ಒತ್ತಡವೇ ಅನಾರೋಗ್ಯದ ದಾರಿ: ಜಿ.ಬಿ.ಜ್ಯೋತಿಗಣೇಶ್‌ ಅಭಿಪ್ರಾಯ

7
ಉಚಿತ ಆರೋಗ್ಯ ತಪಾಸಣಾ ಶಿಬಿರ

ಒತ್ತಡವೇ ಅನಾರೋಗ್ಯದ ದಾರಿ: ಜಿ.ಬಿ.ಜ್ಯೋತಿಗಣೇಶ್‌ ಅಭಿಪ್ರಾಯ

Published:
Updated:
Prajavani

ತುಮಕೂರು: ಮನುಷ್ಯ ಇಂದು ಒತ್ತಡದ ಜೀವನದಿಂದ ಆರೋಗ್ಯದ ಬಗ್ಗೆ ಗಮನ ಹರಿಸದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಹಾಗಾಗಿ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

 ಮಾರುತಿನಗರದ ಆಶೀರ್ವಾದ್ ಹೆಲ್ತ್ ಕೇರ್‌ನಲ್ಲಿ ಗಾಯತ್ರಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

 ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೇವಲ 20 ವರ್ಷಕ್ಕೆ ಮಧುಮೇಹ, ರಕ್ತದೊತ್ತಡ ಕಾಣಿಸತೊಡಗಿವೆ.  ಪ್ರತಿ 2-3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದಿಂದ ಮಾತ್ರ ನಮ್ಮ ಜೀವನ ಶೈಲಿಯೂ ಉತ್ತಮವಾಗಿರಲು ಸಾಧ್ಯ ಎಂದರು.

ಉಳ್ಳವರು ದುಪ್ಪಟ್ಟು ಹಣ ವೆಚ್ಚ ಮಾಡಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರು, ಮಧ್ಯಮ ವರ್ಗದವರು ಹಾಗೂ ಸಾಮಾನ್ಯ ಕುಟುಂಬಗಳು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವಂತಹ ಸ್ಥಿತಿ ಇದೆ. ಈ ಸ್ಥಿತಿಯಲ್ಲಿರುವವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ವರದಾನವಾಗಿದೆ ಎಂದು ಹೇಳಿದರು.

ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್.ರಮೇಶ್ ಮಾತನಾಡಿ, ಸಂಘದಿಂದ ಪ್ರತಿ ವರ್ಷವೂ ಬಡವರು, ಮಧ್ಯಮವರ್ಗದವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಡಾ. ಸಾಯಿಪ್ರಸಾದ್, ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಿಬಿರವನ್ನು ನಡೆಸಲಾಗುತ್ತಿದೆ ಎಂದರು. ಶಿಬಿರದಲ್ಲಿ ಹಲವು ರೋಗಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !