ಭಾನುವಾರ, ಸೆಪ್ಟೆಂಬರ್ 22, 2019
22 °C

ಅಂಧ ವಿದ್ಯಾರ್ಥಿಯ ಶಿಕ್ಷಣಕ್ಕೆ ಆರ್ಥಿಕ ನೆರವು

Published:
Updated:
Prajavani

ಶಿರಾ: ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ ಡಿ.ಕೆ.ಕೊಟೇಶ್ ಹುಟ್ಟಿನಿಂದ ಅಂಧನಾಗಿದ್ದರೂ ಅಂಗವಿಕಲತೆಯನ್ನು ಮೆಟ್ಟಿ ನಿಂತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 501 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಮುಂದೆ ಓದಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಕೊಟೇಶ್‌ಗೆ ಶಿಕ್ಷಣದ ಮುಂದಿನ ವೆಚ್ಚ ಭರಿಸಲು ದಾನಿಗಳು ಮುಂದೆ ಬಂದಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಪುತ್ರ ಡಾ.ಸಿ.ಎಂ.ರಾಜೇಶ್ ಗೌಡ ಅವರು ಬುಧವಾರ ದ್ವಾರನಕುಂಟೆ ಗ್ರಾಮದಲ್ಲಿರುವ ಡಿ.ಕೆ.ಕೊಟೇಶನ ಮನೆಗೆ ಭೇಟಿ ನೀಡಿ ಮುಂದಿನ ಶಿಕ್ಷಣ ಪಡೆಯುವ ಬಗ್ಗೆ ಪೋಷಕರೊಂದಿಗೆ ಚರ್ಚಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಾಜೇಶ್ ಗೌಡ, ‘ಬಡತನ ಯಾರಿಗೂ ಶಾಶ್ವತವಲ್ಲ. ಜೊತೆಗೆ ಅಂಧತ್ವ ಸಾಧನೆಗೆ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಕೊಟೇಶ್ ತೋರಿಸಿ ಕೊಟ್ಟಿದ್ದಾನೆ. ಇವರಿಗೆ ಓದಬೇಕೆಂಬ ಹಂಬಲ ಇದೆ. ಈ ಪ್ರತಿಭೆಯ ಬದುಕಿನಲ್ಲಿ ಬೆಳಕು ಚೆಲ್ಲುವ ದೃಷ್ಟಿಯಿಂದ ಆರ್ಥಿಕ ನೆರವು ನೀಡಲಾಗುವುದು’ ಎಂದರು.

ಮೇ 3ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ಬಡತನ, ಅಂಗವಿಕಲತೆ ಮೆಟ್ಟಿನಿಂತ ಕೋಟೇಶ್’ ವರದಿಯನ್ನು ಗಮನಿಸಿದ ರಾಜೇಶ್ ಗೌಡ ಅವರು ಕೋಟೇಶ್‌ಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರದಿದ್ದಾರೆ.

ಮಾಜಿ ಸೈನಿಕ ಸಣ್ಣರಂಗಪ್ಪ, ಶಿಕ್ಷಕ ದ್ವಾರನಕುಂಟೆ ಲಕ್ಷ್ಮಣ್, ಮುಖಂಡರಾದ ಪ್ರಕಾಶ್‌ಗೌಡ, ಬಾಲೇಗೌಡ, ಬಿ.ಎಚ್.ಸುರೇಶ್, ಮೂಡಲಗಿರಿಯಪ್ಪ, ದೊಡ್ಮನೆ ರಂಗನಾಥ್, ಕರೇಕ್ಯಾತನಹಳ್ಳಿ ಮಹೇಂದ್ರ, ತಾವರೆಕೆರೆ ದೇವರಾಜು, ವರದಪುರ ರಾಮಣ್ಣ, ಚಂಗಾವರ ಮಾರಣ್ಣ, ರಘು, ದೇವರಾಜು ಇದ್ದರು.

ಆರ್ಥಿಕ ಸಹಾಯ: ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ನೋಡಿ ಹಲವು ಜನ ಸ್ಪಂದಿಸಿದ್ದು, ಕೊಟೇಶನ ಮುಂದಿನ ವ್ಯಾಸಂಗಕ್ಕೆ ಸಹಾಯವಾಗಲೆಂದು ಅವರ ಬ್ಯಾಂಕ್ ಖಾತೆಗೆ ₹ 25 ಸಾವಿರ ನೆರವು ಬಂದಿದೆ. ಮೂಲಕ ಅಂದ ವಿಧ್ಯಾರ್ಥಿಗೆ ಹಲವರು ಆರ್ಥಿಕ ಬಲ ನೀಡಿದ್ದಾರೆ.

Post Comments (+)