ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಬಸ್‌ಗಾಗಿ ವಿದ್ಯಾರ್ಥಿಗಳು ಪರದಾಟ

ಸಕಾಲಕ್ಕೆ ಬಾರದ ಬಸ್: ಪಾಠ, ಪ್ರವಚನ ಕಲಿಕೆಗೂ ಅಡ್ಡಿ
Last Updated 1 ಮಾರ್ಚ್ 2021, 5:37 IST
ಅಕ್ಷರ ಗಾತ್ರ

ತುರುವೇಕೆರೆ: ತರಗತಿಗಳು ಮುಗಿದ ತಕ್ಷಣ ಪಟ್ಟಣದಿಂದ ಮನೆಗೆ ಹಿಂತಿರುಗಲು ಸಕಾಲಕ್ಕೆ ಬಸ್‍ ಇಲ್ಲದೆ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಬಸ್‌ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ.

ಪಟ್ಟಣದಲ್ಲಿ ಪ್ರಾಥಮಿಕದಿಂದ ಪದವಿ ಶಿಕ್ಷಣದವರೆಗೆ 20ಕ್ಕೂ ಹೆಚ್ಚು ಶಾಲಾ, ಕಾಲೇಜುಗಳಿದ್ದು, ತಾಲ್ಲೂಕಿನ ಎಲ್ಲೆಡೆಯಿಂದ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಇದರಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಪ್ರಯಾಣಕ್ಕಾಗಿ ಬಸ್‌ಗಳನ್ನೆ ಅವಲಂಬಿಸಿದ್ದಾರೆ. ಬಸ್‌ಗಳ ಕೊರತೆಯಿಂದಾಗಿ ಈ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಏಲ್ಲಲ್ಲಿ ಸಮಸ್ಯೆ ಇದೆ: ದಂಡಿನಶಿವರ, ತಂಡಗ, ಕಲ್ಲೂರ್‌ ಕ್ರಾಸ್‍ ಮಾರ್ಗದ ತಾಳ್ಕೆರೆ-ಗೋರಾಘಟ್ಟ ಮಾರ್ಗ ದ್ವಾರನಹಳ್ಳಿ, ಅಮ್ಮಸಂದ್ರ, ದಬ್ಬೇಘಟ್ಟ, ಅರೇಮಲ್ಲೇನಹಳ್ಳಿ, ಮಾವಿನಕೆರೆ, ಮಾಯಸಂದ್ರ, ಚಿಕ್ಕೋನಹಳ್ಳಿ, ದೇವಿಹಳ್ಳಿ ಮುತ್ತಗದಹಳ್ಳಿ ಮಾರ್ಗಗಳಲ್ಲಿ ಬಸ್‍ ಕೊರತೆ ಹೆಚ್ಚಿದೆ ಎನ್ನುವುದು ಪೋಷಕರ ದೂರು.

ಕಣತೂರು, ಹುಲಿಕಲ್‍, ಸೋಪ್‍ನಹಳ್ಳಿ, ಬಿಗಿನೇಹಳ್ಳಿ ಮಾರ್ಗಗಳಲ್ಲಿ ಒಂದೇ ಬಸ್‍ ಇರುವುದು. ಆ ಬಸ್‍ ತಪ್ಪಿದರೆ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಲು ಹಾಗೂ ಮತ್ತೆ ಗ್ರಾಮಕ್ಕೆ ಮರಳಲು ಕಷ್ಟ. ಎ.ಹೊಸಹಳ್ಳಿ, ಕುಣಿಕೇನಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಬಸ್‍ ಸಂಚಾರವೇ ಇಲ್ಲ.

‘ವಿದ್ಯಾರ್ಥಿಗಳಿಗೆ ಬಸ್‍ ಸಮಸ್ಯೆಯಾದ ಕಡೆ ನಾನೇ ಖುದ್ದು ಭೇಟಿ ನೀಡಿ ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗದಂತೆ ನಮ್ಮ ಚಾಲಕರು ಮತ್ತು ನಿರ್ವಾಹಕರಿಗೆ ಕಿವಿ ಮಾತು ಹೇಳಿದ್ದೇನೆ. ಬೇಡಿಕೆ ಇದ್ದರೆ ಆ ಕಡೆ ಬಸ್‍ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಡಿಪೊ ವ್ಯವಸ್ಥಾಪಕ ಜವಲಿಂಗಪ್ಪ ಹೇಳಿದರು.

ಪಟ್ಟಣದಲ್ಲಿ ಶಾಲಾ, ಕಾಲೇಜು 4.30ಕ್ಕೆ ಮುಗಿದರೆ ಬಾಣಸಂದ್ರ ವೃತ್ತ, ಪ್ರವಾಸಿ ಮಂದಿರ, ಮಾಯಸಂದ್ರ, ತಿಪಟೂರು, ದಬ್ಬೇಘಟ್ಟ ರಸ್ತೆಗಳಲ್ಲಿ ನೂರಾರು ಸಂಖ್ಯೆಯ ಮಕ್ಕಳು ಬಸ್‍ಗಾಗಿ ಹೆಗಲ ಮೇಲೆ ಬಾರದ ಬ್ಯಾಗ್‍ ಹೊತ್ತು ಕಾಯುತ್ತಿದ್ದಾರೆ.

ಶಾಲೆ ಬಿಟ್ಟು ಗಂಟೆಯಾದರೂ ನಿಲ್ದಾಣಕ್ಕೆ ಬಸ್‍ ಬರದೆ ಮಕ್ಕಳು ಕಾಯುವಂತಾಗಿದೆ. ತಡವಾಗಿ ಬಂದ ಬಸ್‍ಗೆ ಹತ್ತಲು ಪ್ರಯಾಣಿಕರೊಂದಿಗೆ ಹೆಣಗಾಡುತ್ತಾರೆ. ಇನ್ನು ಬಸ್‍ ಬರದ ಕೆಲವು ಮಾರ್ಗಗಳಲ್ಲಿ ಪೋಷಕರೆ ತಮ್ಮ ಮಕ್ಕಳನ್ನು ನಿತ್ಯವೂ ಬೈಕ್‍ನಲ್ಲಿ ಶಾಲಾ ಕಾಲೇಜಿಗೆ ಬಿಡುವಂತಾಗಿದೆ.

ತುರುವೇಕೆರೆ-ಮಾಯಸಂದ್ರ ಮಾರ್ಗ ಮಧ್ಯಗಳಲ್ಲಿ ಬರುವ ಗೇಟ್‍ಗಳಲ್ಲಿ ಹತ್ತುವ ಮಕ್ಕಳು ಶೆಟ್ಲು ಬಸ್‍ಗಳಿಲ್ಲದೆ ಸಂಜೆಯ ತನಕ ಪರದಾಡುತ್ತಾರೆ. ಕೆಲವು ಮಾರ್ಗಗಳಲ್ಲಿ ಒಂದೇ ಬಸ್‍ ಇರುವುದರಿಂದ ಶಾಲೆ ಬಿಡುತ್ತಲೇ ಮಕ್ಕಳು ಬಸ್‍ ನಿಲ್ದಾಣದಲ್ಲಿ ಜಮಾಯಿಸುತ್ತಾರೆ. ಇನ್ನು ಸಂತೆಯ ದಿನವಾದ ಸೋಮವಾರ ಬಸ್‍ ಬಂದ ತಕ್ಷಣ ಒಂದೇ ವೇಳೆಗೆ ಹತ್ತಿಪ್ಪತ್ತು ಪ್ರಯಾಣಿಕರು, ಮಕ್ಕಳು ಬಸ್‍ ಹತ್ತಲು ಯತ್ನಿಸಿ ಸಣ್ಣ ಮಕ್ಕಳು ಗಾಯಗೊಂಡ ಉದಾಹರಣೆಗಳಿವೆ ಎನ್ನುತ್ತಾರೆ ಪೋಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT