ಬಿಸಿಯಿಂದ ಕಾಯುತ್ತಲೇ ಇದೆ ನೆಲ!

ಸೋಮವಾರ, ಮೇ 20, 2019
33 °C
ಪಾವಗಡಕ್ಕೆ ಅಂಟಿದೆ ಹತ್ತೆಂಟು ಸಮಸ್ಯೆಗಳು; ಬರಡು ನೆಲಕ್ಕೆ ಮತ್ತಷ್ಟು ಕಾವು

ಬಿಸಿಯಿಂದ ಕಾಯುತ್ತಲೇ ಇದೆ ನೆಲ!

Published:
Updated:
Prajavani

ಪಾವಗಡ: ಬೆಟ್ಟ, ಗುಡ್ಡ, ಕಾಡು, ಮರಳು ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಮಾರಣ ಹೋಮದಿಂದ ತಾಲ್ಲೂಕಿನಲ್ಲಿ ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.

ಜೀವಜಂತುಗಳಿಗೆ ನೆಲೆಯಾಗಿರುವ ಭೂಮಿ ಬರಡಾಗುತ್ತಿದೆ. ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣೇ ಸತ್ತರೆ ಮತ್ತೆಲ್ಲಿಗೆ? ಎಂಬ ಮಾತು ತಾಲ್ಲೂಕಿನ ಜನರಲ್ಲಿ ಪ್ರತಿಧ್ವನಿಸುವ ಸ್ಥಿತಿ ಇದೆ. ಕಳೆದ ವರ್ಷ 34 ರಿಂದ 36 ಡಿಗ್ರಿ ಇದ್ದ ತಾಪಮಾನ ಈ ವರ್ಷ 36 ರಿಂದ 39 ಡಿಗ್ರಿ ತಲುಪಿದೆ. ಈ ತಾಪಮಾನ ಹೆಚ್ಚಳದ ಪರಿಣಾಮಗಳು ವರ್ಷದಿಂದ ವರ್ಷಕ್ಕೆ ತಾಲ್ಲೂಕಿಗೆ ಎದುರಾಗುತ್ತಿರವ ಅಪಾಯಗಳನ್ನು ಬಿಚ್ಚಿಡುತ್ತಿದೆ.

ಬೆಟ್ಟ, ಗುಡ್ಡ, ಕಾಡು, ಕೆರೆ, ಹಳ್ಳ, ನದಿ ಪಾತ್ರ ಪ್ರತಿಯೊಂದೂ ಪರಿಸರದ ಪ್ರಮುಖ ಅಂಗಗಳು. ವಿಜ್ಞಾನಿಗಳು ಹೇಳುವಂತೆ ನೈಸರ್ಗಿಕ ಸಂಪನ್ಮೂಲಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಒಂದು ಕೊಂಡಿ ಕಳಚಿದರೂ ನೈಸರ್ಗಿಕ ಅಸಮತೋಲನ ಉಂಟಾಗುತ್ತದೆ. ತಾಲ್ಲೂಕಿನ ನೈಸರ್ಗಿಕ ಅಸಮತೋಲನಕ್ಕೆ ಕಾರಣ ಹುಡುಕಿ ಸರಿಪಡಿಸುವ ಕೆಲಸಕ್ಕೆ ಯುವ ಜನರು, ಸಂಘ ಸಂಸ್ಥೆಗಳು ಮುಂದಾಗಬೇಕು ಎಂಬ ಮಾತುಗಳು ಪ್ರಬಲವಾಗಿ ಕೇಳುತ್ತಿವೆ.

ಹೆಚ್ಚುತ್ತಿರುವ ಗಣಿಗಾರಿಕೆ: ತಾಲ್ಲೂಕಿನಾದ್ಯಂತ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಎಗ್ಗಿಲ್ಲದಂತೆ ನಡೆಯುತ್ತಿದೆ. ಸೋಲಾರ್ ಪಾರ್ಕ್ ಕಾಮಗಾರಿ ಆರಂಭವಾದ ನಂತರ ಉತ್ತರ ಪಿನಾಕಿನಿ ನದಿ ಪಾತ್ರ, ಕೆರೆ, ಹಳ್ಳಗಳಿಂದ ಹೆಚ್ಚು ಮರಳು ಸಾಗಣೆ ಮಾಡಲಾಗುತ್ತಿದೆ. ಕ್ರಷರ್‌ಗಳೂ ಹೆಚ್ಚಿವೆ. ಬಂಡೆ ಒಡೆಯಲು ಬಳಸುವ ಸ್ಫೋಟಕದಿಂದ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ಕಾನೂನು ರೀತಿಯಲ್ಲಿ ಕ್ರಷರ್ ಆರಂಭಿಸಲಾಗಿದೆಯೇ? ಕ್ರಷರ್ ನಡೆಸುವವರು ನಿಯಮ ಪಾಲಿಸುತ್ತಿದ್ದಾರೆಯೊ ಇಲ್ಲವೊ ಎಂಬುದಕ್ಕಿಂತ ಕ್ರಷರ್‌ಗಳಿಂದ ತಾಲ್ಲೂಕಿನ ಪ್ರಾಕೃತಿಕ ಸಂಪತ್ತಿನ ಮೇಲೆ ಆಗುವ ದುಷ್ಪರಿಣಾಮಗಳು, ಆಗು ಹೋಗುಗಳ ಬಗ್ಗೆ ಎಚ್ಚರ ವಹಿಸುವ ಅನಿವಾರ್ಯ ಎದುರಾಗಿದೆ.

ಪಟ್ಟಣದ ಗುಂಡಾರ್ಲಹಳ್ಳಿ ರಸ್ತೆ, ಚಳ್ಳಕೆರೆ ರಸ್ತೆ, ಕಲ್ಯಾಣದುರ್ಗ, ಹಿಂದೂಪುರ ರಸ್ತೆಗಳಲ್ಲಿ ಹೊಸ ಬಡಾವಣೆ ನಿರ್ಮಿಸುವ ನೆಪದಲ್ಲಿ ಪರಿಸರದ ಭಾಗವಾಗಿರುವ ಬೃಹತ್ ಗುಡ್ಡಗಳನ್ನು ನೆಲಸಮ ಮಾಡಲಾಗುತ್ತಿದೆ. ಐತಿಹಾಸಿಕ ಪಾವಗಡ ಬೆಟ್ಟದ ಬುಡವನ್ನೂ ಬಗೆದು ಹಾಕಲಾಗಿದೆ. ಬೊಮ್ಮತ್ತನಹಳ್ಳಿ ರಸ್ತೆಯ ಬಳಿ ಕುರಿ, ಮೇಕೆ, ದನಗಳು ಮೇಯಲು ಹೋಗಲು ಸಾಧ್ಯವಾಗದ ರೀತಿಯಲ್ಲಿ ಮಣ್ಣಿಗಾಗಿ ಬೆಟ್ಟವನ್ನು ಬಗೆದು ಸುತ್ತಲೂ ಕಂದಕ ನಿರ್ಮಿಸಲಾಗಿದೆ.

ಬೆಟ್ಟದಲ್ಲಿ ಉತ್ತಮವಾದ ಮೇವಿದೆ. ಆದರೆ ಬೊಮ್ಮತ್ತನಹಳ್ಳಿ ವ್ಯಕ್ತಿ ಒಬ್ಬರು ಸಾವಿರಾರು ಟಿಪ್ಪರ್‌ಗಳಷ್ಟು ಮಣ್ಣು ಮಾರುತ್ತಿದ್ದಾರೆ. ಜೆಸಿಬಿಯಲ್ಲಿ ಬೆಟ್ಟದ ಬುಡ ಬಗೆದು ಕಂದಕ ನಿರ್ಮಿಸಿದ್ದಾರೆ. ಹೀಗಾಗಿ ಬೆಟ್ಟದ ಮೇಲೆ ಜಾನುವಾರುಗಳು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಬೊಮ್ಮತನಹಳ್ಳಿಯ ಕುರಿಗಾಹಿ ಚಿಕ್ಕಜ್ಜ ಅಳಲು ತೋಡಿಕೊಂಡರು.

ಮರೀಚಿಕೆಯಾಗಿರುವ ನೀರಾವರಿ: ಮಳೆಯ ಅಭಾವ ತಾಲ್ಲೂಕಿನ ಜನರ ಪಾಲಿಗೆ ದೊಡ್ಡ ಸಮಸ್ಯೆ. ನೀರಿಗಾಗಿ ಜನರು ಕೊಳವೆ ಬಾವಿಗಳನ್ನು ಕೊರೆಸಬೇಕಿದೆ. ಮಿತಿಮೀರಿ ಕೊಳವೆ ಬಾವಿ ಕೊರೆಸುವುದೂ ಅಪಾಯಕಾರಿ. ನದಿ ಮೂಲದಿಂದ ನೀರು ತರುವುದೊಂದೇ ಕೊಳವೆ ಬಾವಿ ಕೊರೆಸುವುದನ್ನು ತಡೆಯಲು ಇರುವ ಏಕೈಕ ಪರಿಹಾರ. ಆದರೆ ತುಂಗಭದ್ರಾ, ಭದ್ರಾ ಮೇಲ್ದಂಡೆ ಯೋಜನೆಗಳು ತಾಲ್ಲೂಕಿನ ಮಟ್ಟಿಗೆ ಮರೀಚಿಕೆ ಆಗಿವೆ. ಕೇವಲ ವೇದಿಕೆಗಳ ಭಾಷಣಕ್ಕೆ ಯೋಜನೆಗಳು ಸೀಮಿತವಾಗಿವೆ ಎಂಬ ಆಕ್ರೋಶ ತಾಲ್ಲೂಕಿನ ಜನರಲ್ಲಿದೆ.

ರಾಸಾಯಿನಿಕ ಕೃಷಿ ಪದ್ಧತಿಯಿಂದ ಹಾನಿ: ತಾಲ್ಲೂಕಿನಲ್ಲಿ ಈ ಹಿಂದೆ ಶೇಂಗಾ, ತೊಗರಿ, ರಾಗಿ ಹೆಚ್ಚು ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ಕರಬೂಜ, ಟೊಮೊಟೊ, ಕಲ್ಲಂಗಡಿಯಂತಹ ವಾಣಿಜ್ಯ ಬೆಳೆಗಳತ್ತ ರೈತರು ಆಸಕ್ತಿ ತೋರುತ್ತಿದ್ದಾರೆ. ಇವುಗಳಿಗೆ ಹೆಚ್ಚು ರಾಸಾಯನಿಕ ಬಳಸಬೇಕಾಗುತ್ತದೆ. ರಾಸಾಯನಿಕಗಳು ಭೂಮಿಯ ಫಲವತ್ತತೆ ಹಾಳು ಮಾಡುವುದರೊಂದಿಗೆ, ಭೂಮಿಯ ಒಡಲನ್ನೂ ಸೇರುತ್ತಿದೆ. ಇದು ಪರೋಕ್ಷವಾಗಿ ವನ್ಯ ಜೀವಿಗಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಜಲಮೂಲಗಳಾದ ಕೆರೆ, ಕುಂಟೆ, ರಾಜಕಾಲುವೆಗಳ ಒತ್ತುವರಿ ಹೇರಳವಾಗಿಯೇ ಆಗಿದೆ. ಅರಣ್ಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕಿಡಿಗೇಡಿಗಳು ಬೆಟ್ಟಕ್ಕೆ ಬೆಂಕಿಯಿಟ್ಟು ಬೆಟ್ಟದಲ್ಲಿನ ಸಸ್ಯ ಪ್ರಭೇದಗಳನ್ನು ನಾಶ ಮಾಡುತ್ತಿದ್ದಾರೆ. ಇದರಿಂದ ವನ್ಯ ಜೀವಿಗಳು ಹಳ್ಳಿಗಳತ್ತ ಬರತೊಡಗಿವೆ. ಇತ್ತೀಚೆಗೆ ತಾಲ್ಲೂಕಿನ ಸಾಸಲುಂಟೆ ಗ್ರಾಮದಲ್ಲಿ ಕರಡಿ ವ್ಯಕ್ತಿ ಒಬ್ಬರನ್ನು ಸಾಯಿಸಿ ಕೊಂಡು ಸುಮಾರು 12 ಮಂದಿಯನ್ನು ಗಾಯಗೊಳಿಸಿದ್ದನ್ನು ಸ್ಮರಿಸಬಹುದು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !