ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಯಶಸ್ಸಿನ ಗುಟ್ಟು ಅರಿತ ಸ್ಪರ್ಧಾಕಾಂಕ್ಷಿಗಳು

ಯುಪಿಎಸ್‌ಸಿ, ಕೆಪಿಎಸ್‌ಸಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರ l ಉತ್ತಮ ಸ್ಪಂದನೆ
Last Updated 20 ಮಾರ್ಚ್ 2021, 3:37 IST
ಅಕ್ಷರ ಗಾತ್ರ

ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧತೆ ನಡೆಸಬೇಕು, ಅಭ್ಯಾಸದ ಮಾರ್ಗ ಯಾವುದು, ಏನೆಲ್ಲ ಅಧ್ಯಯನ ಮಾಡಬೇಕು, ಯಾವ ರೀತಿ ಓದಬೇಕು, ಎಷ್ಟು ಸಮಯ ಮೀಸಲಿಡಬೇಕು, ಮನಸ್ಸು ಕೇಂದ್ರೀಕರಿಸಲು ಏನಾದರೂ ಉಪಾಯಗಳಿವೆಯೆ, ಪದವಿ ಹಂತದಲ್ಲೇ ಹೇಗೆ ತಯಾರಿ ಮಾಡಿಕೊಳ್ಳಬೇಕು, ಯಶಸ್ಸಿನ ಗುಟ್ಟು ತಿಳಿಸಿ....

–ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿ ತೊಡಗಿರುವ ಅಭ್ಯರ್ಥಿಗಳು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ನೇತೃತ್ವದಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕಾರ್ಯಾಗಾರವನ್ನು ಶುಕ್ರವಾರ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಕಾರ್ಯಾಗಾರದಲ್ಲಿದ್ದ ತಜ್ಞರು, ಸಾಧಕರನ್ನು ಪ್ರಶ್ನಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಇನ್ನೂ ಹಲವರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು. ಮತ್ತೂ ಕೆಲವರು ಅಧ್ಯಯನಕ್ಕೆ ಬೇಕಾದ ಮಾರ್ಗದರ್ಶನ ಪಡೆದುಕೊಂಡರು.

ಸುಮಾರು ಐದು ಗಂಟೆಗಳಿಗೂ ಹೆಚ್ಚು ಸಮಯ ತರಬೇತಿ ಕಾರ್ಯಾಗಾರ ನಡೆಯಿತು. ಕಾಲೇಜು ವಿದ್ಯಾರ್ಥಿಗಳಂತೆ ವಿವರಗಳನ್ನು ದಾಖಲಿಸಿಕೊಂಡರು. ಅಷ್ಟೂ ಸಮಯವೂ ಗಮನ ಕೇಂದ್ರೀಕರಿಸಿದ್ದು ಕಂಡುಬಂತು.

ಐಎಎಸ್, ಎಪಿಎಸ್, ಕೆಎಎಸ್ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಸ್ಪರ್ಧಾರ್ಥಿಗಳ ಅನುಮಾನ, ಸಮಸ್ಯೆಗಳನ್ನು ಪರಿಹರಿಸಿದರು. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರೂ ತೃಪ್ತರಾಗದಿದ್ದಾಗ ಮತ್ತೆ ಮರು ಪ್ರಶ್ನಿಸಿ ವಿವರ ಪಡೆದುಕೊಂಡರು. ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅಗತ್ಯ ಮಾಹಿತಿ ಪಡೆದುಕೊಂಡ ತೃಪ್ತಿಯೊಂದಿಗೆ ಕಲಾಕ್ಷೇತ್ರದಿಂದ ಹೊರಗೆ ಹೆಜ್ಜೆ ಹಾಕಿದರು.

ವೈದ್ಯಕೀಯ, ಎಂಜಿನಿಯರಿಂಗ್ ಪದವೀಧರರು, ಸ್ನಾತಕೋತ್ತರ ಪದವಿ ಮುಗಿಸಿದವರು, ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರು, ಈಗಷ್ಟೇ ಪದವಿ ಪೂರ್ಣಗೊಳಿಸಿದವರು, ಪದವಿ ಅಭ್ಯಾಸ ಮಾಡುತ್ತಿದ್ದವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದವರು ಪಾಲ್ಗೊಂಡಿದ್ದರು. ಕಾರ್ಯಾಗಾರಕ್ಕೆ ಡಿಸಿಸಿ ಬ್ಯಾಂಕ್, ಟಿಎಂಸಿಸಿ ಬ್ಯಾಂಕ್ ಸಹಕಾರ ನೀಡಿದ್ದವು.

ಓದುವ ಮಾರ್ಗ ಮುಖ್ಯ: ಸಂಪನ್ಮೂಲ ವ್ಯಕ್ತಿ ಗಂಗಾಧರ್, ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಗುರಿ ಇದ್ದರೆ ಸಾಲದು. ಅದಕ್ಕೆ ತಕ್ಕಂತೆ ಪರಿಶ್ರಮ ಅತ್ಯಗತ್ಯ. ಹತ್ತಾರುಪುಸ್ತಕಗಳನ್ನು ಓದುವುದಷ್ಟೇ ಅಲ್ಲ.ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ವಿಚಾರ ಎಷ್ಟು ಗೊತ್ತಿದೆ, ಹೇಗೆ ಪರೀಕ್ಷೆ ಬರೆಯಬೇಕು ಎಂಬುದು ಮೊದಲು ತಿಳಿದಿರಬೇಕು. ಆಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ತಿಳಿಸಿದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಮಂಜುನಾಥ, ‘ಶಿಕ್ಷಣಕ್ಕೆ ಮನುಷ್ಯನ ಸ್ಥಿತಿಯನ್ನೇ ಬದಲಾಯಿಸುವ ಶಕ್ತಿ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಎಷ್ಟು ಅವಕಾಶಗಳಿವೆ ಅಷ್ಟೇ ಪ್ರಮಾಣದ ಸ್ಪರ್ಧೆ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಬೇಕಾದ ಮಾಹಿತಿ ಸುಲಭವಾಗಿ ಸಿಗುತ್ತದೆ. ಆದರೆ ಅದನ್ನು ಬಳಸಿಕೊಳ್ಳಲು ಸರಿಯಾದ ಮಾರ್ಗದರ್ಶನದ ಕೊರತೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT