ಗುರುವಾರ , ನವೆಂಬರ್ 14, 2019
18 °C
ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ

ರಕ್ಷಾ ಕ್ರಮ ಕೈಗೊಳ್ಳದ ಎಂಜಿನಿಯರ್‌ಗಳ ಮೇಲೆ ಕ್ರಮ: ಜಿಲ್ಲಾಧಿಕಾರಿ

Published:
Updated:

ತುಮಕೂರು: ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದ ಎಂಜಿನಿಯರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಮನ್ವಯ ಸಮಿತಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ರಿಂಗ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಪ್ರತಿ ದಿನ ಕನಿಷ್ಠ 10 ದೂರವಾಣಿ ಕರೆಗಳು ಬರುತ್ತಿವೆ. ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಕಾಮಗಾರಿ ಪ್ರಗತಿಯಲ್ಲಿರುವ ಜಾಗದಲ್ಲಿ ಸೂಚನಾ ಫಲಕಗಳನ್ನು ಪ್ರದರ್ಶಿಸದಿರುವುದು ಅಪಘಾತಗಳಿಗೆ ಕಾರಣವಾಗಿವೆ. ಮಳೆ ಬಂದಿರುವುದರಿಂದ ರಸ್ತೆ ಯಾವುದು, ಹಳ್ಳ ಯಾವುದು ಎಂದು ಗೊತ್ತಾಗದೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ರಿಂಗ್ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಮರುಕಳಿಸಿದರೆ ಎಂಜಿನಿಯರ್‌ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ನಿಯೋಜಿಸಿರುವ ಎಂಜಿನಿಯರ್‌ಗಳು ಗುತ್ತಿಗೆದಾರರ ಮೇಲೆ ನೆಪ ಹೇಳದೆ ಸ್ಥಳದಲ್ಲೇ ಇದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಆದ್ಯತೆ ಮೇಲೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದೇ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಅಧಿಕಾರಿಗಳು ಇನ್ನಾದರೂ ಯಾವುದೇ ನೆಪ ಹೇಳದೆ ಹಗಲಿರುಳು ಕೆಲಸ ಮಾಡಿ ನಗರದಲ್ಲಿ ಕೈಗೆತ್ತಿಕೊಂಡಿರುವ 15 ರಸ್ತೆ ಅಭಿವೃದ್ಧಿ ಕಾರ್ಯ, ಮತ್ತಿತರ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು ಎಂದು ತಿಳಿಸಿದರು.

ರಸ್ತೆ ಕಾಮಗಾರಿಗಾಗಿ ಅಗೆದಿರುವ ಮಣ್ಣನ್ನು ಹಾಗೇ ಬಿಡದೆ ಕಾಮಗಾರಿ ಪೂರ್ಣಗೊಂಡ ಕೂಡಲೇ ಮುಚ್ಚಬೇಕು. ಕಾಮಗಾರಿಯಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದರು.

ಪ್ರತಿ ಮೂರು ಸ್ಮಾರ್ಟ್ ರಸ್ತೆಗೆ ಒಬ್ಬ ಎಂಜಿನಿಯರ್‌ ನೇಮಿಸಿ ಕಾರ್ಯಾದೇಶ ನೀಡಿದ ಜಿಲ್ಲಾಧಿಕಾರಿ ಒಬ್ಬ ಇಂಜನಿಯರ್ ಒಂದು ರಸ್ತೆಯಲ್ಲಿ ಕನಿಷ್ಠ ಅರ್ಧ ದಿನ ಕಳೆದು ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಮೇಲುಸ್ತುವಾರಿ ನಡೆಸಬೇಕು ಎಂದು ಸೂಚನೆ ನೀಡಿದರು.

ಮರಗಳ ಟ್ರಿಮ್ಮಿಂಗ್‌ಗೆ ನಿರ್ದೇಶನ

ರಿಂಗ್ ರಸ್ತೆಯಲ್ಲಿ ಕಾಮಗಾರಿಗೆ ಅಡ್ಡಿ ಆಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದಾಗ ಬೆಸ್ಕಾಂ ಅಧಿಕಾರಿ ಗೋವಿಂದಪ್ಪ, ಅರಣ್ಯ ಇಲಾಖೆಯವರು ರಿಂಗ್ ರಸ್ತೆಯಲ್ಲಿರುವ ಮರಗಳ ಅನವಶ್ಯಕ ಭಾಗಗಳನ್ನು ಕತ್ತರಿಸದೆ (ಟ್ರಿಮ್ಮಿಂಗ್) ಇರುವುದರಿಂದ ಕಂಬಗಳನ್ನು ಸ್ಥಳಾಂತರಿಸಲು ವಿಳಂಬವಾಗುತ್ತಿದೆ ಎಂದರು. ಕೂಡಲೇ ಮರಗಳ ಟ್ರಿಮ್ಮಿಂಗ್ ಕೆಲಸ ಮಾಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಪ್ರತಿಕ್ರಿಯಿಸಿ (+)