಕ್ಕಿಂತ ಕಡಿಮೆ ಆಮ್ಲಜನಕ ಪ್ರಮಾಣ ಕಂಡುಬಂದರೆ ಅಂತಹವರನ್ನು ಕೋವಿಡ್‌– 19 ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು