ಬುಧವಾರ, ನವೆಂಬರ್ 13, 2019
23 °C
ಕೊರಟಗೆರೆ ಅಪಘಾತ ಪ್ರಕರಣ; ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವಿವಿಧ ಸಂಘಟನೆಗಳ ಸದಸ್ಯರು

ಖಾಸಗಿ ಬಸ್ ಸಂಚಾರ ನಿರ್ಬಂಧಿಸಿ

Published:
Updated:
Prajavani

ತುಮಕೂರು: ಕೊರಟಗೆರೆ ತಾಲ್ಲೂಕಿನ ಜೆಟ್ಟಿ ಅಗ್ರಹಾರದ ಬಳಿ ಇತ್ತೀಚೆಗೆ ನಡೆದ ಅಪಘಾತಕ್ಕೆ ಖಾಸಗಿ ಬಸ್‌ಗಳ ಅತಿವೇಗವೇ ಕಾರಣವಾಗಿದ್ದು ಖಾಸಗಿ ಬಸ್ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದ ದಲಿತ, ರೈತ ಹಾಗೂ ಕನ್ನಡ ಪರ ಸಂಘಟನೆಗಳು ಕೊರಟಗೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದವು.

ಜೆಟ್ಟಿ ಅಗ್ರಹಾರ ನಾಗರಾಜು, ಒಂದೇ ಪರವಾನಗಿಯಲ್ಲಿ ಐದಾರು ಬಸ್‌ಗಳು ಸಂಚರಿಸುತ್ತಿದ್ದರೂ ಆರ್‌ಟಿಒ ಅಧಿಕಾರಿಗಳು ನಿಯಂತ್ರಿಸುತ್ತಿಲ್ಲ ಎಂದು ದೂರಿದರು.

ವೇಗವಾಗಿ ಸಂಚರಿಸುವ ಬಸ್‌ಗಳನ್ನು ನಿಯಂತ್ರಿಸಬೇಕು. ಖಾಸಗಿ ಬಸ್‌ಗಳ ಹಾವಳಿ ಮಿತಿ ಮೀರಿದೆ. ಮೃತಪಟ್ಟವರ ಕುಟುಂಬದವರು ಬೀದಿಪಾಲಾಗಿದ್ದಾರೆ. ಕೊರಟಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಘಟಕ ಸ್ಥಾಪಿಸುವ ಮೂಲಕ ಖಾಸಗಿ ಬಸ್‌ಗಳಿಗೆ ನಿಯಂತ್ರಣ ಹಾಕಬೇಕು ಎಂದು ಒತ್ತಾಯಿಸಿದರು.

ಸಿಪಿಎಂ ಮುಖಂಡ ವಾಸುದೇವ್ ಕುಮಾರ್, 2 ವರ್ಷಗಳ ಹಿಂದೆಯೇ ಖಾಸಗಿ ಬಸ್ ನಿಷೇಧಿಸಿ ಸಾರ್ವಜನಿಕರ ಸುರಕ್ಷತೆ ಕಾಪಾಡುವಂತೆ ಪ್ರತಿಭಸಿದ್ದೆವು. ಆಗ ಪ್ರತಿಭಟಿಸಿದ್ದ 12 ಮಂದಿ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಯಿತು. ಅಂದೇ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೆ ಈಗ ಸಾವುಗಳು ಸಂಭವಿಸುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಅಪಘಾತದಲ್ಲಿ ಮೃತ ಪಟ್ಟ ಸಾಧಿಕ್ ಅವರ ತಂದೆ ರಿಜ್ವಾನ್, ‘ಅಪಘಾತದಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡಿದ್ದೇವೆ. ಬದುಕು ಕಷ್ಟವಾಗಿದೆ’ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಗಾಯಾಳುಗಳಿಗೂ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಖಾಸಗಿ ಬಸ್ ಸಂಚಾರ ನಿರ್ಬಂಧಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದರು. ಬಸ್ ಮಾಲೀಕರ ಸಭೆ ಕರೆಯಲಾಗಿದ್ದು, ಸಂಚಾರದ ಸಮಯವನ್ನು ಬದಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಖಂಡರಾದ ಬಂಡೆ ಕುಮಾರ್, ಜೆಸಿಬಿ ವೆಂಕಟೇಶ್, ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ರವಿಕುಮಾರ್, ಹಂದ್ರಾಳ್ ನಾಗಭೂಷಣ್, ನರಸಿಂಹಮೂರ್ತಿ, ರಾಜ್ಯ ರೈತ ಸಂಘದ ತಾಲ್ಲೂಕು ಸಂಚಾಲಕ ನಯಾಜ್ ಅಹ್ಮದ್, ಜನ್ಮಭೂಮಿ ನಾಗರಾಜು, ಮೊಹ್ಮದ್ ಆಸೀಂ, ಮೊಹ್ಮದ್ ಫಾರೂಕ್, ಬಿ.ಪಿ.ರಾಜು ಇದ್ದರು.

ಪ್ರತಿಕ್ರಿಯಿಸಿ (+)