ಸೋಮವಾರ, ಜೂನ್ 27, 2022
27 °C

‘ಅಂಬೇಡ್ಕರ್ ಯುಗ’ ಪರಿಗಣನೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಟೌನ್‍ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ 130ನೇ ಜಯಂತಿಯನ್ನು ‘ಅಂಬೇಡ್ಕರ್ ಯುಗ’ ಎಂಬ ಪರಿಕಲ್ಪನೆಯೊಂದಿಗೆ ಆಚರಿಸಲಾಯಿತು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ‘ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲಿಯೂ ಮನುಷ್ಯನನ್ನು ಸಮಾನತೆಯಿಂದ ಕಂಡ ಉದಾಹರಣೆಗಳಿಲ್ಲ. ಉತ್ಕೃಷ್ಟ, ನೀಚ, ಉತ್ತಮ ಕುಲ, ಅದಮ ಕುಲ– ಹೀಗೆ ವಿಭಾಗಿಸಿರುವುದು ಕಂಡುಬರುತ್ತದೆ. ಆದರೆ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಮಾತ್ರ ಮನುಷ್ಯರೆಲ್ಲರೂ ಒಂದೇ ಎಂಬ ಆಶಯ ಕಂಡು ಬರುತ್ತದೆ’ ಎಂದರು.

ಇಡೀ ವಿಶ್ವದಲ್ಲಿಯೇ ಅಂಬೇಡ್ಕರ್ ಅವರನ್ನು ಸಮಾನತೆಯ ಹರಿಕಾರರಾಗಿ ಜನ ಗುರುತಿಸಿ ಗೌರವಿಸುತ್ತಾರೆ. ಈ ಯುಗವನ್ನು ನಾವು ಅಂಬೇಡ್ಕರ್ ಯುಗವೆಂದು ಪರಿಗಣಿಸೋಣ. ಆಮೂಲಕ ಸಮಾನತೆಯ ಪರಿಕಲ್ಪನೆಯನ್ನು ವಿಶ್ವದೆಲ್ಲಡೆ ಸಾರೋಣ ಎಂಬ ಆಶಯ ವ್ಯಕ್ತಪಡಿಸಿದರು.

ಸಮಿತಿ ಯುವ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಗೋವಿಂದರಾಜು, ‘ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವೆಂದು ಅನೇಕ ರಾಜಕೀಯ ತಜ್ಞರು, ವಿಶ್ವವಿದ್ಯಾಲಯಗಳು ಒಪ್ಪಿಕೊಂಡಿವೆ. ವಿಶ್ವದ ಅನೇಕ ರಾಷ್ಟ್ರಗಳು ಅಂಬೇಡ್ಕರ್ ಅವರನ್ನು ಜ್ಞಾನದ ಸಂಕೇತವಾಗಿ ನೋಡುತ್ತಿದ್ದಾರೆ. ಆದರೆ ಭಾರತದಲ್ಲಿ ಜಾತಿಯ ಮೂಲಕ ಗುರುತಿಸಲಾಗುತ್ತಿದೆ’ ಎಂದು ವಿಷಾದಿಸಿದರು.

ಮುಖಂಡರಾದ ಹೆಗ್ಗರೆ ಕೃಷ್ಣಪ್ಪ, ಜಿ.ಆರ್.ಗಿರೀಶ್, ಜಿ.ಸಿ.ಸಿದ್ದಲಿಂಗಯ್ಯ, ಟಿ.ಆರ್.ಗುರುಪ್ರಸಾದ್, ಜಿ.ಆರ್.ಸುರೇಶ್, ಎ.ಎಸ್.ರಾಜ್, ಆನಂದ್, ಯಲ್ಲೇಶಗೌಡ, ಟಿ.ಮನು, ಟಿ.ಕೆ.ಮೋಹನ್‍ ಕುಮಾರ್, ಶಿವರಾಜು, ಮಂಜು, ಈರಣ್ಣ, ಕೆಸರುಮಡು ಗೋಪಾಲ್, ಶಿವರಾಜು, ರಂಗಸ್ವಾಮಯ್ಯ, ತ್ಯಾಗರಾಜು, ವಸಂತಕುಮಾರ್, ಅಣ್ಣಪ್ಪ, ಸಿದ್ದಲಿಂಗಯ್ಯ, ಬೋರಯ್ಯ, ಕೆ.ಟಿ.ಸಿದ್ದರಾಜು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು