ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ಗಜಲ್‌’ ತೊರೆಯಲಿ ಮಿಂದ ಸಭಿಕರು

ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಿಂದ ಗಜಲ್‌ ಕಾರ್ಯಾಗಾರ
Last Updated 1 ಫೆಬ್ರುವರಿ 2020, 13:47 IST
ಅಕ್ಷರ ಗಾತ್ರ

ತುಮಕೂರು: ‘ಗಜಲ್‌’ ಎಂದರೆ ಪರ್ಷಿಯನ್‌ ಭಾಷೆಯಲ್ಲಿ ‘ಮುಸುರೆ ತಿಕ್ಕುವವರ ಹಾಡು’ ಎಂದರ್ಥ. ಹೀಗೆ ಮನೆಗೆಲಸದ ಆಳುಗಳಿಂದ ಹೊಮ್ಮುತ್ತಿದ್ದ ಸಾಲುಗಳು ಆಳರಸರ ಆಸ್ಥಾನ ಕವಿಗಳವರೆಗೂ ತಲುಪಿದವು. ದೇಶ–ವಿದೇಶಗಳ ಭಾಷೆಗಳೊಂದಿಗೆ ಬೆರೆತು, ಆಯಾ ಪ್ರದೇಶದ ಜನಪದ ಸಾಹಿತ್ಯದ ಭಾಗವೇ ಆದವು...

ಹೀಗೆ ‘ಗಜಲ್‌’ ಹುಟ್ಟಿ ಬೆಳೆದ ’ಕಹಾನಿ‘(ಕಥೆ)ಯನ್ನು ಗಜಲ್‌ ಕವಿ ಅಲ್ಲಾಗಿರಿರಾಜ್‌ ಹೇಳುತ್ತಿದ್ದಾಗ, ಸಭಿಕರೆಲ್ಲರೂ ತದೇಕಚಿತ್ತದಿಂದ ಕೇಳುತ್ತಿದ್ದರು.

ಮನೆಯ ಮಾಲೀಕರಿಗೆ ಸಂತೋಷ ಪಡಿಸಲು ಸೃಷ್ಟಿಯಾಗುತ್ತಿದ್ದ ಉಕ್ತಿಗಳು, ಮುಂದೆ ನವಾಬರ ಹೊಗಳಿಕೆಯ ಸಾಲುಗಳಾದ ಬಗೆ, ಸೂಫಿ ಸಂತರಿಂದಾಗಿ ‘ಗಜಲ್‌ಗಳು’ ಭಕ್ತಿಪ್ರಧಾನ ಕಾವ್ಯವಾದ ಪರಿಯನ್ನು ಅವರು ಎಳೆ–ಎಳೆಯಾಗಿ ಬಿಚ್ಚಿಟ್ಟರು. ಈ ‘ಗಜಲ್‌ನ ಗತಕಾಲ’ವನ್ನು ಸ್ಮರಿಸುತ್ತ, ಗಜಲ್‌ಗಳನ್ನು ಕೇಳುತ್ತ ಕುಂತಲ್ಲೆ ಆಸಕ್ತರು ಮೈಮರೆತರು.

ಈ ಸನ್ನಿವೇಶ ಸೃಷ್ಟಿಯಾಗಿದ್ದು, ತುಮಕೂರು ವಿಶ್ವವಿದ್ಯಾನಿಲಯದ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಹಾಗೂ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗವು ವಿ.ವಿ.ಯಲ್ಲಿ ಶನಿವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಗಜಲ್‌ ಕಾರ್ಯಾಗಾರ‘ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ.

ಮನೆ ಹಾಡಿನಿಂದ ಅರಮನೆ ಸೇರಿದ ಗಜಲ್‌, ಅರಬ್‌ ದೇಶಗಳ ಜನಪದದೊಂದಿಗೆ ಬೆರೆತು ಕವ್ವಾಲಿಯಾಯಿತು. ತನ್ನ ಮೂಲಭಾಷೆ ಪರ್ಷಿಯನ್‌ಗೆ ಮತ್ತೆ ಹೋಗಿ ದ್ವಿಪದಿಯಾಯಿತು. 9ನೇ ಶತಮಾನಕ್ಕೆ ಹಿಂದೂಸ್ಥಾನಕ್ಕೆ ಬಂದ ಈ ಸಾಹಿತ್ಯ ಪ್ರಕಾರ, ಇಲ್ಲಿನ ಅರಬ್ಬಿ ಮತ್ತು ಪರ್ಶಿಯನ್‌ ಮಿಶ್ರಿತದಿಂದ ಹುಟ್ಟಿದ ಉರ್ದುವಿನಲ್ಲಿ ಮರುಹುಟ್ಟು ಪಡೆದುಕೊಂಡಿತು. ಅದನ್ನು ಇಲ್ಲಿನವರೆಲ್ಲರೂ ಒಪ್ಪಿಕೊಂಡರು ಎಂದು ‘ಗಜಲ್‌’ ನಡೆದು ಬಂದ ಹಾದಿಯನ್ನು ಅಲ್ಲಾಗಿರಿರಾಜ್‌ ತಿಳಿಸಿದರು.

ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ, ಯಾರು, ಎಲ್ಲಿಂದ ಬಂದವರು ಎಂದು ಕೇಳುತ್ತಿರುವ ಇಂದಿನ ರಾಜಕೀಯ ವಾತಾವರಣದಲ್ಲಿ ಈ ‘ಗಜಲ್‌‘ ಪ್ರಕಾರ ಮುಖ್ಯವಾಗುತ್ತದೆ ಎನ್ನುತ್ತ, ‘ಮನುಷ್ಯರ ಬೆತ್ತಲೆ ನೋಡಿ, ನೆರಳು ಬಟ್ಟೆ ತೊಟ್ಟಿತು...ಜಗದ ಹೇಸಿಗೆ ನೋಡಿ ಹಗಲು ಕಣ್ಣು ಕಳೆದುಕೊಂಡಿತು....’ ಎಂಬ ಸಾಲುಗಳ ಗಜಲ್‌ ವಾಚಿಸಿದರು.

ಗಜಲ್‌ ಗಾಯಕ ಲಕ್ಷ್ಮಣ್‌ ಬಾಲ ಅವರು ಹಾಡಿದ ಪ್ರೇಮಾಂಕುರದ ಗಜಲ್‌ಗೆ (ಪ್ಯಾರು ತೋ ಹೊನೆ ಮೇ ವಕ್ತುತೊ ಲಗತಾ ಹೈ...) ಆಸಕ್ತರು ತಲೆದೂಗಿದರು.

ಬಳಗ ಆಯೋಜಿಸಿದ್ದ ಗಜಲ್‌ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ಕವಿ, ಕವಯಿತ್ರಿಯರನ್ನು ಗೌರವಿಸಲಾಯಿತು. ಪ್ರಥಮ ಸ್ಥಾನ: ಶಿವಮೊಗ್ಗದ ಅರುಣ ನರೇಂದ್ರ, ವಾಣಿ ಭಂಡಾರಿ, ದ್ವಿತೀಯ ಸ್ಥಾನ: ರಾಮನಗರದ ಕೆ.ಎನ್‌.ವರಲಕ್ಷ್ಮೀ, ಮಂಗಳೂರಿನ ರೋಶನ್‌ ಮಿಲ್ಕಿ ಸಿಕ್ವೇರಾ, ತೃತೀಯ: ಉತ್ತರ ಕನ್ನಡದ ದಿನೇಶ್‌ ಎನ್‌.ಮಡಿವಾಳ.

ಗಜಲ್‌ ಅನ್ನು ಪ್ರೇಮಕಾವ್ಯವೆಂದೂ ಗುರುತಿಸಲಾಗಿದೆ. ಇದು ಗಟ್ಟಿಯಾದ ಅನುಭವದಿಂದ ಹುಟ್ಟುತ್ತದೆ ಎಂದು ತುಮಕೂರು ವಿ.ವಿ. ಕುಲಸಚಿವಕೆ.ಎನ್‌.ಗಂಗಾನಾಯಕ್‌ ಹೇಳಿದರು.

ಬಿಡುಗಡೆಯಾದ ಗಜಲ್‌ ಸಂಕಲನಗಳ ಕುರಿತು

ಪುಸ್ತಕ: ಮಧು ಬಟ್ಟಲು...

ಕವಿ: ಲಕ್ಷ್ಮೀಕಾಂತ ಎಲ್.ವಿ.ತುಮಕೂರು

ಪ್ರಕಟಣೆ: ಸಾತ್ವಿಕ ಪ್ರಕಾಶನ

ಬೆಲೆ: ₹100

ಪುಟಗಳು: 80

***

ಗಾಲಿಬ್‌ ನಿನಗೊಂದು ಸಲಾಂ...

ಸಂಪಾದಿತ ಕೃತಿ: ಯು.ಸಿರಾಜ್‌ ಅಹಮದ್‌, ಸಾವನ್‌ ಕೆ ಸಿಂಧನೂರು

ಪ್ರಕಟಣೆ: ಖುಷಿ ಪ್ರಕಾಶನ

ಬೆಲೆ: ₹175

ಪುಟ: 174

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT